ಶ್ರೀನಗರ: ಪ್ರವಾದಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿದ್ದ ನೂಪುರ್ ಶರ್ಮಾ ಅವರ ತಲೆ ಕತ್ತರಿಸಿರುವ ಅಣಕು ವಿಡಿಯೋವೊಂದನ್ನು ಯೂಟ್ಯೂಬ್ ನಲ್ಲಿ ಪ್ರಕಟಿಸಿದ್ದ ಕಾಶ್ಮೀರಿ ಮೂಲದ ಯೂಟ್ಯೂಬರ್ ಶನಿವಾರ(ಜೂನ್ 11) ಬಹಿರಂಗ ಕ್ಷಮೆ ಕೇಳಿದ್ದಾನೆ.
ಇದನ್ನೂ ಓದಿ:ರಾಜಸ್ಥಾನ: ಅರ್ಚಕರನ್ನು ಹತ್ಯೆಗೈದು, ದೇವರ ವಿಗ್ರಹ ಕದ್ದೊಯ್ದ ಮೂವರು ಆರೋಪಿಗಳ ಬಂಧನ
“ನಿನ್ನೆ ನಾನು ನೂಪುರ್ ಶರ್ಮಾ ಅವರ ವಿಎಫ್ ಎಕ್ಸ್ ವಿಡಿಯೋ ಅಪ್ ಲೋಡ್ ಮಾಡಿರುವುದು ವೈರಲ್ ಆಗಿತ್ತು. ಅಲ್ಲದೇ ನೂಪುರ್ ಮಾಡಿದ್ದ ತಪ್ಪಿಗೆ ತಲೆ ತೆಗೆಯುವುದೇ ಪರಿಹಾರ ಎಂಬುದಾಗಿ ಅಡಿಬರಹ ನೀಡಿದ್ದು, ಇದು ದೊಡ್ಡ ವಿವಾದಕ್ಕೆ ಎಡೆಮಾಡಿಕೊಟ್ಟಿದೆ” ಎಂದಿರುವ ಯೂಟ್ಯೂಬರ್ ಫೈಸಲ್ ವಾನಿ, ತಾನು ಈ ಬಗ್ಗೆ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾನೆ.
ನಾನು ಯಾವುದೇ ಧರ್ಮಕ್ಕೆ ನೋವುಂಟು ಮಾಡುವ ಉದ್ದೇಶ ಹೊಂದಿಲ್ಲವಾಗಿತ್ತು. ಈಗಾಗಲೇ ನನ್ನ ಯೂಟ್ಯೂಬ್ ನಿಂದ ನೂಪುರ್ ಕುರಿತ ವಿಡಿಯೋವನ್ನು ಡಿಲೀಟ್ ಮಾಡಿದ್ದೇನೆ. ಅಷ್ಟೇ ಅಲ್ಲ ನನ್ನ ಕ್ಷಮೆಯಾಚನೆಯ ವಿಡಿಯೋವನ್ನು ಕೂಡಾ ಇತರ ವಿಡಿಯೋದಂತೆ ವೈರಲ್ ಆಗಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದು ಫೈಸಲ್ ಹೇಳಿರುವುದಾಗಿ ವರದಿ ವಿವರಿಸಿದೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಸಂದರ್ಶನವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟ ಪರಿಣಾಮ ನೂಪುರ್ ಅವರನ್ನು ಬಿಜೆಪಿ ಅಮಾನತುಗೊಳಿಸಿತ್ತು. ಅಲ್ಲದೇ ವಿವಾದದಿಂದಾಗಿ ಉತ್ತರಪ್ರದೇಶ, ದೆಹಲಿ, ಜಾರ್ಖಂಡ್, ಪಶ್ಚಿಮಬಂಗಾಳ ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ, ಕೋಮು ಘರ್ಷಣೆ ನಡೆದಿತ್ತು.