Advertisement

ಅಪಘಾತ ತಾಣವಾಗಿ ಬದಲಾಗುತ್ತಿದೆ ಕಟಪಾಡಿ ಜಂಕ್ಷನ್‌: ಬೇಕಿದೆ ತುರ್ತು ಸೇವೆಗಾಗಿ ಆ್ಯಂಬುಲೆನ್ಸ್‌

12:27 AM Jan 03, 2023 | Team Udayavani |

ಕಟಪಾಡಿ: ನಿರಂತರ ಅಪಘಾತದ ತಾಣವಾಗುತ್ತಿರುವ ಕಟಪಾಡಿ ಜಂಕ್ಷನ್‌ನಲ್ಲಿ ಗಾಯಾಳುಗಳ ಜೀವ ರಕ್ಷಣೆಗೆ ಉಡುಪಿ ಅಥವಾ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ತುರ್ತು ಸೇವೆಯ ಆ್ಯಂಬುಲೆನ್ಸ್‌ ಆವಶ್ಯಕವಾಗಿ ಬೇಕಿದೆ ಎಂಬ ಸಾರ್ವಜನಿಕರ ಒತ್ತಾಯ ಕೇಳಿ ಬರುತ್ತಿದೆ.

Advertisement

ಕಟಪಾಡಿ, ಉದ್ಯಾವರ, ಕುರ್ಕಾಲು, ಶಂಕರಪುರ, ಬಂಟಕಲ್ಲು ಸಹಿತ ಪರಿಸರದ ಈ ಪ್ರದೇಶದಲ್ಲಿ ರಸ್ತೆ ಅವಘಡವು ಸಂಭವಿಸಿದಾಗ ಗಾಯಾಳುವಿನ ತುರ್ತು ರಕ್ಷಣೆಗೆ ರಿಕ್ಷಾ ಚಾಲಕರೇ ಮುಂದಾಗುತ್ತಿದ್ದು, ರಿಕ್ಷ ತುರ್ತು ಸೇವೆಯನ್ನು ನೀಡುವ ವಾಹನವಾಗಿ ಪರಿಣಮಿಸುತ್ತಿದೆ. ಆ ನಿಟ್ಟಿನಲ್ಲಿ ರಿಕ್ಷದವರ ಸೇವೆಯು ಅನನ್ಯವಾಗಿದೆ.

ನಿಜಕ್ಕಾದರೆ ಈ ಭಾಗದಲ್ಲಿ ಅಪಘಾತದಿಂದ ಗಾಯಗೊಂಡ ಗಾಯಾಳುಗಳ ಜೀವ ರಕ್ಷಣೆಗೆ ತುರ್ತು ಸೇವೆಯ ಆ್ಯಂಬುಲೆನ್ಸ್‌ ಅವಶ್ಯಕವಾಗಿ ಬೇಕಿದ್ದು, ಗಾಯಾಳುವಿಗೆ ತುರ್ತಾಗಿ ಬೇಕಾಗುವ ಪ್ರಥಮ ಚಿಕಿತ್ಸೆ, ಆಕ್ಸಿಜನ್‌ ವ್ಯವಸ್ಥೆ ಸಹಿತ ಮತ್ತಿತರ ಸೌಲಭ್ಯಗಳು ಲಭಿಸಿದಲ್ಲಿ ಗಾಯಾಳುಗಳ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಡಿಸೆಂಬರ್‌ ತಿಂಗಳಲ್ಲಿಯೇ ಟಿಪ್ಪರ್‌ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಉದ್ಯಾವರ ಬೊಳೆjಯ ಯುವಕ, ಬೈಕ್‌, ಕಾರು ಢಿಕ್ಕಿ ಹೊಡೆದು ಪಾದಚಾರಿಗಳು ಸಾವನ್ನಪ್ಪಿದ ಘಟನೆಯು ಕಟಪಾಡಿ ಜಂಕ್ಷನ್‌ ಪ್ರದೇಶದಲ್ಲಿ ಸಂಭವಿಸಿದೆ. ಉದ್ಯಾವರ ಪ್ರದೇಶದಲ್ಲಿಯೂ ಅಪಘಾತದಿಂದ ಸಾವು ನೋವುಗಳು ಸಂಭವಿಸಿದೆ. ಕುರ್ಕಾಲು, ಶಂಕರಪುರ, ಬಂಟಕಲ್ಲು ಪರಿಸರದಲ್ಲೂ ರಸ್ತೆ ಆವಘಡದಲ್ಲಿ ಸಾವು ನೋವುಗಳು ಸಂಭವಿಸಿವೆೆ.

ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಮತ್ತು ಉಡುಪಿ ಪ್ರದೇಶದಿಂದ ಬರುವ ವಾಹನಗಳು ಹಾಗೂ ಬೆಳ್ಮಣ್‌, ಶಿರ್ವ, ಬಂಟಕಲ್ಲು, ಶಂಕರಪುರ ಹಾಗೂ ಮಣಿಪುರ ಭಾಗದಿಂದ ಬರುವ ವಾಹನಗಳು ಮತ್ತು ಮಟ್ಟು ಕಟಪಾಡಿ ಪೇಟೆಯೊಳಗಿಂದ ಬರುವ ವಾಹನಗಳು ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್‌ ಮೂಲಕ ಸಾಗಬೇಕಿದೆ. ಹಾಗಾಗಿ ಸಹಜವಾಗಿಯೇ ಬೆಳೆಯುತ್ತಿರುವ ಕಟಪಾಡಿಯಲ್ಲಿ ಸದಾ ವಾಹನ ದಟ್ಟಣೆ, ಜನದಟ್ಟಣೆಯು ಸಾಮಾನ್ಯವಾಗಿದ್ದು, ನಿಯಂತ್ರಣಕ್ಕೆ ಪೊಲೀಸರು ಶ್ರಮ ವಹಿಸುತ್ತಿದ್ದಾರೆ.

Advertisement

ಕಟಪಾಡಿಯಲ್ಲಿ ಅಂಡರ್‌ ಅಥವಾ ಓವರ್‌ ಪಾಸ್‌ ನಿರ್ಮಿಸಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು. ಜನ ಸಾಮಾನ್ಯರ ಜೀವದ ಮೌಲ್ಯವನ್ನು ಅರಿತು, ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಕಟಪಾಡಿ ಜಂಕ್ಷನ್‌ ಪ್ರದೇಶದಲ್ಲಿ ತುರ್ತು ಸೇವೆಯ ಆ್ಯಂಬುಲೆನ್ಸ್‌ ವಾಹನದ ಸೌಕರ್ಯವನ್ನು ಒದಗಿಸಿ ಅಪಘಾತದಿಂದ ಗಾಯಗೊಂಡ ಗಾಯಾಳುಗಳ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ-ಸುರಕ್ಷತೆಯನ್ನು ಕಲ್ಪಿಸಿಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

ಬೆಳೆಯುತ್ತಿರುವ ಕಟಪಾಡಿ ಪರಿಸರದಲ್ಲಿ ನಿರಂತರವಾಗಿ ಅಪಘಾತ ಸಂಭವಿಸುತ್ತಿದೆ. ರಿಕ್ಷಾದವರೇ ತುರ್ತಾಗಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ. ಗಂಭೀರ ಗಾಯಗೊಂಡ ಗಾಯಾಳುವಿಗೆ ಉತ್ತಮ ಸುರಕ್ಷತೆ ಹಾಗೂ ಜೀವ ರಕ್ಷಣೆಗೆ ಕಟಪಾಡಿ ಜಂಕ್ಷನ್‌ ಪ್ರದೇಶದಲ್ಲಿ ತುರ್ತು ಸೇವೆಯ ಆ್ಯಂಬುಲೆನ್ಸ್‌ ವಾಹನ ಸೌಕರ್ಯದ ಆವಶ್ಯಕತೆ ಇದೆ.
-ಪ್ರೇಮ್‌ ಕುಮಾರ್‌ ಕಟಪಾಡಿ, ಅಧ್ಯಕ್ಷರು, ರಿಕ್ಷಾ ಯೂನಿಯನ್‌ ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next