ಶ್ರೀನಗರ್: ಕಳೆದ ತಿಂಗಳಷ್ಟೇ ವಾಸಸ್ಥಳದ ಹಕ್ಕುಪತ್ರ ಪಡೆದಿದ್ದ ಚಿನ್ನದ ವ್ಯಾಪಾರಿಯನ್ನು ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿಯೇ ಉಗ್ರರು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಶ್ರೀನಗರದಲ್ಲಿ ನಡೆದಿರುವುದಾಗಿ ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
65 ವರ್ಷದ ಚಿನ್ನದ ವ್ಯಾಪಾರಿ ಸತ್ಪಾಲ್ ನಿಶ್ಚಲ್ ಕಳೆದ 50 ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ವಾಸವಾಗಿದ್ದರು. ಕಳೆದ ತಿಂಗಳು ಸತ್ಪಾಲ್ ಅವರು ಕೇಂದ್ರದ ಕಾಯ್ದೆಯನ್ವಯ ಕಾಯಂ ವಾಸಸ್ಥಳದ ಹಕ್ಕುಪತ್ರ ಪಡೆದಿದ್ದರು. ಇದರಿಂದ ಆಕ್ರೋಶಗೊಂಡ ಉಗ್ರರು ಚಿನ್ನದ ಮಳಿಗೆಯಲ್ಲಿಯೇ ಗುಂಡಿಟ್ಟು ಹತ್ಯೆಗೈದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಚಿನ್ನದ ವ್ಯಾಪಾರಿಯನ್ನು ಹತ್ಯೆಗೈದ ಹೊಣೆಯನ್ನು ಹೊತ್ತುಕೊಂಡಿರುವ ಉಗ್ರಗಾಮಿ ಸಂಘಟನೆ ಪ್ರಕಟಣೆ ನೀಡಿದ್ದು, ಆಭರಣ ವ್ಯಾಪಾರಿ ವಸಾಹತಿನ ಭಾಗವಾಗಿದ್ದು, ಇನ್ಮುಂದೆ ಯಾರೇ ಆಗಲಿ ಜಮ್ಮು-ಕಾಶ್ಮೀರದಲ್ಲಿ ವಾಸಸ್ಥಾನದ ಹಕ್ಕುಪತ್ರ ಪಡೆದಲ್ಲಿ ಅವರನ್ನು ಆಕ್ರಮಣಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.
ಜಮ್ಮು-ಕಾಶ್ಮೀರದಲ್ಲಿ ದೇಶದ ಯಾವುದೇ ರಾಜ್ಯದವರು ಕೂಡಾ ಜಾಗ ಖರೀದಿಸುವ ಕುರಿತು ಕೇಂದ್ರ ಸರ್ಕಾರ ನೂತನ ಕಾಯ್ದೆ ಜಾರಿಗೆ ತಂದಿತ್ತು. 2019ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. ನಂತರ ಇತರ ರಾಜ್ಯದವರು ಜಾಗ ಖರೀದಿಸಲು ಅನುಮತಿ ನೀಡಿತ್ತು.
ಈವರೆಗೆ ಕಾಶ್ಮೀರ ಕಣಿವೆಯಲ್ಲಿ 10 ಲಕ್ಷ ಸ್ಥಳೀಯ ನಿವಾಸಿಗಳಿಗೆ ವಾಸಸ್ಥಳದ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ ಕಾಶ್ಮೀರದಲ್ಲಿ ಎಷ್ಟು ಮಂದಿ ಸ್ಥಳೀಯರಲ್ಲದವರಿಗೆ ಹಕ್ಕು ಪತ್ರ ನೀಡಲಾಗಿದೆ ಎಂಬ ಅಂಕಿಅಂಶವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ವರದಿ ತಿಳಿಸಿದೆ.
ಸತ್ಪಾಲ್ ಕುಟುಂಬ ಮೂಲತಃ ಪಂಜಾಬ್ ನ ಗುರುದಾಸ್ ಪುರದವರು. ಆದರೆ ಕಳೆದ ಹಲವಾರು ದಶಕಗಳಿಂದ ಶ್ರೀನಗರದಲ್ಲಿ ವಾಸವಾಗಿದ್ದರು. ಕುಟುಂಬದ ಹಲವು ಸದಸ್ಯರು ಇಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ. ಕಾಶ್ಮೀರಿ ಪಂಡಿತರನ್ನು ಗುರಿಯಾಗಿರಿಸಿಕೊಂಡು ಉಗ್ರರು ಅಟ್ಟಹಾಸ ನಡೆಸುತ್ತಿದ್ದ ಸಂದರ್ಭದಲ್ಲಿಯೂ ಈ ಕುಟುಂಬ ಶ್ರೀನಗರದಲ್ಲಿಯೇ ವಾಸ್ತವ್ಯ ಮುಂದುವರಿಸಿದ್ದರು ಎಂದು ವರದಿ ಹೇಳಿದೆ.
“ನಾವು ಅವರನ್ನು ಯಾವತ್ತೂ ಹೊರಗಿನವರು ಎಂದು ಪರಿಗಣಿಸಿಯೇ ಇಲ್ಲ. ಅವರು ಕೂಡಾ ಕಾಶ್ಮೀರಿಯೇ ಆಗಿದ್ದರು. ಅವರ ಅಕಾಲಿಕ ಸಾವಿಗೆ ನಾವು ಪ್ರತಿಯೊಬ್ಬರು ಸಂತಾಪ ಸೂಚಿಸುತ್ತಿದ್ದೇವೆ” ಎಂದು ಸ್ಥಳೀಯ ನಿವಾಸಿ ಶಬೀರ್ ಅಹ್ಮದ್ ತಿಳಿಸಿದ್ದಾರೆ.