ಮುಂಬಯಿ: ಭವಾನಿ ಕ್ರಿಯೇಷನ್ಸ್ ರೂವಾರಿ ಕುಸುಮೋದರ ಡಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಂದ್ರಹಾಸ ಆಳ್ವ ಚೆಲ್ಲಡ್ಕ ಇವರ ದಕ್ಷ ನಿರ್ದೇಶನದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಕಟೀಲು ಶ್ರೀ ದೇವಿ ಚರಿತೆ ಕನ್ನಡ ಧಾರಾವಾಹಿಯ ಪ್ರೋಮೋ ಬಿಡುಗಡೆಯು ಆ. 18 ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಿದ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣಾ ಕಾರ್ಯಕ್ರಮದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ದಿವ್ಯಹಸ್ತದಿಂದ ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣನವರ ಉಪಸ್ಥಿತಿಯಲ್ಲಿ ಪ್ರೋಮೋ ಬಿಡುಗಡೆಗೊಂಡಿತು.
ಈ ಸಂದರ್ಭದ ಧಾರಾವಾಹಿಯ ನಿರ್ದೇಶಕ ಚಂದ್ರಹಾಸ ಆಳ್ವ ಚೆಲ್ಲಡ್ಕ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಭವಾನಿ ಕ್ರಿಯೇಷನ್ಸ್‌ನ ರೂವಾರಿ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ, ಧಾರಾವಾಹಿಯ ನಿರ್ದೇಶಕ ಚಂದ್ರಹಾಸ್ ಆಳ್ವ ಚೆಲ್ಲಡ್ಕ, ನಿರ್ಮಾಪಕರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ದಡ್ಡಂಗಡಿ, ಪ್ರಕಾಶ್ ಶೆಟ್ಟಿ ಚೆಲ್ಲಡ್ಕ ದಡ್ಡಂಗಡಿ, ಸಹ ನಿರ್ಮಾಪಕ ಮತ್ತು ಪ್ರೊಡಕ್ಷನ್ ಕಂಟ್ರೋಲರ್ ಪ್ರೇಮ್‌ನಾಥ್ ಶೆಟ್ಟಿ ಮುಂಡ್ಕೂರು, ಪ್ರಚಾರ-ಸಂಪರ್ಕ ಸಲಹೆಗಾರರಾದ ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ, ಕಾರ್ಯಕ್ರಮದ ಸಂಯೋಜಕ ಪದ್ಮನಾಭ ಕಟೀಲು ಹಾಗೂ ಅತಿಥಿ-ಗಣ್ಯರು ಉಪಸ್ಥಿತರಿದ್ದರು. ಕಟೀಲು ಶ್ರೀ ದೇವಿ ಚರಿತೆ ಕನ್ನಡ ಧಾರಾವಾಹಿಯು ಸೆ. 23 ರಿಂದ ರಾಷ್ಟ್ರೀಯ ವಾಹಿನಿ ದೂರದರ್ಶನದಲ್ಲಿ ಪ್ರಸಾರಗೊಳ್ಳಲಿದೆ.