ಪುಣೆ: ಕಾತ್ರಜ್ ಸಚ್ಚಾಯಿ ಮಾತಾ ನಗರದ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಸನ್ನಿಧಾನದಲ್ಲಿ ಮಕರ ಸಂಕ್ರಾಂತಿ ಉತ್ಸವ ಆಚರಣೆಯು ಜ. 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂ ಭಣೆಯಿಂದ ಜರಗಿತು.
ಸೂರ್ಯ ದೇವನು ತನ್ನ ಪಥದಲ್ಲಿ ದಿಕ್ಕನ್ನು ಬದಲಾಯಿಸುವ, ಉತ್ತಾರಾಯಣ ಪ್ರಾರಂಭದ ಪ್ರಾಕೃತಿಕವಾಗಿ ಬದಲಾವಣೆಯ ಒಂದು ಪರ್ವ ದಿನವು ಪ್ರತಿ ವರ್ಷ ಜ. 14ರಂದು ಬರುತ್ತದೆ. ಅಲ್ಲದೆ ಈದಿನ ಮಕರ ಸಂಕ್ರಮಣದ ಶುಭ ದಿನವಾಗಿಯು ತುಂಬಾ ವಿಶೇಷವಾಗಿದೆ. ಶಬರಿ ಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಜ್ಯೋತಿ ದರ್ಶನದ ಮೂಲಕ ಅಯ್ಯಪ್ಪ ಸ್ವಾಮೀ ಭಕ್ತರಿಗೆ ಕಾಣಿಸಿಕೊಳ್ಳುತ್ತಾನೆ ಎಂಬ ಪ್ರತೀತಿ ಇದೆ.
ಈ ಶುಭ ದಿನದಂದು ಪುಣೆ ಕಾತ್ರಜ್ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ಹರೀಶ ಭಟ್ ಅವರ ನೇತೃತ್ವದಲ್ಲಿ ಕ್ಷೇತ್ರದ ಆರಾಧ್ಯ ದೇವರಾದ ಶ್ರೀ ಅಯ್ಯಪ್ಪ ಸ್ವಾಮೀಗೆ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಮತ್ತು ಮಹಾಪೂಜೆ, ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಅಲ್ಲದೆ ಭಕ್ತ ವೃಂದದವರಿಂದ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಜೆ 6.45ರಿಂದ ಶ್ರೀ ಕ್ಷೇತ್ರ ಶಬರಿ ಮಲೆಯ ಜ್ಯೋತಿ ದರ್ಶನದ ನೇರ ಪ್ರಸಾರವನ್ನು ದೇವಸ್ಥಾನದಲ್ಲಿ ಹಾಕಲಾದ ವಿಶಾಲ ಪರದೆಯಲ್ಲಿ ಸೇರಿದ ನೂರಾರು ಸಂಖ್ಯೆಯ ಅಯ್ಯಪ್ಪ ಭಕ್ತರು ನೋಡಿ ಕಣ್ತುಂಬಿಕೊಂಡರು. ರಾತ್ರಿ 8 ರಿಂದ ದೇವರಿಗೆ ಮಹಾಪೂಜೆ, ಮಹಾ ಮಂಗಳಾರತಿ ಜರಗಿತು. ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ಮಹಿಳಾ ಸಂಘದವರಿಂದ ಮಕರ ಸಂಕ್ರಮಣದ ಪರ್ವ ಕಾಲದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬಂದಿರುವ ಅರಶಿನ ಕುಂಕುಮ ಕಾರ್ಯಕ್ರಮ ನೆರವೇರಿತು. ನಂತರ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಿತು.
ಅನ್ನಸಂತರ್ಪನೆಯು ಪ್ರಶಾಂತ್ ಆಳ್ವ ಮತ್ತು ಪ್ರವೀಣ್ ಆಳ್ವ ಅವರ ಸೇವಾರ್ಥಕವಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪುಣೆಯ ತುಳು ಕನ್ನಡಿಗರು, ಅಯ್ಯಪ್ಪ ಸಾಮಿ ಭಕ್ತರು, ಮಹಿಳೆಯರು ಮಕ್ಕಳು ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿ ಹರಿಹರ ಪುತ್ರ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವಿಶ್ವಸ್ತ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶ್ರೀ ಆಯ್ಯ±³ ಸ್ವಾಮಿ ಸೇವಾ ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶ್ರೀ ಅಯ್ಯಪ್ಪ ಸ್ವಾಮೀ ಮಹಿಳಾ ಮಂಡಳಿಯ ಅಧ್ಯಕ್ಷೆ ಮತ್ತು ಪದಾಧಿಕಾರಿಗಳು, ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಚಿತ್ರ-ವರದಿ:ಹರೀಶ್ ಮೂಡಬಿದ್ರೆ ಪುಣೆ