ಇಸ್ಲಾಮಾಬಾದ್: ನಾವು ಭಾರತದೊಂದಿಗಿನ ಯುದ್ಧದಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಇದರಿಂದಾಗಿ ಭಾರತದ ಜೊತೆ ಶಾಂತಿಯುತ ಮಾತುಕತೆಗೆ ಸಿದ್ಧವಿರುವುದಾಗಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಪಾಕಿಸ್ತಾನ ಉಲ್ಟಾ ಹೊಡೆಯುವ ಮೂಲಕ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ.
ಇದನ್ನೂ ಓದಿ:ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ನಟಿ ಪ್ರೇಮಾ ಭೇಟಿ
“ಪಾಕ್ ಪ್ರಧಾನಿ ಶೆಹಬಾಜ್ ನೀಡಿರುವ ಹೇಳಿಕೆಗೆ ಬುಧವಾರ (ಜನವರಿ 18) ಸ್ಪಷ್ಟನೆ ನೀಡಿರುವ ಪ್ರಧಾನಮಂತ್ರಿ ಕಾರ್ಯಾಲಯ(ಪಿಎಂಒ), ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿರುವ ವಿಷಯವನ್ನು ಉಲ್ಲೇಖಿಸಿ, 2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದಲ್ಲಿ ಕೈಗೊಂಡ ಕಾನೂನು ಬಾಹಿರ ಕ್ರಮವಾದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಭಾರತ ಹಿಂಪಡೆದ ನಂತರವೇ ಮಾತುಕತೆ ಸಿದ್ಧವಾಗಿರುವುದಾಗಿ” ತಿಳಿಸಿದೆ.
2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು.
ಭಾರತ ಜಮ್ಮು-ಕಾಶ್ಮೀರದಲ್ಲಿ ರದ್ದುಪಡಿಸಿರುವ 370ನೇ ವಿಧಿಯನ್ನು ಪುನರ್ ಜಾರಿಗೊಳಿಸುವವರೆಗೂ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಪಾಕಿಸ್ತಾನ್ ಪ್ರಧಾನಮಂತ್ರಿ ಕಚೇರಿ ಸರಣಿ ಟ್ವೀಟ್ ಮಾಡುವ ಮೂಲಕ ತನ್ನ ಇಬ್ಬಗೆ ನೀತಿಯನ್ನು ಪ್ರದರ್ಶಿಸಿದೆ ಎಂದು ವರದಿ ತಿಳಿಸಿದೆ.