ಕಾಸರಗೋಡು: ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿಪಡಿಸಲು 2 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ತಂಡ ಬಂಧಿಸಿರುವ ಕಾಸರಗೋಡು ಜನರಲ್ ಆಸ್ಪತ್ರೆಯ ಅನಸ್ತೇಶಿಯ ವಿಭಾಗದ ಡಾ| ವೆಂಕಟಗಿರಿಗೆ ಕಲ್ಲಿಕೋಟೆ ಮ್ಯಾಜಿಸ್ಟ್ರೇಟ್ ನ್ಯಾಯಾಂಗ ಬಂಧನ ವಿಧಿಸಿದೆ.
ನುಳ್ಳಿಪ್ಪಾಡಿಯ ಮನೆಯಲ್ಲಿ ಅ. 3ರಂದು ಲಂಚ ಪಡೆಯುತ್ತಿದ್ದಾಗ ಡಾ| ವೆಂಕಟಗಿರಿಯನ್ನು ವಿಜಿಲೆನ್ಸ್ ಡಿವೈಎಸ್‌ಪಿ ವಿ.ಕೆ. ವಿಶ್ವಂಭರನ್ ನಾಯರ್ ನೇತೃತ್ವದ ತಂಡ ಬಂಧಿಸಿತು.
ಮಧೂರು ಪಟ್ಲ ನಿವಾಸಿಯೊಬ್ಬರು ಹರ್ನಿಯ ಚಿಕಿತ್ಸೆಗಾಗಿ ಕಳೆದ ಜೂನ್ 21ರಂದು ಜನರಲ್ ಆಸ್ಪತ್ರೆಗೆ ಆಗಮಿಸಿದ್ದರು.
ತಪಾಸಣೆ ಮಾಡಿದ ಸರ್ಜನ್ ಅದೇ ದಿನ ಚಿಕಿತ್ಸೆ ನಡೆಸುವಂತೆ ತಿಳಿಸಿದ್ದರು. ಅದಕ್ಕಾಗಿ ಅನಸ್ತೇಶಿಯ ತಜ್ಞ ಡಾ| ವೆಂಕಟಗಿರಿಯನ್ನು ಕಾಣಬೇಕೆಂದು ತಿಳಿಸಿದ್ದರು. ಅದರಂತೆ 5 ದಿನಗಳ ಅನಂತರ ವೈದ್ಯರನ್ನು ಭೇಟಿಯಾದಾಗ ಡಿಸೆಂಬರ್‌ನಲ್ಲಿ ಶಸ್ತ್ರ ಚಿಕಿತ್ಸೆಗೆ ದಿನಾಂಕ ನೀಡಿದರು. ಆದರೆ ಅಸಹನೀಯ ನೋವು ಇದೆಯೆಂದೂ ಅದಕ್ಕಿಂತ ಮೊದಲು ನಡೆಸಬಹುದೇ ಎಂದು ರೋಗಿ ವಿನಂತಿಸಿದಾಗ, ಮೊದಲು ದಿನಾಂಕ ನಿಗದಿಪಡಿಸಲು ವೈದ್ಯ 2 ಸಾವಿರ ರೂ. ಲಂಚ ಕೇಳಿರುವುದಾಗಿ ದೂರಲಾಗಿದೆ. ಈ ವಿಷಯವನ್ನು ರೋಗಿ ವಿಜಿಲೆನ್ಸ್ ಎಸ್.ಪಿ.ಗೆ ತಿಳಿಸಿದ್ದರು. ಅವರ ನಿರ್ದೇಶನದಂತೆ ವೈದ್ಯರು 2 ಸಾವಿರ ರೂ. ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದರು.
2019ರಲ್ಲೂ ಡಾ| ವೆಂಕಟಗಿರಿ ವಿರುದ್ಧ ಲಂಚ ಆರೋಪ ಕೇಳಿಬಂದಿತ್ತು. ಆಗ ಇಲಾಖೆ ಮಟ್ಟದ ಕ್ರಮ ಕೈಗೊಂಡು ತನಿಖೆ ನಡೆಸಲಾಗಿತ್ತು.