Advertisement

ಗ್ರಾಮಗಳ ಭೌತಿಕ ಸಮೀಕ್ಷೆಗೆ ಭಾಕಿಸಂ ಆಗ್ರಹ

11:45 PM Dec 15, 2020 | mahesh |

ಉಡುಪಿ: ಪಶ್ಚಿಮಘಟ್ಟದ ಸಂರಕ್ಷಣೆ ದೃಷ್ಟಿಯಿಂದ ಡಾ| ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಡಿ. 30 ರೊಳಗೆ ಕೇಂದ್ರ ಸರಕಾರ ಜಾರಿಗೊಳಿಸಬೇಕಿದ್ದು, ಒಂದು ವೇಳೆ ಯಥಾವತ್‌ ಜಾರಿಯಾದರೆ ಆ ಭಾಗದ ಜನರಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಭಾರತೀಯ ಕಿಸಾನ್‌ ಸಂಘ ಅಭಿಪ್ರಾಯಪಟ್ಟಿದೆ.

Advertisement

ಮಂಗಳವಾರ ನಡೆದ ಜಿಲ್ಲಾ ಸಮಿತಿಯ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಸದನ ಸಮಿತಿ ಮೂಲಕ ಸಮೀಕ್ಷೆ ನಡೆಸಿ ಕೇರಳಕ್ಕಿಂತ ಉತ್ತಮ ವರದಿ ನೀಡುತ್ತೇವೆ ಎಂದು ಹೇಳಿದ್ದ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರವು, ಜನರ ವಿರೋಧವಿರುವುದರಿಂದ ಡಾ| ಕಸ್ತೂರಿ ರಂಗನ್‌ ವರದಿಯನ್ನು ಕೈಬಿಡಬೇಕು’ ಎಂದು ಶಿಫಾರಸು ಮಾಡಿ ಕೈತೊಳೆದುಕೊಂಡಿದೆ. ಇದೀಗ ಯಡಿಯೂರಪ್ಪ ನೇತೃತ್ವದ ಸರಕಾರವೂ ರಾಜಕೀಯ ಹೇಳಿಕೆ ಗಳನ್ನು ನೀಡಿ ಕಾಲ ಕಳೆಯುತ್ತಿದೆ ಎಂದು ಸಂಘ ದೂರಿದೆ.

ಡಾ| ಕಸ್ತೂರಿ ರಂಗನ್‌ ವರದಿ ಜಾರಿಯಲ್ಲಿ ಪ್ರೊ| ಮಾಧವ ಗಾಡ್ಗಿàಳ್‌ ಸಮಿತಿ ವರದಿಯೂ ಸೇರಿರಬಹುದು ಎಂಬ ಶಂಕೆ ಜನರಲ್ಲಿ ಮೂಡಿದ್ದು, ಆ ಬಗ್ಗೆ ಸರಕಾರ ಸ್ಪಷ್ಟನೆ ನೀಡುತ್ತಿಲ್ಲ. ಮೂಕಾಂಬಿಕಾ ವನ್ಯಜೀವಿ ಸಂರಕ್ಷಣಾ ಪ್ರದೇಶದ 25 ಗ್ರಾಮಗಳ 12,508 ಹೆಕ್ಟೇರ್‌, ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ 11 ಗ್ರಾಮದ 6816 ಹೆ. ಸೋಮೇಶ್ವರ ವನ್ಯಜೀವಿವಿಭಾಗದ 16 ಗ್ರಾಮಗಳ 6994 ಹೆ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗಾಗಲೀ ಜನಪ್ರತಿನಿಧಿ ಗಳಿಗಾಗಲೀ ಅರಿವಿದ್ದಂತೆ ಕಾಣುತ್ತಿಲ್ಲ ಎಂಬ ಆರೋಪ ಕೇಳಿಬಂದಿತು.

ಸರಕಾರದ ಅಸಡ್ಡೆ
ಭೌತಿಕ ಸಮೀಕ್ಷೆ ನಡೆಸಿ, ಕೇಂದ್ರ ಸರಕಾರಕ್ಕೆ ಶಿಫಾರಸು ನೀಡದೆ ಅಸಡ್ಡೆ ತೋರಿರುವ ರಾಜ್ಯ ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನರು ಬಲಿಯಾಗುತ್ತಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಹೇಳಿದರು.

ಜಿಲ್ಲಾಧ್ಯಕ್ಷ ನವೀನ್‌ ಚಂದ್ರ ಜೈನ್‌, ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್‌, ಕೋಶಾಧಿಕಾರಿ ವಾಸುದೇವ ಶ್ಯಾನುಭಾಗ್‌, ಪ್ರಮುಖ ರಾದ ಉಮಾನಾಥ ರಾನಡೆ, ಆಸ್ತೀಕ ಶಾಸ್ತ್ರಿ, ಸೀತಾರಾಮ ಗಾಣಿಗ, ಸುಂದರ
ಶೆಟ್ಟಿ, ಪಾಂಡುರಂಗ ಹೆಗ್ಡೆ, ಕೆ.ಪಿ.ಭಂಡಾರಿ, ಚಂದ್ರಹಾಸ ಶೆಟ್ಟಿ, ಪ್ರಾಣೇಶ್‌ ಯಡಿಯಾಳ್‌, ವಿಶ್ವನಾಥ ಶೆಟ್ಟಿ,
ರಾಮಚಂದ್ರ ಅಲ್ಸೆ ಉಪಸ್ಥಿತರಿದ್ದರು.

Advertisement

ಕೇಂದ್ರಕ್ಕೆ ಮನವರಿಕೆ ಮಾಡಿ
ರಾಜ್ಯ ಸರಕಾರ ಪ್ರತೀ ಗ್ರಾಮ ವ್ಯಾಪ್ತಿಯಲ್ಲಿ ಭೌತಿಕ ಸಮೀಕ್ಷೆ ನಡೆಸಿ ಸ್ಪಷ್ಟ ಕಾರಣಗಳೊಂದಿಗೆ ಯಾವ ಪ್ರದೇಶವನ್ನು ಕೈಬಿಡಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡದಿದ್ದಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಇದರ ವಿರುದ್ಧ ಜನರು ದಂಗೆ ಏಳುವ ಪರಿಸ್ಥಿತಿ ಬಾರದಂತೆ ಸರಕಾರ ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಸಂಘವು ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next