ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿದ್ದು ಭಾರತೀಯ ಮಾಧ್ಯಮಗಳು ಬಹುತೇಕ ಸ್ವಾಗತಿಸಿವೆ. ನಿರೀಕ್ಷೆಯಂತೆ, ಪಾಕಿಸ್ತಾನ ಮಾಧ್ಯಮಗಳು ಟೀಕಿಸಿವೆ. ಇನ್ನು, ನಾನಾ ದೇಶಗಳ ಮಾಧ್ಯಮಗಳಲ್ಲಿ ಬಹುತೇಕ ಮಾಧ್ಯಮಗಳು, ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದ್ದು, ಅದರಿಂದ ಕಾಶ್ಮೀರದಲ್ಲಿ ಅಶಾಂತಿ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿವೆ.
ಖಂಡತುಂಡವಾಗಿ ಟೀಕಿಸಿದ ಪಾಕ್ ಮಾಧ್ಯಮಗಳು: ಪಾಕಿಸ್ತಾನದ ಡಾನ್, ದ ನ್ಯೂಸ್, ಪಾಕಿಸ್ತಾನ್ ಟುಡೇ, ಡೈಲಿ ಪಾಕಿಸ್ತಾನ್ ಮುಂತಾದ ಮಾಧ್ಯಮಗಳು, ಸೋಮವಾರವನ್ನು ಕರಾಳ ದಿನವೆಂದು ಕರೆದಿವೆ. ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಕರೆದಿ ರುವ ಆ ಮಾಧ್ಯಮಗಳು, “”ಮುಸ್ಲಿಮರೇ ಹೆಚ್ಚಾಗಿರುವ ಪ್ರಾಂತ್ಯಗಳ ಮೇಲೆ ಮೋದಿ ಸರ್ಕಾರ ದಬ್ಟಾಳಿಕೆ ನಡೆಸಿ, ಆ ಪ್ರಾಂತ್ಯದ ಹಕ್ಕನ್ನು ಕಸಿದುಕೊಂಡಿದೆ. ಇದು ಅಲ್ಲಿ ಹಿಂಸಾಚಾರಕ್ಕೆ ಪ್ರೇರಣೆ ನೀಡುತ್ತದೆ” ಎಂದಿವೆ.
ಸೌದಿ ಗೆಜೆಟ್: ಇನ್ನು, ಸೌದಿ ಅರೇಬಿಯಾದ ಪ್ರಮುಖ ಮಾಧ್ಯಮವಾದ ಸೌದಿ ಗೆಜೆಟ್, ಕಾಶ್ಮೀರದ ಸ್ವಾಯತ್ತತೆಯನ್ನು ಹಿಂಪಡೆದಿದ್ದು ಒಂದು ಅಪಾಯಕಾರಿ ಪ್ರಮಾದ ಎಂದು ಹೇಳಿದೆ. ಇಂಥ ನಿರ್ಧಾರದಿಂದ ಏನೂ ಒಳಿತಾಗುವುದಿಲ್ಲ. ಕಣಿವೆಯಲ್ಲಿ ಹಿಂಸೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಪತ್ರಿಕೆ ಹೇಳಿದೆ.
ಖಲೀಜ್ ಟೈಮ್ಸ್: ಐಎಎನ್‌ಎಸ್ ಸುದ್ದಿಸಂಸ್ಥೆಯ ವರದಿಗಳನ್ನು ಆಧರಿಸಿ ಎರಡು ವರದಿಗಳನ್ನು ಪ್ರಕಟಿಸಿರುವ ಖಲೀಜ್ ಟೈಮ್ಸ್, ಒಂದರಲ್ಲಿ, ಕಾಶ್ಮೀರದ ವಿಚಾರವನ್ನು ಹೇಗೆ ಗೌಪ್ಯವಾಗಿ ಅನುಷ್ಠಾನಗೊಳಿಸಲಾಯಿತು ಎಂದು ವಿವರಿಸಿದ್ದರೆ, ಮತ್ತೂಂದರಲ್ಲಿ, ಇನ್ನು ಮುಂದೆ ಕಾಶ್ಮೀರದಲ್ಲಿ ಏನಾಗಲಿದೆ ಎಂದು ಮತ್ತೂಂದು ಲೇಖನದಲ್ಲಿ ವಿವರಿಸುವ ಪ್ರಯತ್ನ ಮಾಡಿದೆ.
ದ ಜೆರುಸಲೇಂ ಪೋಸ್ಟ್: ವೈ ಕಾಶ್ಮೀರ್ ಮ್ಯಾಟರ್ಸ್ ಎಂಬ ವಿಶ್ಲೇಷಣಾತ್ಮಕ ಲೇಖನವೊಂದನ್ನು ಪ್ರಕಟಿಸಿದೆ. ಇದರಲ್ಲಿ ಕಾಶ್ಮೀರದಲ್ಲಿನ ಪರಿಸ್ಥಿತಿ ಹೇಗೆ ಪಾಕಿಸ್ತಾನ, ಅಮೆರಿಕ ಹಾಗೂ ಅಫ್ಘಾನಿಸ್ತಾನದ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿಚಾರದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಇಸ್ರೇಲ್‌ನ ಮತ್ತೂಂದು ಪತ್ರಿಕೆ ಹಾರೆಟ್ಜ್, ವಿಶ್ಲೇಷಣಾತ್ಮಕ ಲೇಖನವೊಂದನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ಮುಸುಕು ಯುದ್ಧ, ಕಾಶ್ಮೀರವಿನ್ನು ಹೊಸ ವೇದಿಕೆಯಾಗಲಿದೆ. ಇರಾನ್ ದೇಶವು, ಕಾಶ್ಮೀರದಲ್ಲಿರುವ ತನ್ನ ಸುನ್ನಿ ಪಂಗಡದ ಜನರ ರಕ್ಷಣೆಗೆ ಮುಂದಾದರೆ, ಸೌದಿ ಸಹ ಕಾಶ್ಮೀರದಲ್ಲಿ ತನ್ನ ಪ್ರತಿಸ್ಪರ್ಧೆಗೆ ಇಳಿಯುತ್ತದೆ ಎಂದು ಹೇಳಿದೆ.
ವಾಷಿಂಗ್ಟನ್ ಪೋಸ್ಟ್ ಮತ್ತು ನ್ಯೂಯಾರ್ಕ್ ಟೈಮ್ಸ್: ಈ ಎರಡೂ ಪತ್ರಿಕೆಗಳು ಮೋದಿಯವರ ನಡೆಯನ್ನು ಉಗ್ರವಾಗಿ ಟೀಕಿಸಿದ್ದು, ಕಾಶ್ಮೀರದಲ್ಲಿ ಇನ್ನು ಅಶಾಂತಿಯೇ ಮೇಳೈಸುತ್ತದೆ ಎಂದು ಹೇಳಿವೆ. ಮೊದಲೇ ಅರಾಜಕತೆಯ ತಾಣವಾಗಿದ್ದ ಕಾಶ್ಮೀರದಲ್ಲಿ ಮೋದಿ ಸರ್ಕಾರ, ತನ್ನ ಬಲಪ್ರಯೋಗ ಮಾಡಿ, ಆ ರಾಜ್ಯದ ಸ್ವಾಯತ್ತತೆಯನ್ನು ಹಿಂಪಡೆದಿದೆ ಎಂದು ಹೇಳಿವೆ.
ಅಲ್-ಜಝೀರಾ: ಇಡೀ ಭಾರತವನ್ನು ಹಿಂದುತ್ವ ರಾಷ್ಟ್ರವನ್ನಾಗಿಸಲು ಹೊರಟಿರುವ ಬಿಜೆಪಿ ಸರ್ಕಾರದ ಮತ್ತೂಂದು ಮಹತ್ವದ ಹೆಜ್ಜೆ. ಕೇಂದ್ರ ಸರ್ಕಾರದ ನಿರ್ಧಾರ ಜಾರಿಗೊಂಡ ಸೋಮವಾರದ ದಿನವನ್ನು “ಗಾಢ ಕರಾಳ ದಿನ’ ಎಂದು ಬಣ್ಣಿಸಿದೆ. ಅಲ್ಲದೆ, ಕೇಂದ್ರ ಸರ್ಕಾರದ ನಡೆ ಕಪಟತನ ಹಾಗೂ ಕಾನೂನು ಬಾಹಿರವಾದದ್ದು ಎಂದು ಹೇಳಿದೆ.
ಬಿಬಿಸಿ: ಇನ್ನು, ಲಂಡನ್ ಮೂಲದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ), ಕಾಶ್ಮೀರವನ್ನು ಭಾರತೀಯ ಆಡಳಿತವಿರುವ ಕಾಶ್ಮೀರ ಎಂದೇ ಕರೆದಿದೆ. ಅಲ್ಲದೆ, ಸರ್ಕಾರದ ಈ ನಿರ್ಧಾರ ಕಣಿವೆಯಲ್ಲಿನ ಅರಾಜಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದೆ.