Advertisement

ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬ

09:20 AM Feb 10, 2018 | Team Udayavani |

ಕಾಸರಗೋಡು: ಕಾಸರಗೋಡು ಹಾಗೂ ಆಸುಪಾಸಿನ ಜನರು ನೀರು ಕುಡಿಯಬೇಕಾದರೆ ಜಲ ಪ್ರಾಧಿಕಾರ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಮುತುವರ್ಜಿ ವಹಿಸಬೇಕಾಗಿದೆ. ಯಾಕೆಂದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ನಿಟ್ಟಿನಲ್ಲಿ  ಭೂಸ್ವಾಧೀನ ಪ್ರಕ್ರಿಯೆ ವಿಳಂಬಗೊಳ್ಳುತ್ತಿರುವುದರಿಂದ ಜಲ ಪ್ರಾಧಿಕಾರದ ನೂತನ ಪೈಪ್‌ಲೈನ್‌ ಅಳವಡಿಕೆಯೂ ವಿಳಂಬಗೊಂಡಿದೆ. ಚೆರ್ಕಳದಿಂದ ವಿದ್ಯಾನಗರ ಶುದ್ಧೀಕರಣ ನಿಲಯದವರೆಗೆ ಐದು ಕಿಲೋ ಮೀಟರ್‌ ಭಾಗದ ಈಗಿರುವ ಪೈಪ್‌ಗ್ಳನ್ನು  ಬದಲಿಸಿ ಹೊಸದಾಗಿ ಸ್ಥಾಪಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ. 2018ರ ಮಾರ್ಚ್‌ನಲ್ಲಿ ಪೈಪ್‌ಲೈನ್‌ ಅಳವಡಿಸುವ ಗುತ್ತಿಗೆ ಕಾಲಾವಧಿ ಕೊನೆಗೊಳ್ಳಲಿದೆ. ಆದರೆ ಇದುವರೆಗೆ ಯೋಜನೆಗೆ ಚಾಲನೆ ನೀಡಲು ಕೂಡ ಸಾಧ್ಯವಾಗಿಲ್ಲ. 

Advertisement

ಭೂಸ್ವಾಧೀನಪಡಿಸುವಿಕೆ ಪೂರ್ಣವಾಗದ ಹಿನ್ನೆಲೆಯಲ್ಲಿ  ಈಗಿರುವ ಸ್ಥಳದ ಗರಿಷ್ಠ  ದೂರದಲ್ಲಿ  ಪೈಪ್‌ಲೈನ್‌ ಅಳವಡಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಲಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದರೂ ಅದಕ್ಕೆ ಕೂಡ ಇದುವರೆಗೆ ಅನುಕೂಲಕರ ಉತ್ತರ ಬಂದಿಲ್ಲ.

ಪ್ರಥಮ ಹಂತದಲ್ಲಿ  ಮುಳಿಯಾರಿನ ಬಾವಿಕ್ಕೆರೆಯಿಂದ ಚೆರ್ಕಳದ ವರೆಗಿನ ಭಾಗದಲ್ಲಿ  ಕಳೆದ ವರ್ಷ ನೂತನ ಪೈಪ್‌ಗ್ಳನ್ನು ಅಳವಡಿಸಲಾಗಿದೆ. ದ್ವಿತೀಯ ಹಂತದಲ್ಲಿ  ಚೆರ್ಕಳದಿಂದ ವಿದ್ಯಾನಗರ ತನಕದ ಪೈಪ್‌ ಬದಲಿಸಿ ನೂತನವಾಗಿ ಸ್ಥಾಪಿಸಲು ಐದು ಕೋಟಿ ರೂ. ಗಳನ್ನು  ಮಂಜೂರುಗೊಳಿಸಲಾಗಿತ್ತು. ಈ ಭಾಗದಲ್ಲಿ  ರಾಷ್ಟ್ರೀಯ ಹೆದ್ದಾರಿ ಬದಿಯಿಂದ ಪೈಪ್‌ಲೈನ್‌ ಹಾದುಹೋಗುತ್ತಿದೆ. ಹೆದ್ದಾರಿಯನ್ನು  ಚತುಷ್ಪಥಗೊಳಿಸುವ ಜಾಗದ ಸಮೀಪವಿರುವ ಒಂದೂವರೆ ಮೀಟರ್‌ ಭಾಗದ ಯುಟಿಲಿಟಿ ಕಾರಿಡಾರ್‌ನಲ್ಲಿ  ಪೈಪ್‌ ಅಳವಡಿಸಲು ತೀರ್ಮಾನಿಸಲಾಗಿದೆ. ಅಗತ್ಯವಿರುವ ಪೈಪ್‌ಗ್ಳನ್ನು ಈಗಾಗಲೇ ತಲುಪಿಸಲಾಗಿದೆ. ಆದರೆ ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಖಾಸಗಿ ಸ್ಥಳದಲ್ಲೇ ಹಾದುಹೋಗುತ್ತಿದೆ. ಇದನ್ನು  ಪೂರ್ಣಗೊಳಿಸಲು ಕನಿಷ್ಠ  ಎರಡು ವರ್ಷಗಳಾದರೂ ಬೇಕಾಗಲಿದೆ. ಅದಕ್ಕಿಂತ ಮೊದಲೇ ಜಲಪ್ರಾಧಿಕಾರ ಪೈಪ್‌ ಸ್ಥಾಪಿಸಲು ನೀಡಿದ ಗುತ್ತಿಗೆ ಕಾಲಾವಧಿ ಕೊನೆಗೊಳ್ಳಲಿದೆ. 

ಮಾತ್ರವಲ್ಲದೆ ಈ ಭಾಗದಲ್ಲಿ  ಹಳೆಯ ಪೈಪ್‌ಲೈನ್‌ ಸಂಪೂರ್ಣವಾಗಿ ಹಾನಿಗೀಡಾಗಿದ್ದು, 40 ವರ್ಷಗಳ ಹಿಂದೆ ಅಳವಡಿಸಿದ ಕಬ್ಬಿಣದ ಪೈಪ್‌ ಇದಾಗಿದೆ. ಕಾಲಾವಧಿ ಕಳೆದಿರುವುದರಿಂದ ಹಲವೆಡೆ ಪೈಪ್‌ ಒಡೆದು ನೀರು ಪೋಲಾಗುತ್ತಿದೆ. ಸಾವಿರಾರು ಲೀಟರ್‌ ನೀರು ಪ್ರತಿದಿನ ರಸ್ತೆಯಲ್ಲಿ  ಹರಿದು ಹೋಗುತ್ತಿದೆ.

ಒಂದೆಡೆ ಒಡೆದ ಪೈಪ್‌ಗ್ಳನ್ನು ದುರಸ್ತಿ ಮಾಡಿದಾಗ ಇನ್ನೊಂದೆಡೆ ಹಾನಿಯಾಗಿರುವುದು ಕಂಡುಬರುತ್ತಿದೆ. ರಸ್ತೆಯ ಬದಿ ಮಣ್ಣಿನಡಿಯಲ್ಲಿ  ಪೈಪ್‌ ಅಳವಡಿಸಲಾಗಿದೆ. ಪೈಪ್‌ ಸೋರಿಕೆ ಪತ್ತೆಹಚ್ಚಬೇಕಾದರೆ ಒಂದು ಮೀಟರ್‌ನಷ್ಟು  ಅಗೆದು ನೋಡಬೇಕಾಗುತ್ತದೆ. ಇದರಿಂದಾಗಿ ಜಲಪ್ರಾಧಿಕಾರದ ಸಿಬ್ಬಂದಿಗಳಿಗೆ ನೀರು ಪೋಲಾಗುತ್ತಿರುವುದನ್ನು  ತಡೆಗಟ್ಟುವುದು ಬಹುದೊಡ್ಡ  ಸಮಸ್ಯೆಯಾಗುತ್ತಿದೆ.

Advertisement

ಬಾವಿಕ್ಕೆರೆಯಿಂದ ಚೆರ್ಕಳ ತನಕ ಹೊಸ ಪೈಪ್‌ಲೈನ್‌ ಅಳವಡಿಸಿರುವುದಿಂದ ನೀರಿನ ಹರಿಯುವಿಕೆ ಸಾಮರ್ಥ್ಯ ಹೆಚ್ಚಿದೆ. ಆದ್ದರಿಂದ ಚೆರ್ಕಳದಿಂದ ವಿದ್ಯಾನಗರ ತನಕದ ಹಳೆಯ ಪೈಪ್‌ ನಿರಂತರವಾಗಿ ಒಡೆಯುತ್ತಿದೆ. ನೀರಿನ ಕೊರತೆ ಇರುವಾಗ ರಸ್ತೆ  ಬದಿ ನೀರು ಪೋಲಾಗುತ್ತಿರುವುದು ನಾಗರಿಕರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಪೈಪ್‌ ಬದಲಿಸಿ ಸ್ಥಾಪಿಸದೆ ಇದಕ್ಕೆ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ  ಎಂದು ಜಲ ಪ್ರಾಧಿಕಾರ ಹೇಳುತ್ತಿದೆ.

ಪ್ರತಿಭಟನೆಯತ್ತ  ಸಾರ್ವಜನಿಕರು 
ಬೇಸಗೆ ಕಾಲ ಸಮೀಪಿಸುವುದರಿಂದ ಕಾಸರಗೋಡು ನಗರ ಮತ್ತು  ಸಮೀಪದ ಪಂಚಾಯತ್‌ಗಳಲ್ಲಿ  ನೀರಿನ ಬಳಕೆ ಹೆಚ್ಚಾಗಲಿದೆ. 24 ಗಂಟೆಗಳ ಕಾಲ ಪಂಪ್‌ ಮಾಡಿದರೂ ಅಗತ್ಯದ ನೀರು ವಿತರಿಸಲು ಸಾಧ್ಯವಾಗದೆ ಜಲ ಪ್ರಾಧಿಕಾರ ಸಮಸ್ಯೆ ಎದುರಿಸುತ್ತಿರುವಾಗ ಸಂಗ್ರಹದಲ್ಲಿರುವ ನೀರು ಕೂಡ ರಸ್ತೆ  ಬದಿ ಹರಿದು ಪೋಲಾಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸಬೇಕಾದ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯದಲ್ಲಿ  ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕರನ್ನು ರೋಷಕ್ಕೀಡು ಮಾಡಿದೆ. ಅಲ್ಲದೆ ಈ ನಿಟ್ಟಿನಲ್ಲಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next