ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕೀಳು ಶಾಂತಿ ಮತ್ತು ಶಾಂತಿ ವಿಲಯದಾರ ಹುದ್ದೆಗಳು ಕೃಷ್ಣ ಭಟ್ಟರ ಕುಟುಂಬದ ಆನುವಂಶಿಕ ಹಕ್ಕಾಗಿದ್ದು, ಈ ಹಕ್ಕಿನ ಹುದ್ದೆಗಳನ್ನು ಅನುಷ್ಠಾನಗೊಳಿಸುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಎ. 29ರಂದು ಆದೇಶ ಹೊರಡಿಸಿದ್ದಾರೆ.
ಅದರಂತೆ ಬುಧವಾರ ಕೃಷ್ಣ ಭಟ್ಟರ ಮಗ ಗುರುರಾಜ್ ಭಟ್ ಅವರು ದೇಗುಲಕ್ಕೆ ಆಗಮಿಸಿ ಕರ್ತವ್ಯಕ್ಕೆ ಮುಂದಾಗಿದ್ದರಿಂದ ದೇಗುಲದ ಪೂಜೆಯ ಸಮಯದಲ್ಲಿ ವ್ಯತ್ಯಯ ಉಂಟಾಗಿದೆ. ದೇವಸ್ಥಾನದಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯ ಬೇಕಾದ ಮಹಾಪೂಜೆ ಅಪರಾಹ್ನ 1.45ಕ್ಕೆ ನಡೆದಿದ್ದು, ಅನ್ನ ಸಂತರ್ಪಣೆಯೂ ವಿಳಂಬವಾಗಿ ಆರಂಭಗೊಂಡಿತ್ತು.
ಕೀಳು ಶಾಂತಿ ಮತ್ತು ಶಾಂತಿ ವಿಲಯದಾರರ ನೇಮಕ ಸಂಬಂಧ ದೇಗುಲಕ್ಕೆ ಯಾವುದೇ ಆದೇಶ ಬಂದಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.
ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿರುವುದರಿಂದ ಕಾರ್ಯ ನಿರ್ವಹಣೆಗೆ ತೊಂದರೆಯಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.