Advertisement

ಕಸ್ತೂರಿರಂಗನ್‌ ವರದಿ ವರವೋ, ಶಾಪವೋ?

03:24 PM Jul 17, 2023 | Team Udayavani |

ಸಕಲೇಶಪುರ: ಪಶ್ಚಿಮಘಟ್ಟದ ತಪ್ಪಲಿನ ಗ್ರಾಮಗಳಲ್ಲಿ ಕಸ್ತೂರಿರಂಗನ್‌ ವರದಿ ಅನುಷ್ಠಾನಗೊಳಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಮುಂದಾಗಿದೆ. ಇದರಿಂದ ಮಲೆನಾಡಿನ ಕೆಲವು ಭಾಗಗಳ ಗ್ರಾಮಸ್ಥರಲ್ಲಿ ಆತಂಕ ನೆಲೆಸಿದೆ.

Advertisement

ವಿಶ್ವದ 18 ಜೀವ ವೈವಿಧ್ಯ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೇಂದ್ರ ಸರ್ಕಾರದ ಯೋಜನಾ ಆಯೋಗದ (ವಿಜ್ಞಾನ) ಸದಸ್ಯ, ಮಾಜಿ ಇಸ್ರೋ ವಿಜ್ಞಾನಿ ಕೆ.ಕಸ್ತೂರಿ ರಂಗನ್‌ ನೇತೃತ್ವದ ಉನ್ನತ ಮಟ್ಟದ ಕಾರ್ಯಗುಂಪು ನೀಡಿರುವ ವರದಿ ಜಾರಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ 5ನೇ ಬಾರಿ ಅಧಿಸೂಚನೆ ಹೊರಡಿಸಿದೆ. ಇದು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸಂಚಲನ ಮೂಡಿಸಿದೆ.

ಪಶ್ಚಿಮ ಘಟ್ಟ ಭಾಗದ ಸಂರಕ್ಷಣೆ ಸಂಬಂಧ ಪರಿಸರ ತಜ್ಞ ಪ್ರೊ. ಮಾಧವ ಗಾಡ್ಗಳ್‌ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಮೇಲೆ ಕಸ್ತೂರಿರಂಗನ್‌ ಸಮಿತಿ ನೇಮಕಗೊಂಡು ಸದರಿ ಸಮಿತಿ 2013ರಲ್ಲಿಯೇ ಮೊದಲ ವರದಿ ನೀಡಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಆಕ್ಷೇಪಣೆ ಎಲ್ಲ ಮುಗಿಸಿ 5 ಬಾರಿ ಅಧಿಸೂಚನೆ ಹೊರಡಿಸಿದೆ. ಯೋಜ ನೆ ಅನುಷ್ಠಾನ ಮಾಡಲು ಕೇಂದ್ರ ಸರ್ಕಾರ ಮುಂದಾದಲಿ ಮಲೆನಾಡಿಗರು ಬದುಕು ಅತಂತ್ರವಾಗುವುದರಲ್ಲಿ ಅನುಮಾನವಿಲ್ಲ.

ಯುನೆಸ್ಕೋ ಮಾನ್ಯತೆ: ಗುಜರಾತ್‌ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಹಾಸನ, ಕೊಡಗು, ಚಿಕ್ಕಮಗಳೂರು ವ್ಯಾಪಿಸಿರುವ ಪಶ್ಚಿಮ ಘಟ್ಟದ 56,874 ಚದರ ಕಿ.ಮೀ.ವಿಸ್ತೀರ್ಣದ ಪ್ರದೇಶವನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಕಸ್ತೂರಿ ರಂಗನ್‌ ಸಮಿತಿ ವರದಿ ನೀಡಿದೆ. ಅದರಲ್ಲಿ ಮಹಾರಾಷ್ಟ್ರದ 2159, ಕರ್ನಾಟಕದ 1576, ತಮಿಳುನಾಡಿನ 135, ಕೇರಳದ 123, ಗೋವಾದ 99, ಗುಜರಾತ್‌ನ 64 ಗ್ರಾಮಗಳು ಪಶ್ವಿ‌ಮ ಘಟ್ಟ ಸೂಕ್ಷ್ಮ ಪ್ರದೇಶಗಳಾಗಿ ಯುನೆಸ್ಕೋದಿಂದ ಗುರುತಿಸಿಕೊಂಡಿದೆ.

ಸೂಕ್ಷ್ಮ ವಲಯದಲ್ಲಿ 34 ಗ್ರಾಮ: ತಾಲೂಕಿನ ಸುಮಾರು 34 ಹಳ್ಳಿಗಳನ್ನು ಪರಿಸರ ಸೂಕ್ಷ್ಮವಲಯ ಎಂದು ಗುರುತಿಸಲಾಗಿದ್ದು, ಈ ಪೈಕಿ ಹಾನು ಬಾಳು ಹೋಬಳಿ ಅಚ್ಚನಹಳ್ಳಿ, ಮರಗುಂದ, ಅಗನಿ, ಕುಮಾರಹಳ್ಳಿ, ಹೊಡಚಹಳ್ಳಿ, ಕಾಡುಮನೆ, ದೇವಿಹಳ್ಳಿ, ಕೆಸಗ ನಹಳ್ಳಿ, ಕಾಡುಮನೆ ಎಸ್ಟೇಟ್‌, ಹೆಗ್ಗದ್ದೆ, ಆಲುವಳ್ಳಿ, ಕಡಗರವಳ್ಳಿ, ಹೆತ್ತೂರು ಹೊಬಳಿ ಕಾಗೆನರಿ, ಎಡಕುಮೇರಿ, ಹೊಂಗಡಹಳ್ಳ, ಬಾಳೆಹಳ್ಳ, ಹೊಸಹಳ್ಳಿ, ಮರ್ಕಳ್ಳಿ, ಜೇಡಿಗದ್ದೆ, ಬೆಟ್ಟಕುಮೇರಿ, ಎತ್ತಳ್ಳ, ಅತ್ತಿಹಳ್ಳಿ, ಅರಿನಿ, ಯರ್ಗ ಳ್ಳಿ, ಮರ್ಗತ್ತೂರು, ವನಗೂರು, ಮಂಕನಹಳ್ಳಿ, ಅರಿನಿ ಎಸ್ಟೇಟ್‌, ಬಾಣಗೆರೆ ಗ್ರಾಮಗಳು ವರದಿ ಪಟ್ಟಿಯಲ್ಲಿವೆ.

Advertisement

ಬದುಕಿಗೆ ಹೋಂ ಸ್ಟೇ ಆಧಾರ: ಕಸ್ತೂರಿ ರಂಗನ್‌ ವರದಿಯಲ್ಲಿ ಸೇರ್ಪಡೆಯಾಗಿರುವ ಬಹುತೇಕ ಗ್ರಾಮಗಳಲ್ಲಿ ಭಾಗದಲ್ಲಿ ಅತೀ ಹೆಚ್ಚು ಮಳೆ ಬೀಳುವುದರಿಂದ ಪ್ರಮುಖ ಬೆಳೆ ಏಲಕ್ಕಿ, ಕಾಫಿ, ಕಾಳು ಮೆಣಸು ಬೆಳೆ ಸಂಕಷ್ಟದಲ್ಲಿದ್ದು, ಬಹುತೇಕ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಕಾಡು ಪ್ರಾಣಿಗಳಾದ ಕಾಡಾನೆ, ಕಾಡೆಮ್ಮೆ, ಮಂಗಗಳ ಹಾವಳಿ ಮಿತಿ ಮೀರಿದ್ದು, ರೈತರು ತಾವು ಬೆಳೆದ ಕೃಷಿ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಇದರಿಂದ ಹೊರ ಬರಲು ಕೆಲ ರೈತರು ಬ್ಯಾಂಕ್‌ ಗಳಿಂದ ಸಾಲ ಪಡೆದು ತಮ್ಮ ಜಮೀನಿನಲ್ಲಿ ಹೋಂ ಸ್ಟೇಗಳನ್ನು ನಡೆಸಿ ತಮ್ಮ ಬದು ಕು ಕಟ್ಟಿಕೊಂಡಿದ್ದಾರೆ.

ಉದ್ಯಮಿಗಳಿಗೆ ಲಾಭದಾಯಕ: ಇನ್ನೂ ಬೆಂಗಳೂರು ಸೇರಿದಂತೆ ಹೊರ ಊರುಗಳ ಉದ್ಯಮಿಗಳು ಕೋಟ್ಯಂತರ ರೂ. ವೆಚ್ಚದಲ್ಲಿ ರೆಸಾರ್ಟ್‌ ಗಳನ್ನು ನಿರ್ಮಾಣ ಮಾಡಿದ್ದಾರೆ. ಒಂದು ವೇಳೆ ಯೋಜನೆ ಜಾರಿಯಾದರೆ ಲಕ್ಷಾಂತರ ರೂ. ಖರ್ಚು ಮಾಡಿರುವ ತೋಟ, ಹೋಂ ಸ್ಟೆಗಳನ್ನು ತೆರವುಗೊಳಿಸುವ ಪರಿಸ್ಥಿತಿ ಬಂದು ಸಂಕಷ್ಟದಲ್ಲಿ ಸಿಲುಕಲಿದ್ದಾರೆ. ಅಲ್ಲದೇ ತಲೆತಲಾಂತ ರಗಳಿಂದ ಬದುಕು ಕಟ್ಟಿಕೊಂಡಿರುವ ಇಲ್ಲಿನ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಈ ಯೋಜನೆ ಜಾರಿಯಾದರೆ ಮುಂದೇನು ಮಾಡುವುದೆಂಬ ಪ್ರಶ್ನೆ ಸೂಕ್ಷ್ಮ ಪ್ರದೇಶಗಳ ಜನರನ್ನು ಕಾಡುತ್ತಿದೆ.

ಪರಿಹಾರ ಕೊಟ್ಟು ಸ್ಥಳಾಂತರಿಸಿ: ಈಗಾಗಲೆ ರಕ್ಷಿತಾರಣ್ಯ  ‌ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಮರ ಕಡಿದರೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸುತ್ತಿದ್ದು ಆತಂಕದಲ್ಲೆ ಜನ ಬದುಕುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಸೆಕ್ಷನ್‌ 4 ವ್ಯಾಪ್ತಿಯಲ್ಲಿ ಹೆಸರಿನಲ್ಲಿ ಅರಣ್ಯ ಇಲಾಖೆ ಕೆಲವು ಗ್ರಾಮಗಳ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸಲು ಅವಕಾಶ ಕೊಡುತ್ತಿಲ್ಲ. ಇನ್ನು ಕಸ್ತೂರಿ ರಂಗನ್‌ ವರದಿ ಮಲೆನಾಡಿಗರ ಪರಿಸ್ಥಿತಿ ಚಿಂತಾಜನಕವಾ ಗುವುದರಲ್ಲಿ ಅನುಮಾನವಿಲ್ಲ. ಕಸ್ತೂರಿ ರಂಗನ್‌ ವರದಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಯಾವುದೆ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಅರಣ್ಯ ಇಲಾಖೆ ಅವಕಾಶ ನೀಡದ ಕಾರಣ ಕೋಟ್ಯಂತರ ಹಣ ಸರ್ಕಾರಕ್ಕೆ ಹಿಂತಿರುಗಿ ಹೋಗಿದೆ.

ಈ ಹಿನ್ನೆಲೆ ಕಸ್ತೂರಿ ರಂಗನ್‌ ವರದಿಯನ್ನು ಏನೇ ಕಾರಣಕ್ಕೂ ಅನುಷ್ಠಾನ ಮಾಡಬಾರದು ಅನುಷ್ಠಾನ ಮಾಡುವುದಾದರೆ ಸರ್ಕಾರ ಈ ಪ್ರದೇಶಗಳಲ್ಲಿ ವಾಸಿಸುವ ಜನರ ಆಸ್ತಿಪಾಸ್ತಿಗಳಿಗೆ ಸೂಕ್ತ ಪರಿಹಾರ ಕೊಟ್ಟು ಒಕ್ಕಲೆಬ್ಬಿಸಬೇಕು. ಇಲ್ಲದಿದ್ದಲ್ಲಿ ಯಥಾಸ್ಥಿತಿ ಕಾಪಾಡಬೇಕೆಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಕಾಡುಗಳನ್ನು ಮಾತ್ರ ಯೋಜನಾ ವ್ಯಾಪ್ತಿಯಲ್ಲಿ ಸೇರಿಸಬೇಕು ಹಾಗೂ ಮನುಷ್ಯರು ಇರುವ ಪ್ರದೇಶಗಳನ್ನು ಹಾಗೆಯೆ ಬಿಡಬೇಕು ಎಂಬ ಮಾತು ಕೇಳಿ ಬರುತ್ತಿದೆ. ಯಾವುದೆ ರೀತಿಯಲ್ಲಿ ಸ್ಥಳಕ್ಕೆ ಆಗಮಿಸಿ ಅಧ್ಯಯನ ಮಾಡದೆ ಪುನ: 34 ಗ್ರಾಮಗಳನ್ನು ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿಸುವುದಕ್ಕೆ ವ್ಯಾಪಕ ವಿರೋಧ ಕಂಡು ಬರುತ್ತಿದೆ.

ಕೇರಳ ಮಾದರಿ ಅನುಸರಿಸಿ: ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಈ ಹಿಂದೆ ಬೆಳೆಗಾರ ಸಂಘಟನೆಗಳಿಂದ ಸಕಲೇಶಪುರ, ಮೂಡಿಗೆರೆ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಪ್ರತಿಭಟನೆ ಮಾಡಿ ಜನಗಳು ನೆಲೆಸಿರುವ ಪ್ರದೇಶಗಳನ್ನು ಹಾಗೂ ಶಾಲೆ, ಆಸ್ಪತ್ರೆ, ಗೋಮಾಳಗಳನ್ನು ಯೋಜನೆ ವ್ಯಾಪ್ತಿಯಿಂದ ಹೊರಗಿಡಬೇಕು. ಕೇರಳದಲ್ಲಿ ಮಾಡಿದಂತೆ ಜನ ವಸತಿ ಪ್ರದೇಶ ಹಾಗೂ ಜನವಸತಿ ರಹಿತ ಪ್ರದೇಶಗಳನ್ನು ಸರ್ವೆ ಮಾಡಿಸಿ ಜನವಸತಿ ರಹಿತ ಪ್ರದೇಶಗಳನ್ನು ಮಾತ್ರ ಯೋಜನಾ ವ್ಯಾಪ್ತಿಯಲ್ಲಿ ಸೇರಿಸಿ ಜನವಸತಿ ಪ್ರದೇಶಗಳನ್ನು ಯೋಜನಾ ವರದಿಯಿಂದ ಕೈಬಿಡಬೇಕೆಂದು ಆಗ್ರಹಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಯಾವುದೆ ಕ್ರಮ ಈ ಹಿಂದಿನ ಸರ್ಕಾರ ಕೈಗೊಂಡಿಲ್ಲ, ಇದೀಗ ಕೇಂದ್ರ ಸರ್ಕಾರ ಏಕಾಏಕಿ ಕಸ್ತೂರಿ ರಂಗನ್‌ ವರದಿ ಅಂತಿಮ ಅಧಿಸೂಚನೆ ಹೊರಡಿಸಿದರೆ ಮಲೆನಾಡಿಗರ ಬದುಕು ಅತಂತ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.

ಮೂರು ವಲಯಗಳಾಗಿ ವಿಂಗಡಣೆ: ಕಸ್ತೂರಿ ರಂಗನ್‌ ವರದಿ ಜಾರಿಯಿಂದ ತಾಲೂಕಿನ ಶೇ.37 ಭಾಗ ಸೂಕ್ಷ್ಮವಲಯಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಈ ಯೋಜನೆಯಲ್ಲಿ ಕೆಂಪು, ಕೇಸರಿ ಹಾಗೂ ಹಸಿರು ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಯಾವುದೆ ರೀತಿಯ ಕಾರ್ಖಾನೆಗಳನ್ನು ತೆರೆಯಲು ಅವಕಾಶವಿರುವುದಿಲ್ಲ. ಕೃಷಿ ಭೂಮಿಗೆ ರಸಗೊಬ್ಬರ, ಕ್ರಿಮಿನಾಶಕ ಬಳಸುವಂತಿಲ್ಲ. ಕಾμ ತೋಟಗಳಲ್ಲಿ ಮರ ಕಡಿಯುವಂತಿಲ್ಲ. ವಿದ್ಯುತ್‌ ಉತ್ಪತ್ತಿ ಮಾಡುವಂತಿಲ್ಲ, ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣಕ್ಕೆ ನಿರ್ಬಂಧ, ಹಲವು ನಿಬಂಧನೆಗಳನ್ನು ಹೇರಲಾಗುತ್ತದೆ. ದನ ಮೇಯಿಸಲು, ಸೌದೆ ಕಡಿಯಲು ಸೇರಿದಂತೆ ಕಾಡು ಪ್ರವೇಶಕ್ಕೆ ನಿರ್ಬಂಧ ಹೇರಲಾಗುತ್ತದೆ.ವರದಿ ಅನುಷ್ಠಾನ ಮಾಡುವುದಾದರೆ ಸರ್ಕಾರ ಈ ಪ್ರದೇಶಗಳಲ್ಲಿ ವಾಸಿಸುವ ಜನರ ಆಸ್ತಿಪಾಸ್ತಿಗಳಿಗೆ ಸೂಕ್ತ ಪರಿಹಾರ ಕೊಟ್ಟು ಒಕ್ಕಲೆಬ್ಬಿಸಲಿ.

ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿ: ತಾಲೂಕಿನ ಕಾಡುಮನೆ ಗ್ರಾಮದಲ್ಲಿ ಮಾತ್ರ ಏಕೈಕ ಚಹಾ ತೋಟ ಹಾಗೂ ಚಹಾ ತಯಾರಿಸುವ ಕಾರ್ಖಾನೆಯಿದ್ದು ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಾರೆ. ಕಸ್ತೂರಿ ರಂಗನ್‌ ವರದಿ ಅನುಷ್ಠಾನಗೊಂಡರೆ ಈ ಕಾರ್ಖಾನೆಯನ್ನು ಮುಚ್ಚಬೇಕಾಗುವುದರಿಂದ ಸಾವಿರಾರು ಕಾರ್ಮಿಕ ಕುಟುಂಬಗಳು ಬೀದಿಗೆ ಬೀಳಬೇಕಾಗುತ್ತದೆ. ಹಾಗಾಗಿ ಕಾರ್ಮಿಕರ ಬದುಕಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.

ಪರಿಸರ ಸಂರಕ್ಷಣೆಯಾದಲ್ಲಿ ಮಾತ್ರ ನಾವು ಉಳಿ ಯಲು ಸಾಧ್ಯ, ಅರಣ್ಯ ಪ್ರದೇಶಗಳಲ್ಲಿ ಅಕ್ರಮ ವಾಗಿ ನಿರ್ಮಾಣ ಮಾಡಿರುವ ರೆಸಾರ್ಟ್‌ ಹಾಗೂ ಹೋಂ ಸ್ಟೇ ಗಳನ್ನು ತೆರವು ಮಾಡಬೇಕು ಹಾಗೂ ಯೋಜನೆ ವ್ಯಾಪ್ತಿ ಯಲ್ಲಿ ಬರುವ ಗ್ರಾಮಗಳಲ್ಲಿ ಯಾವುದೆ ಕಾರ್ಖಾನೆಗಳನ್ನು ಮಾಡಲು ಅವಕಾಶ ಕೊಡಬಾರದು. ಜನಸಾಮಾನ್ಯರು ಎಂದಿನಂತೆ ಇರಲು ಅವಕಾಶ ಕೊಡಬೇಕು. – ಇತಿಹಾಸ್‌, ಪರಿಸರ ಹೋರಾಟಗಾರ

ಈಗಾಗಲೆ ನಮ್ಮ ಬಿಜೆಪಿ ಪಕ್ಷದ ಶಾಸಕರಾದ ಆರಂಗ ಜ್ಞಾನೇಂದ್ರರವರು ಸದನದಲ್ಲಿ ಮಾತನಾಡಿದ್ದಾರೆ. ನಾನು ಸಹ ವರದಿಯ ಅನುಷ್ಠಾನದಿಂದ ಆಗುವ ಸಮಸ್ಯೆಗಳ ಕುರಿತು ಸದನದಲ್ಲಿ ಮಾತನಾಡುತ್ತೇನೆ. -ಸಿಮೆಂಟ್‌ ಮಂಜು, ಶಾಸಕರು

ಜನ ನೆಲೆಸಿರುವ ಪ್ರದೇಶಗಳನ್ನು ಈ ಯೋಜನೆ ವ್ಯಾಪ್ತಿಯಿಂದ ಹೊರ ಇಡಬೇಕೆಂದು ಈ ಹಿಂದಿನ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವು ಹಾಗೂ ಮರು ಸರ್ವೆ ಮಾಡಲು ಸಹ ಮನವಿ ಮಾಡಿದ್ದೇವು. ಆದರೆ ಹಿಂದಿನ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ. ಕಸ್ತೂರಿ ರಂಗನ್‌ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. –ಡಾ.ಮೋಹನ್‌ ಕುಮಾರ್‌, ಅಧ್ಯಕ್ಷರು, ಕರ್ನಾಟಕ ಬೆಳೆಗಾರರ ಒಕ್ಕೂಟ.

– ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next