ನವದೆಹಲಿ: ಜಮ್ಮು-ಕಾಶ್ಮೀರ ಗಾಜಾಪಟ್ಟಿ ಅಲ್ಲ. ಜಮ್ಮು ಕಾಶ್ಮೀರದ ಸಮಸ್ಯೆಗೆ ರಕ್ತರಹಿತ ಪರಿಹಾರ ಕಂಡು ಹಿಡಿದು ಶಾಂತಿ ನೆಲೆಸುವಂತೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಜೆಎನ್ ಯು ಹಳೆ ವಿದ್ಯಾರ್ಥಿನಿ ಶೆಹ್ಲಾ ರಶೀದ್ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Video: ಕಾರಿನಲ್ಲಿ ಬಂದು ಮನೆಯ ಮುಂದಿದ್ದ ಹೂವಿನ ಕುಂಡವನ್ನು ಎಗರಿಸಿದ ಮಹಿಳೆಯರು
2010ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರ ಪರ ರಶೀದ್ ಸಹಾನುಭೂತಿ ಹೊಂದಿದ್ದ, ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೆಹ್ಲಾ, ಹೌದು ಅಂದು ನಾನು ಸಹಾನುಭೂತಿ ಹೊಂದಿದ್ದೆ. ಆದರೆ ಇಂದು ಜಮ್ಮು-ಕಾಶ್ಮೀರದಲ್ಲಿ ಮಹತ್ತರವಾದ ಬದಲಾವಣೆ ಆಗಿರುವುದನ್ನು ಗಮನಿಸಿದ್ದೇನೆ.
ಕಾಶ್ಮೀರ ಗಾಜಾಪಟ್ಟಿ ಅಲ್ಲ. ಉಗ್ರರ ಒಳನುಸುಳುವಿಕೆ, ಉಗ್ರಗಾಮಿ ಚಟುವಟಿಕೆಯಿಂದ ಕಾಶ್ಮೀರ ತತ್ತರಿಸಿತ್ತು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯವೈಖರಿಯಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಬದಲಾವಣೆಯಾಗಿದೆ. ಇದರ ಶ್ರೇಯಸ್ಸು ಆಡಳಿತಾರೂಢ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ, ಗೃಹ ಸಚಿವ ಶಾ ಅವರಿಗೆ ಸಲ್ಲಬೇಕು ಎಂದು ಶೆಹ್ಲಾ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಇದು ರಾಜಕೀಯವಾಗಿ ತೆಗೆದುಕೊಂಡ ಪರಿಹಾರವಾಗಿದ್ದು, ಇದೊಂದು ರಕ್ತರಹಿತ ಪರಿಹಾರವಾಗಿದೆ ಎಂದು ಶೆಹ್ಲಾ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.