Advertisement

ಕಾಸರಗೋಡು: ರಾ. ಹೆದ್ದಾರಿ ಸ್ಥಿತಿ ಖಂಡಿಸಿ ರಸ್ತೆ ತಡೆ

06:40 AM Jul 26, 2018 | |

ಕಾಸರಗೋಡು: ತಲಪಾಡಿ ಯಿಂದ ಕಾಲಿಕಡವಿನವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಮರಣ ಗುಂಡಿಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅಪಾಯ ಕಾರಿಯಾಗಿದ್ದು, ಈಗಾಗಲೇ ಹಲವು ಮಂದಿ ಬಲಿಯಾಗಿದ್ದಾರೆ. ರಸ್ತೆಯ ಬಗ್ಗೆ ಸಂಬಂಧಪಟ್ಟವರ ಅವಗಣನೆಯನ್ನು ಪ್ರತಿಭಟಿಸಿ ಬಿಎಂಎಸ್‌ ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಿತು.

Advertisement

ಬಿ.ಎಂ.ಎಸ್‌. ಜಿಲ್ಲಾ  ಕಾರ್ಯದರ್ಶಿ ಕೆ.ಎ. ಶ್ರೀನಿವಾಸನ್‌ ರಸ್ತೆ  ತಡೆ ಚಳವಳಿಯನ್ನು ಉದ್ಘಾಟಿಸಿದರು. ವಲಯ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ನೇತಾರರಾದ ಉಮೇಶ್‌, ವಿಶ್ವನಾಥ, ದಿನೇಶ್‌, ಗಿರೀಶ್‌ ಮೊದಲಾದವರು ನೇತೃತ್ವ ನೀಡಿದರು. ವಲಯ ಕಾರ್ಯದರ್ಶಿ ಗಿರೀಶ್‌ ಕೆ. ಸ್ವಾಗತಿಸಿದರು.

ಜನಪ್ರತಿನಿಧಿಗಳ ತಾತ್ಸಾರ
ಇಲ್ಲಿನ ಜನಪ್ರತಿನಿಧಿಗಳೂ ಈ ರಸ್ತೆಯ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದು, ಇದರಿಂದಾಗಿ ರಸ್ತೆ ಶೋಚನೀಯ ಸ್ಥಿತಿಗೆ ತಲುಪಿದೆ. ಕಳೆದ ಒಂದು ವರ್ಷದಿಂದ ಈ ರಸ್ತೆ ಅತ್ಯಂತ ಕೆಟ್ಟು ಹೋಗಿದ್ದು, ಮಳೆಗಾಲ ಆರಂಭವಾದ ಬಳಿಕ ರಸ್ತೆ ಇನ್ನಷ್ಟು ಶೋಚನೀಯ ಸ್ಥಿತಿಗೆ ತಲುಪಿದ್ದು ಮರಣ ಗುಂಡಿಗಳಾಗಿ ಪರಿವರ್ತನೆಗೊಂಡಿದೆ. ರಸ್ತೆಯನ್ನು ದುರಸ್ತಿಗೊಳಿಸಬೇಕು ಮತ್ತು ಸರಕಾರದ ಅವಗಣನೆಯನ್ನು ಪ್ರತಿಭಟಿಸಿ ಬಿಎಂಎಸ್‌ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆಯೊಡ್ಡಿದರು.ಕೇಂದ್ರ ಸರಕಾರದ ಯೋಜನೆಯಾದ ಚತುಷ್ಪಥ ರಸ್ತೆಗೆ ಶೀಘ್ರವೇ ಭೂ ಹಸ್ತಾಂತರಗೊಳಿಸಿ ರಸ್ತೆ ಕಾಮಗಾರಿ ಆರಂಭಿಸಲಾಗುವುದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಲವು ಬಾರಿ ಭರವಸೆ ನೀಡಿದ್ದರೂ, ಈ ವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಮುಖ್ಯಮಂತ್ರಿ ನೀಡಿದ ಭರವಸೆಯನ್ನು ಈಡೇರಿಸಬೇಕೆಂದು ಬಿಎಂಎಸ್‌ ಆಗ್ರಹಿಸಿದೆ.

ಮೆರವಣಿಗೆ 
ರಸ್ತೆ ತಡೆಗೆ ಮುನ್ನ ಬಿಎಂಎಸ್‌ ಕಾರ್ಯಕರ್ತರು ಕಾಸರಗೋಡು ನಗರದ ಪ್ರಮುಖ ರಸ್ತೆಯಲ್ಲಿ  ಮೆರವಣಿಗೆಯಲ್ಲಿ ಸಾಗಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಸಂಬಂಧಪಟ್ಟವರ ಗಮನ ಸೆಳೆದರು.

ದುರಂತಗಳ ದಾರಿ
ಕರ್ನಾಟಕದಿಂದ ಕೇರಳಕ್ಕೆ ಪ್ರವೇಶಿಸುವ ತಲಪಾಡಿಯಿಂದ ಕಾಸರಗೋಡು ಜಿಲ್ಲೆಯ ದಕ್ಷಿಣದ ಗಡಿಯಾದ ಕಾಲಿಕಡವಿನ ವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಬೃಹತ್‌ ಗಾತ್ರದ ಹೊಂಡಗಳು ಸೃಷ್ಟಿಯಾಗಿದ್ದು ಪ್ರತಿದಿನ ವಾಹನ ಅಪಘಾತ ಸಂಭವಿಸುತ್ತಿದೆ. ಇದರಿಂದ ಈಗಾಗಲೇ ಹಲವಾರು ಮಂದಿ ರಸ್ತೆ ಹೊಂಡಗಳಿಂದ ಸಂಭವಿಸಿದ ವಾಹನ ಅಪಘಾತದಿಂದ ಸಾವಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ರಸ್ತೆ ಇದೀಗ ದುರಂತ ಭೂಮಿಯಾಗಿ ಪರಿವರ್ತನೆ ಗೊಂಡಿದೆ. ರಸ್ತೆಯ ಬಗ್ಗೆ ಕೇರಳ ಸರಕಾರ ತೋರುತ್ತಿರುವ ಅವಗಣನೆ ಖಂಡನೀಯ. ಶೀಘ್ರವೇ ವೈಜ್ಞಾನಿಕ ರೀತಿಯಲ್ಲಿ ರಸ್ತೆಯ ಹೊಂಡ ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಬಿಎಂಎಸ್‌ ಆಗ್ರಹಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next