ಕಟಪಾಡಿ: ಅಚ್ಚಡ ರೈಲ್ವೇ ಮೇಲ್ಸೇತುವೆ, ಮಣಿಪುರ ರೈಲ್ವೇ ಮೇಲ್ಸೇತುವೆಯ ಪಕ್ಕದಲ್ಲಿ ತ್ಯಾಜ್ಯದ ರಾಶಿಯು ಮತ್ತೆ ಕಂಡು ಬರುತ್ತಿದ್ದು, ನಿರ್ವಹಣೆಯ ಬಗ್ಗೆ ಗ್ರಾ.ಪಂ. ಸಮಸ್ಯೆ ಎದುರಿಸುವಂತಾಗಿದೆ.
ಅಚ್ಚಡ ಭಾಗದಲ್ಲಿ ಸಾಕಷ್ಟು ಬಾರಿ ಸಾರ್ವಜನಿಕರು ಸುರಿದ ತ್ಯಾಜಗಳ ರಾಶಿಯನ್ನು ಸ್ವತ್ಛಗೊಳಿಸಿದರೂ ಬೆರಳೆಣಿಕೆಯ ದಿನಗಳಲ್ಲಿ ತ್ಯಾಜ್ಯ ಮರು ಸಂಗ್ರಹಗೊಳ್ಳುತ್ತಿದೆ. ಕಳೆದ ಬಾರಿ ಸಂಪೂರ್ಣ ತೆರವುಗೊಳಿಸಿ ಬ್ಯಾನರ್ ಮತ್ತು ಹಸಿರು ಬಲೆಯನ್ನು ಕಟ್ಟಿ ಸಾರ್ವಜನಿಕರಿಗೆ ತ್ಯಾಜ್ಯ ಎಸೆಯದಂತೆ ತಿಳುವಳಿಕೆ ಮೂಡಿಸಿದರೂ ಮತ್ತದೇ ಜಾಗದಲ್ಲಿ ಇದೀಗ ತ್ಯಾಜ್ಯ ತುಂಬಿಕೊಂಡಿರುತ್ತದೆ.
ಈ ತ್ಯಾಜ್ಯವು ಪ್ಲಾಸ್ಟಿಕ್ ಮತ್ತು ಗೋಣಿ ಚೀಲಗಳಲ್ಲಿ ತುಂಬಿಸಿ ತಂದು ಎಸೆಯುತ್ತಿದ್ದು, ಇದರಲ್ಲಿನ ತ್ಯಾಜ್ಯಗಳನ್ನು ನಾಯಿ, ಬೆಕ್ಕು ಮತ್ತಿತರ ಪ್ರಾಣಿಗಳು ಎಳೆದು ರಸ್ತೆಯುದ್ದಕ್ಕೂ ಹರಡುತ್ತಿದ್ದು, ಗಬ್ಬು ವಾಸನೆಯೊಂದಿಗೆ ಪರಿಸರ ಆಸಹ್ಯ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಸುರಿದ ಭಾರೀ ಮಳೆಯ ನೆರೆಗೂ ಕೊಚ್ಚಿಕೊಂಡು ಹೋಗದ ತ್ಯಾಜ್ಯವು ಇದೀಗ ಕೊಳೆತು ದುರ್ನಾತ ಬೀರುತ್ತಿದ್ದು, ಜನಾರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಪಾಯದ ಸನ್ನಿವೇಶ ಸೃಷ್ಟಿಸಿದಂತಾಗಿದೆ.
ಪಿಡಿಒ ಇನಾಯತುಲ್ಲಾ ಬೇಗ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದು, ಎಲ್ಲಿಂದಲೋ ಬರುವ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯುತ್ತಿದ್ದಾರೆ. ಎಚ್ಚರಿಕೆ ಫಲಕ ಅಳವಡಿಸಿದರೂ ಮನುಷ್ಯತ್ವ ಮರೆತಿದ್ದಾರೆ. ನಮ್ಮ ಗ್ರಾಮದಲ್ಲಿ ವಾರಕ್ಕೆ 3 ಬಾರಿ ಮನೆಮನೆಯಿಂದ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಇದೀಗ ರಸ್ತೆ ಬದಿ ಕಂಡು ಬರುವ ತ್ಯಾಜ್ಯ ರಾಶಿಗಳನ್ನು ವಿಲೇವಾರಿ ಮಾಡುವುದು ಗ್ರಾಮ ಪಂಚಾಯತ್‌ಗೆ ತಲೆನೋವಾಗಿದೆ. ಘನ-ದ್ರವ ತ್ಯಾಜ್ಯ ಸಂಪನ್ಮೂಲ ಘಟಕ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯವರಲ್ಲಿ ಸೂಕ್ತ ಸ್ಥಳ ಗುರುತಿಸಿಕೊಡುವಂತೆ ಕೋರಿಕೊಳ್ಳಲಾಗಿದ್ದು, ಅವರ ಆದೇಶದ ಮೇರೆಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗುತ್ತದೆ. ಈಗ ಸಂಗ್ರಹಿತ ತ್ಯಾಜ್ಯವನ್ನು ಕೂಡಲೇ ವಿಲೇವಾರಿಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.