Advertisement

ಉಗ್ರನಾದ 36 ಗಂಟೆಗಳಲ್ಲೇ ಕಾಶ್ಮೀರ ವಿವಿ ಪ್ರೊಫೆಸರ್‌ ಹತ್ಯೆ

04:35 AM May 07, 2018 | Team Udayavani |

ಶ್ರೀನಗರ: ಭದ್ರತಾ ಪಡೆಗಳಿಗೆ ಅತಿದೊಡ್ಡ ಯಶಸ್ಸು ಎಂಬಂತೆ ಭಾನುವಾರ ಜಮ್ಮು-ಕಾಶ್ಮೀರದ ಶೋಪಿಯಾನ್‌ ನಲ್ಲಿ ನಡೆದ ಎನ್‌ ಕೌಂಟರ್‌ ನಲ್ಲಿ ಹಿಜ್ಜುಲ್‌ ಮುಜಾಹಿದೀನ್‌ ನ ಪ್ರಮುಖ ಕಮಾಂಡರ್‌ ಸೇರಿದಂತೆ ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಮೃತ ಉಗ್ರರ ಪೈಕಿ ಕಾಶ್ಮೀರ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್‌ ಕೂಡ ಸೇರಿದ್ದು, ಹಿಜ್ಬುಲ್‌ ಗೆ ಸೇರ್ಪಡೆಯಾದ 36 ಗಂಟೆಗಳೊಳಗೆ ಈತ ಪ್ರಾಣಕಳೆದುಕೊಂಡಿದ್ದಾನೆ.

Advertisement

ಛತ್ತಬಾಲ್‌ ಪ್ರದೇಶದಲ್ಲಿ ಮೂವರು ಉಗ್ರರನ್ನು ಹತ್ಯೆಗೈದ 24 ಗಂಟೆಗಳಲ್ಲೇ ಎರಡನೇ ಎನ್‌ ಕೌಂಟರ್‌ ನಡೆದಿದೆ. ಇಲ್ಲಿನ ಬದಿಗಾಮ್‌ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಭಾನುವಾರ ಬೆಳಗ್ಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಅಷ್ಟರಲ್ಲಿ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು, ಕೆಲವು ಗಂಟೆಗಳ ಕಾಲ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ, ಸಹಾಯಕ ಪ್ರೊಫೆಸರ್‌ ಮೊಹಮ್ಮದ್‌ ರಫಿ ಭಟ್‌ ಮನವೊಲಿಸಿ, ಶರಣಾಗುವಂತೆ ಮಾಡಲು ಭದ್ರತಾ ಪಡೆಗಳು ಸಾಕಷ್ಟು ಪ್ರಯತ್ನ ಪಟ್ಟರೂ ಫ‌ಲ ಸಿಗಲಿಲ್ಲ ಎಂದು ಕಾಶ್ಮೀರ ಐಜಿಪಿ ಎಸ್‌.ಪಿ.ಪಾಣಿ ತಿಳಿಸಿದ್ದಾರೆ. ರಫಿ ಭಟ್‌ ಉಗ್ರರೊಂದಿಗಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ, ನಾವು ಗಂದೇರ್‌ಬಾಲ್‌ ನಲ್ಲಿರುವ ಆತನ ಕುಟುಂಬ ಸದಸ್ಯರನ್ನು ಸ್ಥಳಕ್ಕೆ ಕರೆತಂದು, ಮನವೊಲಿಸಲು ಯತ್ನಿಸಿದೆವು. ಆದರೆ ನಮ್ಮ ಪ್ರಯತ್ನ ವಿಫ‌ಲವಾಯಿತು ಎಂದು ಪಾಣಿ ಹೇಳಿದ್ದಾರೆ.

ಎನ್‌ ಕೌಂಟರ್‌ ನಲ್ಲಿ ಹಿಜ್ಬುಲ್‌ ಮುಜಾಹಿದೀನ್‌ನ ಟಾಪ್‌ ಕಮಾಂಡರ್‌ ಸದ್ದಾಂ ಪೊದ್ದರ್‌, ಪ್ರೊಫೆಸರ್‌ ರಫಿ ಭಟ್‌, ತೌಸೀಫ್ ಶೇಖ್‌, ಆದಿಲ್‌ ಮಲಿಕ್‌,  ಬಿಲಾಲ್‌ ಅಲಿಯಾಸ್‌ ಮೋಲ್ವಿ ಹತರಾಗಿದ್ದಾರೆ. ಇಬ್ಬರು ಪೊಲೀಸರು, ಯೋಧ ಗಾಯಗೊಂಡಿದ್ದಾರೆ. ಎನ್‌ ಕೌಂಟರ್‌ ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಐವರು ನಾಗರಿಕರ ಸಾವು: ಎನ್‌ ಕೌಂಟರ್‌ ಬೆನ್ನಲ್ಲೇ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆಗಿಳಿದಿದ್ದು, ಈ ವೇಳೆ ಐವರು ನಾಗರಿಕರು ಮೃತಪಟ್ಟಿದ್ದಾರೆ. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ವಿವಿಗೆ ರಜೆ ಘೋಷಣೆ: ಕಾಶ್ಮೀರ ವಿವಿ ಸೋಮವಾರದಿಂದ 2 ದಿನ ರಜೆ ಘೋಷಿಸಿದ್ದು, ಸೋಮವಾರ ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಿದೆ. ದಕ್ಷಿಣ ಕಾಶ್ಮೀರ,  ಕೇಂದ್ರ ಕಾಶ್ಮೀರದ ಕೆಲವು ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ.

Advertisement

ಪ್ರೊಫೆಸರ್‌ ಆದವ ಗನ್‌ ಹಿಡಿದ!


ಕಾಶ್ಮೀರ ವಿವಿಯ ಸಮಾಜಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್‌ ರಫಿ ಭಟ್‌ ಇದ್ದಕ್ಕಿದ್ದಂತೆ ಶುಕ್ರವಾರ ಮಧ್ಯಾಹ್ನ 3.30ರಿಂದ ನಾಪತ್ತೆಯಾಗಿದ್ದ. ಕಣ್ಮರೆಯಾಗುವ ಮುನ್ನ ತಾಯಿಯೊಂದಿಗೆ ಮಾತನಾಡಿದ್ದ ಭಟ್‌, ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಯಾವ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಶನಿವಾರ ಬೆಳಗ್ಗೆಯಾದರೂ ಭಟ್‌ ಮನೆಗೆ ವಾಪಸಾಗದ ಕಾರಣ, ಅವರ ಕುಟುಂಬವು ವಿವಿಗೆ ಈ ಕುರಿತು ಮಾಹಿತಿ ನೀಡಿತ್ತು. ಅಷ್ಟರಲ್ಲಿ ಕ್ಯಾಂಪಸ್‌ ನಾದ್ಯಂತ ಪ್ರತಿಭಟನೆ ಆರಂಭವಾಗಿತ್ತು. ಪ್ರೊಫೆಸರ್‌ ಅನ್ನು ಪತ್ತೆಹಚ್ಚಲು ಎಲ್ಲ ರೀತಿ ಪ್ರಯತ್ನಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಕುಲಪತಿ ಆಶ್ವಾಸನೆ ನೀಡಿದ್ದರು. ಆದರೆ, ಭಾನುವಾರ ಬೆಳಗಾಗುವ ಹೊತ್ತಿಗೆ ಎನ್‌ ಕೌಂಟರ್‌ ಗೆ ಬಲಿಯಾದ ಉಗ್ರರ ಜೊತೆ ಪ್ರೊ.ಭಟ್‌ ಇದ್ದದ್ದು ಗೊತ್ತಾಯಿತು. ಅಷ್ಟೇ ಅಲ್ಲ, ಸಾಯುವ ಸ್ವಲ್ಪ ಹೊತ್ತಿಗೆ ಮುಂಚೆ ತಂದೆಗೆ ಕರೆ ಮಾಡಿದ್ದ ಭಟ್‌, ‘ನನ್ನಿಂದ ನಿಮಗೆ ನೋವಾಗಿದ್ದರೆ, ನನ್ನನ್ನು ಕ್ಷಮಿಸಿ. ಇದು ನನ್ನ ಕೊನೆಯ ಕರೆ’ ಎಂದಿದ್ದ. ಒಟ್ಟಿನಲ್ಲಿ ವಿದ್ಯೆ ಕಲಿಸಬೇಕಿದ್ದª ಪ್ರೊಫೆಸರ್‌ವೊಬ್ಬ ಉಗ್ರ ಸಂಘಟನೆಗೆ ಸೇರ್ಪಡೆಯಾದ ಕೇವಲ 36 ಗಂಟೆಗಳಲ್ಲೇ ಪ್ರಾಣ ಬಿಟ್ಟಿದ್ದಾನೆ.

ಈ ಎನ್‌ ಕೌಂಟರ್‌ ಕೇವಲ ಉದ್ಯೋಗ ಕಲ್ಪಿಸುವುದರಿಂದ ಮತ್ತು ಅಭಿವೃದ್ಧಿಯ ಮಾತುಗಳಿಂದ ಕಾಶ್ಮೀರದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವುದು ಸುಳ್ಳು ಎಂಬುದನ್ನು ಸಾಬೀತುಪಡಿಸಿದೆ.
– ಒಮರ್‌ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next