ಕಾಸರಗೋಡು/ ಮುಳ್ಳೇರಿಯ: ಶುಕ್ರವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಬೆಳ್ಳೂರು ಗ್ರಾಮ ಪಂಚಾಯತ್‌ನ ವಿವಿಧೆಡೆ ಗುಡ್ಡೆ ಕುಸಿದು ನಾಲ್ಕು ಮನೆಗಳಿಗೆ ಹಾನಿಯಾಗಿದೆ.
ಕಿನ್ನಿಂಗಾರಿನಲ್ಲಿ ರಾಮಣ್ಣ ಪೂಜಾರಿ ಅವರ ಹೊಸ ಮನೆ ಮೇಲೆ ಸಮೀಪದ ಗುಡ್ಡೆ ಕುಸಿದು ಬಿದ್ದಿದೆ. ಶುಕ್ರವಾರ ರಾತ್ರಿ 12 ಗಂಟೆಗೆ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಹೊಸ ಕಾಂಕ್ರೀಟ್ ಮನೆಯ ನಿರ್ಮಾಣ ಪೂರ್ಣಗೊಂಡಿತ್ತು. ಇದೀಗ ಗುಡ್ಡೆ ಕುಸಿದ ಪರಿಣಾಮವಾಗಿ ಮನೆಗೆ ಹಾನಿಯಾಗಿದ್ದು ಸುಮಾರು ಒಂದೂವರೆ ಲಕ್ಷ ರೂ. ನಾಶನಷ್ಟ ಅಂದಾಜಿಸಲಾಗಿದೆ.
ಬೆಳ್ಳೂರು-ಬಸ್ತಿ ಬಳಿಯ ಪಂಬೆಜಾಲು ವಾಸು ಗೌಡ ಅವರ ಮನೆಗೆ ಶುಕ್ರವಾರ ರಾತ್ರಿ 1 ಗಂಟೆಗೆ ಸಮೀಪದ ಗುಡ್ಡ ಜರಿದು ಬಿದ್ದು, ಮನೆಯ ಛಾವಣಿ ಬಹುತೇಕ ಕುಸಿದಿದೆ. ಶಬ್ದ ಕೇಳಿ ಎಚ್ಚೆತ್ತು ಮನೆಯಿಂದ ಹೊರಗೆ ಓಡಿದುದರಿಂದ ಸಂಭವನೀಯ ಭಾರೀ ಅಪಾಯ ತಪ್ಪಿದೆ. ಘಟನೆಯಿಂದ ಭಾರೀ ನಾಶನಷ್ಟ ಸಂಭವಿಸಿದೆ.ಕಿನ್ನಿಂಗಾರು ಸಮೀಪದ ಬೆಳೇರಿ ಕೊರಗಪ್ಪ ಪೂಜಾರಿ ಅವರ ಮನೆಗೂ ಗುಡ್ಡ ಜರಿದು ಬಿದ್ದಿದೆ. ಕಿನ್ನಿಂಗಾರಿನಲ್ಲಿ ಅಪ್ಪ ಕುಂಞಿ ಬೆಳ್ಚಪ್ಪಾಡರ ಮನೆ ಬಳಿಯ ಕಂಪೌಂಡ್ ಗೋಡೆ ಕುಸಿದು ಬಿದ್ದಿದೆ.
ಗುತ್ಯಡ್ಕ-ಕಕ್ಕೆಬೆಟ್ಟು-ಕಾಯರ್‌ಪದವುಗೆ ತೆರಳುವ ರಸ್ತೆಗೆ ಗುಡ್ಡೆ ಜರಿದು ರಸ್ತೆತುಂಬಾ ಮಣ್ಣು ತುಂಬಿ ರಸ್ತೆತಡೆಉಂಟಾಗಿದೆ. ನಾಗರಿಕರು ಸಕಾಲಿಕ ಕಾರ್ಯಚರಣೆ ನಡೆಸಿ ಮಣ್ಣು ತೆರವುಗೊಳಿಸಿದರು.
ಗುತ್ಯಡ್ಕ ಸಮೀಪದ ರೋಹಿತ್ ಅವರ ಕೃಷಿತೋಟಕ್ಕೆ ಸಮೀಪದ ಗುಡ್ಡ ಜರಿದು ಸುಮಾರು 10ರಬ್ಬರ್ ಗಿಡ ಹಾಗೂ 10 ಕಂಗು ಮುರಿದುಹೋಗಿದೆ.ಬೆಳ್ಳೂರಿನಲ್ಲಿ ಅಮರಾವತಿ ಅವರ ಹೆಂಚಿನ ಮನೆಯ ಛಾವಣಿ ಶುಕ್ರವಾರ ರಾತ್ರಿ ಗಾಳಿ ಮಳೆಗೆ ಹಾನಿಗೀಡಾಗಿದೆ.ಬೆಳ್ಳೂರು ಸಮೀಪದ ಎಡಮೊಗರು ಎಂಬಲ್ಲಿರುವ ದೆ„ವಸ್ಥಾನದ ಸಮೀಪದ ಗುಡ್ಡೆ ಜರಿದಿದೆ.ಹಾನಿ ಗೀಡಾದ ಸ್ಥಳಗಳಿಗೆ ಜನಪ್ರತಿನಿ ಧಿಗಳು ಹಾಗೂ ಕೃಷಿ, ಹಾಗೂ ಗ್ರಾಮಾ ಕಾರಿಗಳು, ಹಾಗೂ ಇನ್ನಿತರರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಪದೇ ಪದೇ ಭಾರೀ ಮಳೆಯಾಗುತ್ತಿದ್ದು, ಅಪಾರ ನಾಶನಷ್ಟ ಸಂಭವಿಸಿದೆ. ಮಳೆಯಿಂದಾಗಿ ಅಲ್ಲಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಬಿದ್ದಿದ್ದು, ಬಸ್, ಲಾರಿ, ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ.