ಲಕ್ನೋ: ದೇಶವೇ ಎದುರುನೋಡುತ್ತಿರುವ ಅಯೋಧ್ಯೆಯ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಆಗಮಶಾಸ್ತ್ರ ಪ್ರವೀಣರಾದ ಕಾಶಿಯ ಸುಪ್ರಸಿದ್ಧ ಆಚಾರ್ಯ ಪಂಡಿತ್ ಲಕ್ಷ್ಮೀಕಾಂತ ಮಥುರನಾಥ ದೀಕ್ಷಿತರು ಈ ಪೂಜಾ ಕೈಂಕರ್ಯಗಳ ಸಾರರ್ಥ್ಯ ವಹಿಸಲಿದ್ದಾರೆ.
ವಿಶೇಷವೆಂದರೆ ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವನ್ನೂ ಲಕ್ಷ್ಮೀಕಾಂತ ಆಚಾರ್ಯರ ಪೂರ್ವಜರಾದ 17ನೇ ಶತಮಾನದ ಪ್ರಸಿದ್ಧ ಕಾಶಿಪಟ್ಟಣದ ವಿದ್ವಾಂಸ ಗಾಗಾಭಟ್ ಅವರು ನೆರವೇರಿಸಿದ್ದರು. ಇದೀಗ ಅವರದ್ದೇ ವಂಶಸ್ಥರಾದ ದೀಕ್ಷಿತರು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಪೌರೋಹಿತ್ಯ ತಂಡವನ್ನು ಮುನ್ನಡೆಸಲಿದ್ದಾರೆ.
ಜ.16ರಿಂದಲೇ ದೀಕ್ಷಿತರ ಮುಂದಾಳತ್ವದಲ್ಲಿ ಪ್ರತಿಷ್ಠಾಪನೆ ಪೂರ್ವ ಸಿದ್ಧತೆಯಾದ “ಮಹಾಪೂಜೆ’ ವಿಧಿವಿಧಾನಗಳು ನಡೆಯಲಿವೆ. ಜ.22ರ ವರೆಗೆ ನಡೆಯಲಿರುವ ಪ್ರತಿಷ್ಠಾಪನೆ ವಿಧಿವಿಧಾನಗಳನ್ನು ನೆರವೇರಿಸಲು ದೇಶಾದ್ಯಂತ ಎಲ್ಲ ವೇದಶಾಖೆಗಳ 121 ವಿದ್ವಾಂಸರ ತಂಡ ಆಗಮಿಸುತ್ತಿದೆ. ಈ ಪೈಕಿ 40 ವಿದ್ವಾಂಸರು ಕಾಶಿಯವರೇ ಆಗಿದ್ದಾರೆ. ಅನೇಕ ಸಂತರು, ದಾರ್ಶನಿಕರ ಆಶೀರ್ವಾದದಿಂದಾಗಿ ರಾಮಲಲ್ಲಾನ ಪಟ್ಟಾಭಿಷೇಕದ ಪೌರೋಹಿತ್ಯದ ಮುಂದಾಳತ್ವ ನನಗೆ ದೊರೆತಿದೆ. ಪ್ರಭು ಶ್ರೀರಾಮನ ಆಶೀರ್ವಾದದೊಂದಿಗೆ ಕರ್ತವ್ಯಗಳನ್ನು ಪಾಲಿಸುತ್ತೇನೆ ಎಂದು ಪಂಡಿತ್ ಲಕ್ಷ್ಮೀಕಾಂತ ಮಥುರನಾಥ ದೀಕ್ಷಿತರು ಹೇಳಿದ್ದಾರೆ.
ಇತ್ತ ಮಂದಿರ ಪಟ್ಟಣ ಅಯೋಧ್ಯೆಯ ವಿಮಾನ ನಿಲ್ದಾಣ ಡಿಸೆಂಬರ್ ಮಾಸಾಂತ್ಯಕ್ಕೆ ಉದ್ಘಾಟನೆಗೆ ಸಜ್ಜುಗೊಂಡಿದೆ. ಖುದ್ದು ಸಿಎಂ ಯೋಗಿ ಆದಿತ್ಯನಾಥ ಅವರೇ ತೆರಳಿ ಪ್ರಧಾನಿ ಮೋದಿ ಅವರಿಗೆ ವಿಮಾನ ನಿಲ್ದಾಣ ಉದ್ಘಾಟನೆಗೆ ಆಹ್ವಾನ ನೀಡಿದ್ದಾರೆ. ಇನ್ನು ಬಾಲ ರಾಮನ ರೂಪವಾದ ರಾಮಲಲ್ಲಾ ವಿಗ್ರಹದ ಕೆತ್ತನೆ ಕಾರ್ಯ ಈಗಾಗಲೇ ಶೇ.90ರಷ್ಟು ಪೂರ್ಣ ಗೊಂಡಿದ್ದು, ಇನ್ನೊಂದು ವಾರದಲ್ಲಿ ವಿಗ್ರಹ ಕೆತ್ತನೆ ಪೂರ್ಣವಾಗಲಿದೆ ಎಂದು ಮಂದಿರ ಟ್ರಸ್ಟ್ ತಿಳಿಸಿದೆ.