Advertisement

ಕಾಶ್ಮೀರ: ಶರ್ಮಾ ಸಂಧಾನ

06:05 AM Oct 24, 2017 | Team Udayavani |

ಹೊಸದಿಲ್ಲಿ: ಕಾಶ್ಮೀರ ವಿವಾದ ಬಗೆ ಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರವು ಸುಸ್ಥಿರ ಮಾತುಕತೆಗಾಗಿ ಸಂಧಾನಕಾರರೊಬ್ಬರನ್ನು ನೇಮಕ ಮಾಡಿದೆ. ಗುಪ್ತಚರ ಘಟಕ (ಐಬಿ)ದ ಮಾಜಿ ನಿರ್ದೇಶಕ ದಿನೇಶ್ವರ್‌ ಶರ್ಮಾ ಅವರು ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದ್ದು, ಕಣಿವೆ ರಾಜ್ಯದ ನಾಗರಿಕರ ಕಾನೂನುಬದ್ಧ ಬಯಕೆಯನ್ನು ಅರಿತು, ಸಂಬಂಧಪಟ್ಟ ಎಲ್ಲರೊಂದಿಗೂ ಮಾತುಕತೆ ನಡೆಸಿ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ.

Advertisement

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಸೋಮವಾರ ಈ ಮಹತ್ವದ ಘೋಷಣೆ ಮಾಡಿದ್ದಾರೆ. ತ್ವರಿತ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಸಿಂಗ್‌, “ಐಬಿ ಮಾಜಿ ನಿರ್ದೇಶಕ ದಿನೇಶ್ವರ್‌ ಶರ್ಮಾ ಅವರನ್ನು ಸರಕಾರದ ಪ್ರತಿನಿಧಿಯನ್ನಾಗಿ ನೇಮಿಸಲಾಗಿದ್ದು, ಅವರು ಕಣಿವೆ ರಾಜ್ಯದ ಎಲ್ಲ ವರ್ಗಗಳ ಜನ ಹಾಗೂ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆ ಮೂಲಕ ಕಾಶ್ಮೀರ ವಿವಾದವನ್ನು ಸರಕಾರ ಇತ್ಯರ್ಥಗೊಳಿಸಲಿದೆ’ ಎಂದರು.

ಶರ್ಮಾಗೆ ಬಿಟ್ಟಿದ್ದು: ಶರ್ಮಾ ಅವರು ಹುರಿಯತ್‌ ಕಾನ್ಫರೆನ್ಸ್‌ನಂಥ ಪ್ರತ್ಯೇಕತಾವಾದಿ ಸಂಘಟನೆಗಳೊಂದಿಗೂ ಮಾತುಕತೆ ನಡೆಸುತ್ತಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿಂಗ್‌, “ದಿನೇಶ್ವರ್‌ ಶರ್ಮಾ ಅವರು ಸಂಪುಟ ಕಾರ್ಯದರ್ಶಿಯ ಹುದ್ದೆ ಹೊಂದಿದ್ದು, ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಯಾರ ಜತೆ ಮಾತನಾಡಬೇಕು, ಯಾರೊಂದಿಗೆ ಮಾತನಾಡಬಾರದು ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಸ್ವಾತಂತ್ರೊéàತ್ಸವ ಭಾಷಣದ ಬಗ್ಗೆ ಪ್ರಸ್ತಾವಿಸಿದ ರಾಜನಾಥ್‌, “ಕಾಶ್ಮೀರ ಸಮಸ್ಯೆಯು ಬುಲೆಟ್‌ನಿಂದ ಅಥವಾ ಬೈಗುಳದಿಂದ ಇತ್ಯರ್ಥವಾಗದು. ಬದಲಿಗೆ ಆಲಿಂಗನದಿಂದ ಪರಿಹಾರ ಕಾಣುವುದು ಎಂದು ಪ್ರಧಾನಿ ಹೇಳಿದ್ದರು. ಅವರ ಹೇಳಿಕೆಯೇ ಕಾಶ್ಮೀರದ ಕುರಿತು ಸರಕಾರದ ನೀತಿ ಮತ್ತು ಉದ್ದೇಶವನ್ನು ಬಹಿರಂಗಪಡಿಸಿದೆ. ಜತೆಗೆ ಮೋದಿ ಅವರು ರಾಜಕೀಯ ಪ್ರತಿನಿಧಿಗಳ ಜತೆ ಸರಣಿ ಸಭೆ ನಡೆಸಿದ್ದಾರೆ.

ಅವರೆಲ್ಲರೂ ಕಣಿವೆ ರಾಜ್ಯದಲ್ಲಿ ಮಾತುಕತೆಯ ಪ್ರಕ್ರಿಯೆ ಆರಂಭವಾಗಬೇಕು ಎಂದೇ ಇಚ್ಛಿಸಿದ್ದಾರೆ’ ಎಂದರು. ಈ ಹಿಂದಿನ ಯತ್ನಗಳು ವಿಫ‌ಲವಾದ ಕುರಿತ ಪ್ರಶ್ನೆಗೆ, “ದಯವಿಟ್ಟು ನನ್ನ ಮಾತು ಕೇಳಿ. ನಾವು ಶುದ್ಧ ಮನಸ್ಸಿನಿಂದ ಮತ್ತು ಸ್ಪಷ್ಟ ನೀತಿಯಿಂದ ಈ ಕೆಲಸಕ್ಕೆ ಮುಂದಾಗಿದ್ದೇವೆ’ ಎಂದರು ರಾಜನಾಥ್‌.

Advertisement

ಯಾರಿವರು ಶರ್ಮಾ ? 
ದಿನೇಶ್ವರ್‌ ಶರ್ಮಾ 1979ನೇ ಬ್ಯಾಚ್‌ನ ನಿವೃತ್ತ ಐಪಿಎಸ್‌ ಅಧಿಕಾರಿಯಾಗಿದ್ದು, 2014ರ ಡಿಸೆಂಬರ್‌ನಿಂದ 2016ರ ವರೆಗೆ ಐಬಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದವರು. ಶರ್ಮಾ ಅವರು ಕೇಂದ್ರ ಸರಕಾರ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕಾಗಿ 2002ರ ಬಳಿಕ ನೇಮಕ ಮಾಡಿರುವ 4ನೇ ಸಂಧಾನಕಾರರಾಗಿದ್ದಾರೆ. ಮೊದಲು ಕೇಂದ್ರದ ಮಾಜಿ ಸಚಿವ ಕೆ.ಸಿ. ಪಂತ್‌, ಅನಂತರ ಎನ್‌.ಎನ್‌. ವೋಹ್ರಾ, ಎಂ.ಎಂ. ಅನ್ಸಾರಿ, ರಾಧಾ ಕುಮಾರ್‌, ದಿವಂಗತ ಪತ್ರಕರ್ತ ದಿಲೀಪ್‌ ಪಡಗಾಂವ್ಕರ್‌ ಅವರು ಸಂಧಾನಕಾರರಾಗಿ ನೇಮಕವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next