Advertisement

ಜೀವ ಬಲಿ ಪಡೆಯುತ್ತಿರುವ ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ

09:44 AM Dec 28, 2022 | Team Udayavani |

ಶಿರ್ವ: ಲೋಕೋಪಯೋಗಿ ಇಲಾಖೆಯ ಕಟಪಾಡಿ-ಶಿರ್ವ ಮುಖ್ಯ ರಸ್ತೆಯ ಶಿರ್ವ ಗ್ರಾ.ಪಂ. ವ್ಯಾಪ್ತಿಯ ಪಂಜಿಮಾರು ಬಸ್‌ ನಿಲ್ದಾಣದಿಂದ ರಾಬಿನ್‌ ಬಸ್‌ ನಿಲ್ದಾಣದವರೆಗಿನ ರಸ್ತೆಯಲ್ಲಿ ಹಲವಾರು ಅಪಘಾತಗಳು ನಡೆದು ಜೀವಬಲಿ ಪಡೆಯುತ್ತಿದ್ದು,ಅಪಘಾತ ವಲಯವಾಗಿ ಪರಿಣಮಿಸಿದೆ. ದಿನವೊಂದಕ್ಕೆ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ವಾಹನ ದಟ್ಟಣೆಯಿರುವ ರಸ್ತೆಯ ರಾಬಿನ್‌ ಬಸ್‌ ನಿಲ್ದಾಣದ ತಿರುವು ಮತ್ತು ಪಂಜಿಮಾರು ಬಸ್‌ ನಿಲ್ದಾಣದಿಂದ ಮುಂದಕ್ಕೆ ಇರುವ ಕೋಡು-ಪಂಜಿಮಾರು ತಿರುವಿನಲ್ಲಿ ಆಗಾಗ್ಗೆ ರಸ್ತೆ ಅಪಘಾತಗಳು ನಡೆಯುತ್ತಿದ್ದು ವಾಹನ ಸವಾರರ ಜೀವಕ್ಕೆ ಸಂಚಕಾರವಿದೆ. ವೇಗವಾಗಿ ಬರುವ ವಾಹನಗಳು ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸುತ್ತಿರುತ್ತಿದೆ.

ದ್ವಿಪಥ ರಸ್ತೆ ವಿಸ್ತರಣೆ ಯಾವಾಗ?

ಕಟಪಾಡಿ-ಶಿರ್ವ 10.5 ಕಿ.ಮೀ. ರಾಜ್ಯ ಹೆದ್ದಾರಿಯ 8.5 ಕಿ.ಮೀ. ರಸ್ತೆ ಕಾಪು ಶಾಸಕರ ಅನುದಾನದ ಸುಮಾರು 7 ಕೋ.ರೂ. ವೆಚ್ಚದಲ್ಲಿ ಪಂಜಿಮಾರು ಫಲ್ಕೆಯವರೆಗೆ 2018ರಲ್ಲಿ ದ್ವಿಪಥಗೊಂಡು ವಿಸ್ತರಣೆಯಾಗಿತ್ತು. ಮಾಣಿಪ್ಪಾಡಿ ಫಲ್ಕೆಯಿಂದ ಶಿರ್ವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದವರೆಗಿನ ಸುಮಾರು 2 ಕಿ.ಮಿ. ರಸ್ತೆಯು ಅಂಕುಡೊಂಕಾಗಿದ್ದು 4 ವರ್ಷ ಕಳೆದರೂ ದ್ವಿಪಥಗೊಳ್ಳದೆ ನನೆಗುದಿಗೆ ಬಿದ್ದಿದ್ದು ಅಪಘಾತ ವಲಯವಾಗಿ ಪರಿಣಮಿಸಿದೆ. ಲೋಕೋಪಯೋಗಿ ಇಲಾಖೆಯ ಸಚಿವರು,ಶಾಸಕರು ಸಹಿತ ಸಂಬಂಧಪಟ್ಟವರಿಗೆ ಲಿಖೀತ ಮನವಿ ನೀಡಿದ್ದರೂ ಫಲಿತಾಂಶ ಶೂನ್ಯವಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿ ನಡೆದು ತಿರುವು ರಸ್ತೆ ನೇರವಾಗಿ ವಿಸ್ತರಣೆಯಾಗಿ ಸುವ್ಯವಸ್ಥಿತ ರಸ್ತೆಯಾಗುವ ನಾಗರಿಕರ ನೀರೀಕ್ಷೆ ಸುಳ್ಳಾಗಿದೆ.

ಉದಯವಾಣಿ ವರದಿ

Advertisement

ರಸ್ತೆ ದುರವಸ್ಥೆಯ ಬಗ್ಗೆ ಉದಯವಾಣಿ 2022ರ ಮಾ. 11, ಸೆ.18 ಮತ್ತು ಅ. 18 ರಂದು ವರದಿ ಪ್ರಕಟಿಸಿತ್ತು. ಬಾಕಿಯುಳಿದ 2.ಕಿ.ಮೀ. ರಸ್ತೆಯನ್ನು ವಿಸ್ತರಣೆಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ರಸ್ತೆಯನ್ನು ದ್ವಿಪಥಗೊಳಿಸಲಾಗುವುದು ಎಂದು ಉಡುಪಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ‌ ಜಗದೀಶ ಭಟ್‌ ತಿಳಿಸಿದ್ದರು. ಆದರೆ ಡಿಸೆಂಬರ್‌ ತಿಂಗಳಲ್ಲಿ ಇಲಾಖೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದು ಬಿಟ್ಟರೆ ರಸ್ತೆ ವಿಸ್ತರಣೆಯ ಗೋಜಿಗೆ ಹೋಗಲಿಲ್ಲ.

ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ವಾಹನ ನಿಬಿಡತೆಯಿಂದ ಕೂಡಿರುವ ಈ ರಸ್ತೆಯಲ್ಲಿ ಮತ್ತಷ್ಟು ಜೀವಹಾನಿಯಾಗುವ ಮುನ್ನ ದ್ವಿಪಥ ರಸ್ತೆಯಾಗಿ ವಿಸ್ತರಣೆಗೊಳಿಸಿ ಅಪಘಾತ ಮುಕ್ತ ಪ್ರದೇಶವನ್ನಾಗಿ ಮಾಡಿ ಸುಗಮ ಸಂಚಾರಕ್ಕೆ ಅನುವುಗೊಳಿಸಬೇಕೆಂಬುದು ಪರಿಸರದ ನಾಗರಿಕರ ಬೇಡಿಕೆಯಾಗಿದೆ.

ಅಪಘಾತ ವಲಯ:

ಈ ರಸ್ತೆಯಲ್ಲಿ ಡಿ. 24ರಂದು ನಡೆದ ಕಾರು ಟಿಪ್ಪರ್‌ ಅಪಘಾತದಲ್ಲಿ ಕಾರಿನಲ್ಲಿದ್ದ ಮಹಿಳೆ ಮತ್ತು ಯುವಕ ಮೃತಪಟ್ಟಿದ್ದರು.ಹಿಂದೆ ಬೈಕ್‌ ಅಪಘಾತದಲ್ಲಿ ಮೆಡಿಕಲ್‌ ಪ್ರತಿನಿಧಿಯೊಬ್ಬರು ಮೃತರಾಗಿದ್ದರು.ಬೈಕ್‌ಟಿಪ್ಪರ್‌ ಅಪಘಾತದಲ್ಲಿ ಬ್ರಹ್ಮಾವರದ ವ್ಯಕ್ತಿಯೊಬ್ಬರು ಕಾಲನ್ನೇ ಕಳೆದುಕೊಂಡಿದ್ದರು.ಅಲ್ಲದೆ ಹಲವಾರು ಅಪಘಾತಗಳು ನಡೆದಿದ್ದು ವಾಹನ ಸವಾರರು ಗಾಯಗೊಂಡಿದ್ದರು.ಸುಮಾರು ವರ್ಷಗಳ ಹಿಂದೆ ಕೋಡು-ಪಂಜಿಮಾರು ತಿರುವಿನಲ್ಲಿ ಮದುವೆ ದಿಬ್ಬಣದ ಬಸ್ಸೊಂದು ಅಪಘಾತ ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದರು.

ರಸ್ತೆಯನ್ನು ದ್ವಿಪಥಗೊಳಿಸಿ ಅಭಿವೃದ್ಧಿ ಪಡಿಸಲು ಲೋಕೋಪಯೋಗಿ ಇಲಾಖೆ ಸಚಿವರು, ಇಲಾಖೆಗೆ ಪತ್ರ ಬರೆಯಲಾಗಿದ್ದರೂ ಹಾಳಾದ ರಸ್ತೆಗೆ ತೇಪೆ ಹಚ್ಚಲಾಗಿದ್ದು ಬಿಟ್ಟರೆ ಫಲಿತಾಂಶ ಶೂನ್ಯ.ಹೋದ ಜೀವ ಮತ್ತೆ ಬಾರದು. ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು,ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ.     -ಕೆ.ಆರ್‌.ಪಾಟ್ಕರ್‌ , ಮಾಜಿ ಶಿರ್ವ ಗ್ರಾ.ಪಂ. ಅಧ್ಯಕ್ಷರು.

-ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next