Advertisement

ಪ್ರಚಾರದ ಗೀಳಿನಿಂದ ರಾಹುಲ್‌ ಬಗ್ಗೆ ಕಟೀಲ್‌ ಹೇಳಿಕೆ

10:11 AM Oct 22, 2021 | Team Udayavani |

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಮಾತಿಗೆ ಅವರದ್ದೇ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಇದರಿಂದ ಹತಾಶೆಯಾಗಿರುವ ಅವರು ಪ್ರಚಾರದ ಗೀಳಿನಿಂದ ಕಾಂಗ್ರೆಸ್‌ ನಾಯಕರ ಮೇಲೆ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಅಲ್ಲದೇ, ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿರುವ ಅವರಿಗೆ ಕಾಂಗ್ರೆಸ್‌ ಪಕ್ಷದಿಂದ ಬೇಕಾದರೆ ವೈದ್ಯರಿಂದ ತಪಾಸಣೆ ಮಾಡಿಸಲಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಶಾಸಕ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ನಡೆದ ಡ್ರಗ್ಸ್‌ ದಂಧೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರೇ ಅಧಿಕ ಸಂಖ್ಯೆಯಲ್ಲಿ ಬಂಧನವಾಗಿದ್ದಾರೆ. ಮೇಲಾಗಿ ಲಾಕ್‌ಡೌನ್‌ ಸಮಯದಲ್ಲೂ ಡ್ರಗ್ಸ್‌ ದಂಧೆ ನಡೆದಿದೆ. ಇತ್ತೀಚೆಗೆ ಆರ್‌ ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಕೂಡ ದೇಶದಲ್ಲಿ ಡ್ರಗ್ಸ್‌ ಬಳಕೆ ಅಧಿಕವಾಗಿದೆ ಎಂದು ಹೇಳಿದ್ದಾರೆ.

ಇದು ಗೃಹ ಸಚಿವ ಅಮಿತ್‌ ಶಾ ಅಸಮರ್ಥ ಎಂದು ಭಾಗವತ್‌ ಅವರ ಹೇಳಿಕೆಯೇ ದೃಢಪಡಿಸುತ್ತದೆ. ರಾಹುಲ್‌ ಗಾಂಧಿ ಅವರನ್ನು ಡ್ರಗ್‌ ಪೆಡ್ಲರ್‌ ಎಂದು ಟೀಕಿಸಿರುವ ಕಟೀಲ್‌, ಡ್ರಗ್ಸ್‌ ದಂಧೆ ಅಧಿಕವಾಗಿರುವ ಅಮಿತ್‌ ಶಾ ಅವರನ್ನು ಪ್ರಶ್ನಿಸುವ ಧೈರ್ಯವನ್ನಾದರೂ ಮಾಡಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಗುಜರಾತ್‌ನಲ್ಲಿ ಅದಾನಿಯ ಖಾಸಗಿ ಬಂದರಿನಲ್ಲಿ ಸಾಕಷ್ಟು ಬಾರಿ ಮಾದಕ ದ್ರವ್ಯ ಪತ್ತೆಯಾಗಿದೆ. 1.75 ಲಕ್ಷ ಕೋಟಿ ರೂ. ಮೌಲ್ಯದ 25 ಸಾವಿರ ಕೆಜಿ ಹೆರಾಯಿನ್‌ ಮತ್ತು 21 ಸಾವಿರ ಕೋಟಿ ರೂ. ಮೌಲ್ಯದ ಮೂರು ಸಾವಿರ ಕೆಜಿ ಕೊಕೇನ್‌ ಪತ್ತೆಯಾಗಿದೆ. ಇದೆಲ್ಲವೂ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಪೂರೈಕೆ ಆಗುತ್ತಿದೆ ಎಂದು ದೃಢಪಟ್ಟಿದೆ. ನ್ಯಾಕ್ರೋಟಿಕ್ಸ್‌ ಕಂಟ್ರೋಲ್‌ ಬೋರ್ಡ್‌ನಲ್ಲಿ ಡಿಜಿ ಹುದ್ದೆ ಖಾಲಿ ಇದ್ದು, ಕೇಂದ್ರ ಸರ್ಕಾರ ಆ ಹುದ್ದೆಯನ್ನು ಏಕೆ ತುಂಬಿಲ್ಲ. ಸಿಬಿಐ, ಇಡಿ ಸಂಸ್ಥೆಗಳನ್ನು ರಾಜಕೀಯ ದ್ವೇಷಕ್ಕೆ ಬಳಕೆ ಮಾಡುವ ಬದಲು ಇಂತಹ ಅಕ್ರಮ ವಿರುದ್ಧ ಏಕೆ ಉಪಯೋಗಿಸುತ್ತಿಲ್ಲ. ಈ ಕುರಿತು ಮಾತನಾಡಲು ಕಟೀಲ್‌ಗೆ ಶಕ್ತಿ ಇದೆಯೇ ಎಂದು ಪ್ರಶ್ನಿಸಿದರು.

Advertisement

ರಾಹುಲ್‌ ಗಾಂಧಿ ಬಗ್ಗೆ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದರು ಎಂಬ ಬಿಜೆಪಿ ವಕ್ತಾರ ಗಣೇಶ ಕಾರ್ಣಿಕ್‌ ಹೇಳಿಕೆಗೂ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್‌ ಖರ್ಗೆ, ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ “ಬೂಟ್‌ ನೆಕ್ಕುವ ಕೆಲಸ’ ಮಾಡಿಲ್ಲ ಎಂದು ಇದೇ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದರು. ಈ ಬಗ್ಗೆ ಗಣೇಶ ಕಾರ್ಣಿಕ್‌ ಏನು ಉತ್ತರ ಕೊಡುತ್ತಾರೆ ಎಂದು ಕುಟುಕಿದರು.  ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಡಾ| ಕಿರಣ್‌ ದೇಶಮುಖ, ಚೇತನ ಗೋನಾಯಕ, ಈರಣ್ಣ ಝಳಕಿ ಇದ್ದರು.

ಮುಖ್ಯಮಂತ್ರಿ ಹೇಳಿಕೆ ಮೂಗಿಗೆ ತುಪ್ಪ ಸರುವ ಕೆಲಸ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಮೂರು ಸಾವಿರ ಕೋಟಿ ರೂ. ಅನುದಾನ ಕೊಡಲಾಗುತ್ತದೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಮೂಗಿಗೆ ತುಪ್ಪ ಸರುವ ಕೆಲಸವೆಂದು ಪ್ರಿಯಾಂಕ್‌ ದೂರಿದರು.  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಕೆಆರ್‌ಡಿಬಿ ಕಾಮಗಾರಿಗಳೇ ಪ್ರಗತಿ ಕಾಣುತ್ತಿಲ್ಲ. ಈಗಿರುವ ಅನುದಾನ ಖರ್ಚು ಮಾಡಲು ಆಗುತ್ತಿಲ್ಲ. ಅಲ್ಲದೇ, ಮಂಡಳಿಯಲ್ಲಿ ಅವ್ಯವಹಾರಗಳು ನಡೆದಿವೆ. ಕಲ್ಯಾಣ ಕರ್ನಾಟಕ ಮಾನವ ಅಭಿವೃದ್ಧಿ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಮಂಡಳಿಯಿಂದ ನೂರು ಕೋಟಿ ರೂ. ಅನುದಾನ ನೀಡಿರುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಾನೂನು ಸಚಿವರು ಸದನದಲ್ಲಿ ಹೇಳಿದ್ದರೂ, ಈ ಬಗ್ಗೆ ಇದುವರೆಗೂ ಯಾವ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ಜಾಧವ ಚಿಂಚೋಳಿ ಎಂಪಿ

ಡಾ| ಉಮೇಶ ಜಾಧವ ಚಿಂಚೋಳಿಗೆ ಎಂಪಿ (ಸಂಸದ) ಆಗಿದ್ದು, ಎಸ್‌ಸಿಯಲ್ಲಿರುವ ಬಂಜಾರಾ ಸಮುದಾಯವನ್ನು ಎಸ್‌ಟಿ ಸೇರಿಸಲು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೋ ಇಲ್ಲವೋ ಎಂದು ಉತ್ತರಿಸಲಿ ಎಂದು ಪ್ರಿಯಾಂಕ್‌ ಖರ್ಗೆ ಮತ್ತೆ ಪ್ರಶ್ನಿಸಿದರು. ಈ ಬಗ್ಗೆ ಹಲವಾರು ಬಾರಿ “ಚಿಂಚೋಳಿ ಎಂಪಿ’ಗೆ ಕೇಳಿದ್ದೇನೆ. ಆದರೆ, ಇತ್ತೀಚೆಗೆ ನಾನು ಎದುರಾದರೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದಾರೆ ಎಂದು ಗೇಲಿ ಮಾಡಿದರು.

“ಹೆಬ್ಬೆಟ್ಟು” ಅಸಂವಿಧಾನ ಪದ ಅಲ್ಲ

ಪ್ರಧಾನಿ ಮೋದಿ ಬಗ್ಗೆ ವಿದ್ಯಾಭ್ಯಾಸದ ಬಗ್ಗೆ ಆರ್‌ಟಿಐನಲ್ಲೂ ದಾಖಲೆ ಕೊಡುತ್ತಿಲ್ಲ. ಆದ್ದರಿಂದ ಅವರನ್ನು “ಹೆಬ್ಬೆಟ್ಟು’ ಎಂದು ಕಾಂಗ್ರೆಸ್‌ ಟ್ವಿಟ್ಟರ್‌ನಲ್ಲಿ ಟೀಕಿಸಲಾಗಿತ್ತು. ಅದು ಅಸಾಂವಿಧಾನಿಕ ಪದವಲ್ಲ. ಆದರೂ, ನಮ್ಮ ಕೆಪಿಸಿಸಿ ಅಧ್ಯಕ್ಷರು ವಿಷಾದ ವ್ಯಕ್ತಪಡಿಸಿದ್ದಾರೆ. ರಾಹುಲ್‌ ಗಾಂಧಿ ಬಗ್ಗೆ ಹೇಳಿಕೆ ನೀಡಬಾರದು ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರೂ, ನಳೀನ್‌ ಕುಮಾರ್‌ ಕಟೀಲ್‌ ವಿಷಾದವಾಗಲಿ, ಕ್ಷಮೆಯನ್ನಾಗಲಿ ಕೇಳಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next