Advertisement

Katpadi: ವೈರಲ್‌ ಸಾಂಗ್‌ ಹುಟ್ಟಿದ ರಸ್ತೆ ಹೊಂಡಗಳಿಗೆ ಮುಕ್ತಿ ಯಾವಾಗ?

05:38 PM Oct 21, 2024 | Team Udayavani |

ಕಟಪಾಡಿ: ರೋಡಲೀ ಸಾಗುತಾ.. ಹೊಂಡವಾ ದಾಟಲು.. ಜೀವವೇ ಬಾಯಿಗೆ ಬಂದಂತಿದೆ.. ಎಂಬ ರಸ್ತೆ ಹೊಂಡಗಳ ಕುರಿತ ಹಾಡು ಭಾರಿ ವೈರಲ್‌ ಆಗಿದೆ. ಆದರೆ, ಈ ಹಾಡಿಗೆ ಮೂಲವಾದ ಕಟಪಾಡಿ -ಕುರ್ಕಾಲು – ಶಂಕರಪುರದಿಂದ ಶಿರ್ವ ಸಂಪರ್ಕ ರಸ್ತೆಯ ಹೊಂಡಗಳು ಮಾತ್ರ ಇನ್ನೂ ದುರಸ್ತಿ ಕಂಡಿಲ್ಲ.

Advertisement

ಹಾಡುಗಾರ ಮದನ್‌ ಮಣಿಪಾಲ್‌ ಅವರು ಸಿನಿಮಾ ಹಾಡಿನ ಅನುಕರಣೆಯಾಗಿ ಬರೆದ ಹಾಡಿನಲ್ಲಿ ಈ ರಸ್ತೆಯನ್ನೇ ಉಲ್ಲೇಖೀಸಿದ್ದರು. ಅವರು ಕುರ್ಕಾಲು ಜಯನಗರದ ನಿವಾಸಿ. ಈ ಹಾಡು ಹಿಟ್‌ ಆದರೂ ರಸ್ತೆ ಮಾತ್ರ ರಿಪೇರಿ ಆಗಲೇ ಇಲ್ಲ. ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ ನಿಂದ ಪೂರ್ವಕ್ಕೆ ತಿರುವು ಪಡೆದುಕೊಂಡ ಕೂಡಲೇ ನರಕ ಸದೃಶ ಹೊಂಡಗುಂಡಿಗಳು ವಾಹನ ಚಾಲಕರನ್ನು, ಪ್ರಯಾಣಿಕರನ್ನು ಭಯಭೀತಗೊಳಿಸುತ್ತವೆ.

ಅಂದು ಹಾಡು ಜನಪ್ರಿಯವಾಗುತ್ತಿದ್ದಂತೆಯೇ ಎಚ್ಚೆತ್ತ ಲೋಕೋಪಯೋಗಿ ಇಲಾಖೆಯು ವೆಟ್‌ ಮಿಕ್ಸ್‌ ಅಳವಡಿಸಿ ತಾತ್ಕಾಲಿಕ ತೇಪೆ ಹಾಕಿತ್ತು. ಆದರೆ, ಈಗ ವೆಟ್‌ ಮಿಕ್ಸ್‌ ಎಲ್ಲೋ ಕಳೆದುಹೋಗಿದೆ. ರಸ್ತೆಯ ಹೊಂಡಗಳು ಮತ್ತೆ ಬಾಯ್ದೆರೆದಿವೆ. ಜತೆಗೆ ರಸ್ತೆಯಿಂದ ಮೇಲೇಳುವ ಧೂಳು, ಮಳೆ ಬಂದರೆ ಜಾರುವ ಕೆಸರು ವಾಹನ ಸವಾರರ ನಿದ್ದೆಗೆಡಿಸಿವೆ.

ಕೆಲವೊಮ್ಮೆ ಹೊಂಡಗಳು ಗಮನಕ್ಕೆ ಬಾರದೆ ಕೆಲ ದ್ವಿಚಕ್ರ ಮತ್ತು ರಿಕ್ಷಾ ಸಹಿತ ಕೆಲ ಲಘು ವಾಹನಗಳ ಬಿಡಿಭಾಗಗಳು ಕಳಚಿಕೊಂಡಿವೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ರಸ್ತೆಯನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಾಲಕರು, ಗ್ರಾಮಸ್ಥರ ಆಕ್ರೋಶ ಹೀಗಿದೆ
ನನ್ನ ಕಣ್ಣೆದುರೇ ಮೂರು ಬೈಕ್‌ ಸವಾರರು ಬಿದ್ದಿದ್ದಾರೆ. ಅವರನ್ನು ಚಿಕಿತ್ಸೆಗೆ ಕರೆದೊಯ್ದಿಯ್ದೆ. ಮಳೆಗಾಲದಲ್ಲಿ ಹೇಗೋ ಸಹಿಸಿಕೊಂಡಿದ್ದಾಯಿತು. ನಿತ್ಯ ಅಪಘಾತಗಳ ತಾಣವಾಗಿರುವ ಕಟಪಾಡಿ-ಕುರ್ಕಾಲು-ಶಂಕರಪುರ ರಸ್ತೆಯ ಗುಂಡಿಗಳಿಗೆ ಇನ್ನಾದರೂ ಪರಿಹಾರ ಕಲ್ಪಿಸಲಿ.
– ಭಾಸ್ಕರ್‌ ಪೂಜಾರಿ, ರಿಕ್ಷಾ ಚಾಲಕರು, ಕಟಪಾಡಿ

Advertisement

ಇಲ್ಲಿ ವಾಹನ ಸವಾರರಿಗೂ ಸಂಚಾರವೇ ಸವಾಲಾಗಿದೆ. ಮಳೆಗಾಲ ಮುಗಿದರೂ ರಸ್ತೆ ಹೊಂಡ ಮುಚ್ಚುವಲ್ಲಿ ಸಂಬಂಧಪಟ್ಟ ಇಲಾಖೆಯು ಉದಾಸೀನತೆ ತೋರುತ್ತಿದೆ. ಪ್ರತಿಯೊಬ್ಬರ ಜೀವವೂ ಮೌಲ್ಯಯುತವಾಗಿದ್ದು, ಇದನ್ನು ಆಡಳಿತ ಅರ್ಥ ಮಾಡಿಕೊಳ್ಳಬೇಕು.
– ರಾಜೇಶ್‌ ಪೂಜಾರಿ, ಗ್ರಾ.ಪಂ. ಸದಸ್ಯರು, ಕಟಪಾಡಿ

ಸರಕಾರಕ್ಕೆ ವಾಹನ ತೆರಿಗೆ, ರಸ್ತೆ ತೆರಿಗೆ, ಪೆಟ್ರೋಲ್‌ ಮೂಲಕ ತೆರಿಗೆ ಕಟ್ಟುತ್ತೇವೆ. ವಿಮೆ ಮಾಡಿಸಿ ಅದಕ್ಕೂ ಜಿಎಸ್‌ಟಿ ಕಟ್ಟಲಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿರೆ ಪೊಲೀಸರು ಕೇಸ್‌ ಹಾಕುತ್ತಾರೆ. ಆದರೆ ಸುರಕ್ಷಿತವಲ್ಲದ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ಯಾರು ಹೊಣೆ?
-ಸದಾಶಿವ ಬಂಗೇರ, ಕುರ್ಕಾಲು

ಅಧಿಕಾರಿಗಳು ಏನಂತಾರೆ?
ರಸ್ತೆಯ ಗುಂಡಿಗಳನ್ನು ಮುಚ್ಚಲು ಸಿದ್ಧತೆ ನಡೆಸಲಾಗಿದೆ. ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಡಾಮರು ಮಿಶ್ರಿತ ಪ್ಯಾಚ್‌ ವರ್ಕ್‌ ನಡೆಸಿದಲ್ಲಿ ಮಳೆ ಬಿದ್ದ ಕೂಡಲೇ ಹಾನಿಗೀಡಾಗುತ್ತದೆ. ಮಳೆಯ ಪ್ರಭಾವ ನಿಂತ ಕೂಡಲೇ ಡಾಮರು ಪ್ಯಾಚ್‌ ವರ್ಕ್‌ ನಡೆಸಿ ರಸ್ತೆ ಸುರಕ್ಷತೆಯನ್ನು ಕೈಗೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಪ್ರಭಾರ ಎಇಇ ಮಂಜುನಾಥ್‌ ಶೇಪುರ್‌ ಹೇಳಿದ್ದಾರೆ.

-ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next