ಕಾಪು: ಕಟಪಾಡಿ – ಶಿರ್ವ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮೀನು ಸಾಗಾಟದ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು, ಚಾಲಕ ಮತ್ತು ನಿರ್ವಾಹಕ ಗಂಭೀರ ಗಾಯಗೊಂಡ ಘಟನೆ ಎ. 25ರಂದು ಮಧ್ಯಾಹ್ನ ಚೊಕ್ಕಾಡಿಯಲ್ಲಿ ನಡೆದಿದೆ.
ಮೀನು ಸಾಗಾಟದ ಟೆಂಪೋದಲ್ಲಿದ್ದ ಮಹಮ್ಮದ್ ಶರೀಫ್ (26), ಮಹಮ್ಮದ್ ಅಬ್ದುಲ್ (25) ಗಾಯಾಳುಗಳು.ಮಲ್ಪೆಯಿಂದ ಮೀನು ತುಂಬಿಸಿ ಕೊಂಡು ಕಟಪಾಡಿ – ಶಿರ್ವ ಮೂಲಕವಾಗಿ ಸಂಚರಿಸುತ್ತಿದ್ದ ಟೆಂಪೋ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಟೆಂಪೋದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿದೆ.
ಟೆಂಪೋದ ಒಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹೊರಕ್ಕೆ ತೆಗೆಯಲು ಸುಮಾರು ಒಂದೂವರೆ ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು. ಸಾರ್ವಜನಿಕರ ಸಹಕಾರದೊಂದಿಗೆ ಗಾಯಾಳುಗಳನ್ನು ಹೊರಕ್ಕೆ ತೆಗೆದ ಬಳಿಕ ಆ್ಯಂಬುಲೆನ್ಸ್‌ನ ಅಲಭ್ಯತೆಯಿಂದಾಗಿ ರಿಕ್ಷಾ ಮತ್ತು ಕಾರಿನ ಮೂಲಕವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಸಂಚಾರ ಅಸ್ತವ್ಯಸ್ತ: ಟೆಂಪೋ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಂಚಾರ ಸುಗಮಗೊಳಿಸಲು ಪೊಲೀಸರು ಮತ್ತು ಸಾರ್ವಜನಿಕರು ಶ್ರಮ ವಹಿಸಬೇಕಾಯಿತು.
ರಸ್ತೆ ದುರಸ್ತಿಯಿಂದ ಅಪಘಾತ ವಲಯ
ಕಟಪಾಡಿ – ಶಿರ್ವ ಮೂಲಕವಾಗಿ ಬೆಳ್ಮಣ್‌ಗೆ ತೆರಳುವ ರಾಜ್ಯ ಹೆದ್ದಾರಿಯ ದ್ವಿಪಥ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈ ಸಂದರ್ಭ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಇರುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.,ಕಾಪು ಪೊಲೀ ಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.