ಬೆಂಗಳೂರು: ಶಾಸಕ ಬಸನಗೌಡ ಯತ್ನಾಳ್ ರವರು ತಮ್ಮ ವೈಯಕ್ತಿಕ ಹಿತಕ್ಕಾಗಿ ಬೀದಿಯಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಹಾಗೂ ಸ್ವಂತ ಲಾಭಕ್ಕಾಗಿ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಕಂಡ ಕಂಡಲ್ಲಿ ಹೇಳಿಕೆ ನೀಡುವುದು ಬಿಜೆಪಿಯ ಸಂಸ್ಕೃತಿಯಲ್ಲ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.
ಯತ್ನಾಳ್ ಹೇಳಿಕೆ ವಿರೋಧಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಶ್ನೆಯೇ ಇಲ್ಲ. ನಮ್ಮ ನಾಯಕ ಬಿ.ಎಸ್ ಯಡಿಯೂರಪ್ಪನವರೇ 5 ವರ್ಷ ಅಧಿಕಾರ ಪೂರ್ಣಗೊಳಿಸಲಿದ್ದಾರೆ. ಯತ್ನಾಳ್ ರವರು ನೀಡುತ್ತಿರುವ ಪಕ್ಷ ದ್ರೋಹದ ಹೇಳಿಕೆಗಳನ್ನು ಸದಾನಂದ ಗೌಡರವರು, ಈಶ್ವರಪ್ಪ ಸೇರಿದ್ದಂತೆ ಹಲವು ಬಿಜೆಪಿ ಪಕ್ಷದ ಹಿರಿಯ ನಾಯಕರು ವಿರೋಧಿಸಿದ್ದಾರೆ. ಹೀಗಿದ್ದರೂ ತಮ್ಮ ಹಳೇ ಚಾಳಿಯನ್ನೇ ಮುಂದುವರೆಸಿ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿರುವುದು ಅವರ ಕೆಟ್ಟ ಬುದ್ದಿಯನ್ನ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಕೇಂದ್ರ ಸಚಿವ ಸದಾನಂದಗೌಡ ನನಗಿಂತ ಸೀನಿಯರ್ ಅಲ್ಲ- ಯತ್ನಾಳ ತಿರುಗೇಟು
ಬಿಜೆಪಿ ಪಕ್ಷಕ್ಕಾಗಿ ಹಾಗೂ ಪಕ್ಷದ ಏಳಿಗೆಗಾಗಿ ನಾನು ಸೇರಿದಂತೆ ಹಲವು ನಾಯಕರು ಕಳೆದ ಮೂವತ್ತು ವರ್ಷಗಳಿಂದ ಶಿಸ್ತಿನ ಸಿಪಾಯಿಗಳಾಗಿ ಕೆಲಸ ನಿರ್ವಹಿಸಿದ್ದೇವೆ. ಇಂತಹ ಪಕ್ಷದ ನಾಯಕರ ವಿರುದ್ಧ 30 ವರ್ಷದಲ್ಲಿ ಎಂದಾದರೂ ನಾವು ಈ ರೀತಿಯ ಹೇಳಿಕೆ ನೀಡಿದ್ದೇವಾ? ಬಿಜೆಪಿ ಪಕ್ಷ ನಮಗೆ ಒಂದು ಕುಟುಂಬವಿದ್ದಂತೆ. ವೈಯಕ್ತಿಕ ಹಾಗೂ ಆಂತರಿಕವಾಗಿ ಏನೇ ಸಮಸ್ಯೆಗಳು ಇದ್ದರೆ ಪಕ್ಷದ ವರಿಷ್ಠರು ಹಾಗೂ ಪಕ್ಷದ ಚೌಕಟ್ಟಿನ ಒಳಗೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅದ್ದನ್ನ ಬಿಟ್ಟು ದಿನ ನಿತ್ಯ ಬೀದಿ ಬೀದಿಯಲ್ಲಿ ಪಕ್ಷದ ವಿರುದ್ದ ಮಾತನಾಡುವುದು ಪಕ್ಷ ದ್ರೋಹದ ಕೆಲಸ ಎಂದರು.
ಯತ್ನಾಳ್ ಅವರ ಹೇಳಿಕೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ. ಸೂಕ್ತ ಸಂದರ್ಭದಲ್ಲಿ ವರಿಷ್ಠರು ಅವರ ಬಗ್ಗೆ ನಿರ್ಧಾರ ತಗೆದುಕೊಳ್ಳುತ್ತಾರೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದರು.