“ಕೌದಿ’ ಹೊಲಿಯುವುದು ನಾಡಿನ ಸಾಂಪ್ರದಾಯಿಕ ಕಲೆ. ಹೆಣ್ಣುಮಕ್ಕಳ “ಕೌದಿ ಕಲೆ’ ಭಾರತದ ಬಹುತ್ವದ ಸಂಕೇತ. ಕೈ ಹೊಲಿಗೆ ಗ್ರಾಮೀಣ ಭಾಗದ ಒಂದು ಹವ್ಯಾಸದ ಕಸುಬು.
ಇದು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ. ಒಂದು ಕಡೆ ಬುಡಬುಡಕಿ ಜನಾಂಗದ ಮಹಿಳೆಯರು ಓಣಿ ಓಣಿಗಳಲ್ಲಿ ಹೋಗಿ “ಕೌದಿ’ ಹೊಲಿಸ್ತೀರೇನಮ್ಮ ಎಂದು ಕೂಗಿ ಕೇಳುತ್ತಿದ್ರು. ಮನೆಯಲ್ಲಿ ಹೆಚ್ಚು ಹಳೆಯ ಬಟ್ಟೆಗಳನ್ನು ನೀಡಿದರೆ ಡಬಲ್ ಕೌದಿ, ಸ್ವಲ್ಪ ಬಟ್ಟೆ ಕಡಿಮೆ ನೀಡಿದರೆ ಸಿಂಗಲ್ ಕೌದಿ ಹೊಲಿದು ಕೊಡುತ್ತಿದ್ದರು. ಒಂದು ಕೌದಿಗೆ 100ರಿಂದ 150 ರೂಪಾಯಿ ಪಡೆಯುತ್ತಿದ್ದರು. ಇನ್ನೊಂದು ಕಡೆ ಮನೆಯ ಅಜ್ಜಿಯೇ ಉಟ್ಟು ಬಿಟ್ಟ ಹಳೇ ಬಟ್ಟೆಗಳಿಂದ ತಾವೇ ಕೈಯಿಂದ ಹೊಲಿದು ಕೌದಿ ತಯಾರಿಸಿಕೊಳ್ಳುತ್ತಿದ್ದರು.
ನೆನಪುಗಳ ಸಾಗರ
ಬೇರೆ ಬೇರೆ ಬಟ್ಟೆಯ ತುಂಡುಗಳಿಂದ ಹೊಲಿದು ಮಾಡಿದ ದಪ್ಪನಾದ ಹೊದಿಕೆ. ಕೌದಿಯ ವಿಶೇಷತೆಯೆಂದರೆ ಅಮ್ಮನ ಹರಿದ ಸೀರೆ, ಅಪ್ಪನ ಮಾಸಿದ ಪಂಚೆ, ಅಕ್ಕನ ಲಂಗ, ಅಣ್ಣನ ಅಂಗಿ ಇವೆಲ್ಲಾ ವಸ್ತುಗಳಿಂದ ಕತ್ತರಿಸಿ ಕೈಯಿಂದ ಹೊಲಿದು ತಯಾರಿಸಿದ ಬಣ್ಣ ಬಣ್ಣದ ಕೌದಿ. ಕೌದಿ ಹೊದಿಕೆ ಅಷ್ಟೇ ಅಲ್ಲ. ಅದು ಭಾವನೆಗಳ ಬೆಸುಗೆ. ನೆನಪುಗಳ ಸಾಗರ. ಕೌದಿಯಲ್ಲಿ ಕೂಡಿದ ತುಂಡು ವಸ್ತುಗಳು ಒಂದೊಂದು ಕಥೆ ಹೇಳುತ್ತವೆ. ಹಳೆಯ ನೆನಪುಗಳನ್ನ ಕೆದಕುತ್ತದೆ. ಅಜ್ಜ ಅಜ್ಜಿಯ, ಅಣ್ಣ ತಮ್ಮ, ಅಕ್ಕ ತಂಗಿ, ಒಡನಾಟ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ರಾತ್ರಿ ಮಲಗುವಾಗ ನನಗೆ ಜಾಸ್ತಿ ಬೇಕು, ನನಗೆ ಜಾಸ್ತಿ ಬೇಕು ಎಂದು ಕೌದಿಗಾಗಿ ಜಗಳವಾಡುತ್ತಿದ್ದ ಬಾಲ್ಯದ ದಿನಗಳನ್ನ ನಾವು ನೀವು ಎಂದಾದರೂ ಮರೆಯೋದುಂಟೆ.
ಕೌದಿ ಕಲೆ ಹಳೆಯ ಕಸುಬು ನೀಜ. ಆದರೆ ಕೌದಿ ಬೇಸಗೆಯಲ್ಲಿ ತಣ್ಣನೆಯ, ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ. ಬಾಲ್ಯದ ಜೀವನದ ಹಳೆಯ ನೆನಪುಗಳನ್ನ ತೆರೆದಿಡುತ್ತದೆ. ಈಗ ಇಂತಹ ಗ್ರಾಮೀಣ ಕಲೆ ಮರೆಯಾಗುತ್ತಿದೆ. ಆಧುನಿಕ ಯುಗದಲ್ಲಿ ಮೆಶಿನ್ ಭರಾಟೆ ಮುಂದೆ, ಕೌದಿ ಹೊಲಿಯುವರ ಬದುಕು ಅತಂತ್ರವಾಗಿದೆ. ಆಳುವ ಸರಕಾರಗಳು ಈವರೆಗೂ ಕೂಡ ಇವರತ್ತ ಗಮನಹರಿಸದಿರುವುದು ವಿಪರ್ಯಾಸದ ಸಂಗತಿ.
ನಬಿ. ಆರ್.ಬಿ. ದೋಟಿಹಾಳ
ಕುಷ್ಟಗಿ, ಕೊಪ್ಪಳ