ಕಾಸರಗೋಡು: ಕೋವಿಡ್ 19 ವೈರಸ್ ಎಲ್ಲೆಡೆ ವ್ಯಾಪಿಸುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಆರು ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೇರಿದೆ.
ಕೋವಿಡ್ 19 ಪತ್ತೆಯಾದ ಕಾಸರಗೋಡಿನ ವ್ಯಕ್ತಿಯೋರ್ವ ಫುಟ್ಬಾಲ್ ಪಂದ್ಯಾಟ, ಕ್ಲಬ್, ವಿವಾಹ ಸಮಾರಂಭ ಮತ್ತು ಇತರೆಡೆ ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ರೂಟ್ ಮ್ಯಾಪ್ ತಯಾರಿಸಲಾಗುವುದು.
ಕೇರಳದಲ್ಲಿ ಶುಕ್ರವಾರ ಒಟ್ಟು 12 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅದರಲ್ಲಿ ಕಾಸರಗೋಡು – 6, ಕೊಚ್ಚಿ – 5 ಮತ್ತು ಪಾಲಾ^ಟ್‌ನಲ್ಲಿ ಒಬ್ಬರಿಗೆ ಸೋಂಕು ಬಾಧಿಸಿದೆ. ಕೇರಳ ರಾಜ್ಯದಲ್ಲಿ ಈ ವರೆಗೆ 40 ಮಂದಿಗೆ ಕೊರೊನಾ ದೃಢೀಕರಿಸಲಾಗಿದೆ. ರಾಜ್ಯದಲ್ಲಿ ಒಟ್ಟು 44396 ಮಂದಿ ನಿಗಾದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ರಿಟನ್ ಪ್ರವಾಸಿಗರು
ಕೊಚ್ಚಿಯಲ್ಲಿ ದೃಢೀಕರಿಸಲ್ಪಟ್ಟ ಐವರು ಬ್ರಿಟನ್ ಪ್ರವಾಸಿಗರಾಗಿ ದ್ದಾರೆ. ಒಟ್ಟು 13 ಮಂದಿ ಬ್ರಿಟನ್ ಪ್ರಜೆಗಳು ಕೇರಳದ ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಲು ಬಂದಿದ್ದರು. ಅವರಲ್ಲಿ ಐವರಿಗೆ ಕೋವಿಡ್ 19 ಪತ್ತೆಯಾಗಿದೆ.
ಕೋವಿಡ್ 19 ನಿಯಂತ್ರಣಕ್ಕೆ ಸೇನೆ ಯನ್ನು ಬಳಸಿಕೊಳ್ಳುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿಳಿಸಿದ್ದಾರೆ. ಕೋವಿಡ್ 19 ಭೀತಿಯ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳನ್ನು, ಪ್ರಾರ್ಥನಾಲಯಗಳನ್ನು ಒಂದು ವಾರ ಮುಚ್ಚಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅಂಗಡಿಗಳನ್ನು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರವೇ ತೆರೆಯಬೇಕೆಂದು ಮುಖ್ಯಮಂತ್ರಿ ಹೇಳಿದ್ದಾರೆ.
ಎಸೆಸೆಲ್ಸಿ, ಪ್ಲಸ್ ಟು ಪರೀಕ್ಷೆ ಮುಂದೂಡಿಕೆ
ಕೋವಿಡ್ 19 ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಎಸೆಸೆಲ್ಸಿ, ಪ್ಲಸ್ ಟು, ವಿಶ್ವವಿದ್ಯಾಲಯ ಪರೀಕ್ಷೆಗಳು ಸಹಿತ ಮುಂದೂಡಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಕರೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.