ಕಟಪಾಡಿ: ಮಳೆಯ ನೀರು ಸರಾಗವಾಗಿ ಹರಿಯಲು ನಿರ್ಮಿಸಲಾದ ಚರಂಡಿಯಲ್ಲಿ ಬೇಕಾ ಬಿಟ್ಟಿಯಾಗಿ ಕೊಳಚೆ ನೀರು ಹರಿದು ಕಟಪಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ಕೊಳಚೆ ನೀರಿನದ್ದೇ ಕಾರು ಬಾರು ಕಂಡು ಬರುತ್ತಿದೆ.
ಇಲ್ಲಿ ಹರಿದ ಕೊಳಚೆ ನೀರು, ತ್ಯಾಜ್ಯ ಗಳೊಂದಿಗೆ ಸೇರಿಕೊಂಡು ಇಲ್ಲಿನ ಪಾಪನಾಶಿನಿ ಹೊಳೆಯನ್ನು ಸೇರುತ್ತಿದ್ದು, ಇನ್ನೊಂದು ಇಂದ್ರಾಣಿ ಆಗುವ ಮುನ್ನವೇ ಎಚ್ಚೆತ್ತು ಉಡುಪಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು, ವ್ಯಾಪಾರಸ್ಥರು ಆಗ್ರಹಿಸುತ್ತಿದ್ದಾರೆ
ಪೇಟೆಯ ಕೊಳಚೆಯ ನೀರು ಉಕ್ಕಿ ಹರಿದು ಕುಡಿಯುವ ನೀರಿನ ಬಾವಿ, ಕೆರೆಗಳನ್ನೂ ಬಾಧಿಸುತ್ತಿದೆ. ಹಳೆ ಎಂಬಿಸಿ ರಸ್ತೆಯ ದಕ್ಕೆ ಬಳಿಯ ನಿವಾಸಿಗಳ ಬಾವಿಯ ಮೇಲೂ ದುಷ್ಪರಿಣಾಮ ಬೀರುವ ಈ ಕೊಳಚೆ ನೀರಿನಿಂದಾಗಿ ಸ್ವಂತ ಬಾವಿ ಇದ್ದರೂ ಕುಡಿಯುವ ನೀರಿಗೆ ತತ್ವಾರ, ಪಾಪನಾಶಿನಿ ನದಿಯು ಕಲುಷಿತವಾಗುತ್ತಿದೆ. ಇದು ಕಟಪಾಡಿಗೆಯೇ ಕಪ್ಪು ಚುಕ್ಕಿಯಾಗುತ್ತಿದೆ ಎಂದು ತ್ಯಾಜ್ಯ, ಕೊಳಚೆ ಸಮಸ್ಯೆಯಿಂದ ರೋಸಿ ಹೋಗಿದ್ದ ಗ್ರಾಮಸ್ಥರು ತಮ್ಮ ಅಸಹನೆಯನ್ನು 2019ರ ಡಿ.17ರ ಗ್ರಾಮಸಭೆಯಲ್ಲಿಯೂ ಮುಂದಿಟ್ಟಿದ್ದರೂ ಪರಿಣಾಮ ಶೂನ್ಯವಾಗಿತ್ತು.
ವಸತಿ, ವಾಣಿಜ್ಯ, ಬಹುಮಹಡಿ ಸಂಕೀರ್ಣಗಳ ಕೊಳಚೆ ನೀರು, ಮಳೆಯ ನೀರು ಚರಂಡಿಯ ಮೂಲಕ ಹರಿದು ಬಂದು ಈ ಭಾಗದ ಗ್ರಾಮಸ್ಥರ ಬಾವಿಗೂ ಸೇರುತ್ತಿದೆ. ಕುಡಿಯುವ ನೀರಿಗೂ ತತ್ವಾರ ಆಗುತ್ತಿದೆ ಎಂಬ ಕೂಗಿಗೂ ಯಾವುದೇ ಇಲಾಖೆಯು ಇದುವರೆಗೂ ಸ್ಪಂದಿಸಿಲ್ಲ. ಈ ನಡುವೆ ಮಾ.21ರಂದು ಪರಿಸರ ಇಲಾಖೆಯ ಅಧಿಕಾರಿಗಳು ಆಗಮಿಸಿ ಕೆಲ ಭಾಗದಲ್ಲಿ ಪರಿಶೀಲನೆಯನ್ನು ನಡೆಸಿ, ಮಾಹಿತಿಯನ್ನು ಸಂಗ್ರಹಿಸಿರುತ್ತಾರೆ ಎಂದಿರುವ ಸ್ಥಳೀಯ ಹರೀಶ್ ಕೊಟ್ಯಾನ್ ಕೆಲವೆಡೆ ರಾತ್ರಿಯಲ್ಲಿ ನೀರು ಹರಿದು ಚರಂಡಿ ಸೇರುತ್ತಿದ್ದು, ಕೆಲವೆಡೆ ಹಗಲು ಹೊತ್ತಿನಲ್ಲಿ ಹರಿದಾಡುತ್ತಿದೆ ಎಂದು ಪತ್ರಿಕೆಗೆ ಮಾಹಿತಿ ನೀಡಿರುತ್ತಾರೆ.
ಈ ಸಮಸ್ಯೆಯ ಬಗ್ಗೆ ರೋಸಿ ಹೋದ ಸ್ಥಳೀಯರು ಅಧಿಕಾರಿಗಳ ಜಾಣಕುರುಡು, ಜಾಣ ಕಿವುಡುತನಕ್ಕೆ ಒಳಗಾಗಿ ತಟಸ್ಥ ವಾಗಿರುವುದು ವಿರುದ್ಧವಾಗಿ ಸಮಸ್ಯೆಯ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿಯನ್ನು ರವಾನಿಸಿದ್ದು ಇನ್ನಾದರೂ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬ ನಿರೀಕ್ಷೆಯಲ್ಲಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನ್ಯಾಯ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಸೂಕ್ತ ಕ್ರಮ ತೆಗೆದುಕೊಳ್ಳುವೆ
ಸಮಸ್ಯೆ ಗಮನಕ್ಕೆ ಬಂದಿರುತ್ತದೆ. ಮಳೆನೀರು ಹರಿಯುವ ತೋಡಿನಲ್ಲಿ ಸಂಕೀರ್ಣಗಳ ನೀರು ಹರಿದು ಓವರ್ ಫ್ಲೋ ಆಗಿ ರಸ್ತೆಯಲ್ಲಿ ಹರಿಯುತ್ತಿದೆ. ಸ್ಥಳೀಯರ ಆರೋಗ್ಯದ ಹಿತದೃಷ್ಟಿಯಿಂದ ತಿಳುವಳಿಕೆ ಪತ್ರವನ್ನು ಸಂಬಂಧಿತರಿಗೆ ನೀಡಿ ಚರಂಡಿಯನ್ನೂ ಸ್ವತ್ಛಗೊಳಿಸಲಾಗುತ್ತದೆ. ಪುನರಾವರ್ತನೆಯಾಗದಂತೆ ಸೂಕ್ತ ಕ್ರಮಕ್ಕೆ ಮುಂದಡಿ ಇರಿಸಲಾಗುತ್ತದೆ ಎಂದು ಕಟಪಾಡಿ ಗ್ರಾಪಂ ಪಿಡಿಒ ಕೆ.ಎನ್. ಇನಾಯತ್ ಉಲ್ಲಾ ಬೇಗ್ ಹೇಳಿದರು.