ಕಾಸರಗೋಡು: ಸೌತ್ ತೃಕ್ಕರಿಪುರ ಮೊಟ್ಟಮ್ಮಲ್ ವಯಲೋಡಿ ಪರಿಶಿಷ್ಟ ಜಾತಿ ಕಾಲನಿ ನಿವಾಸಿ ಕೊಡಕ್ಕಲ್ ಕೃಷ್ಣನ್ ಅವರ ಪುತ್ರ ಎಂ.ಪ್ರಿಯೇಶ್ (32) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತೃಕ್ಕರಿಪುರ ಪೋರೆಪ್ಪಾಡ್ ಬದ್ರಿಯಾ ಮಂಜಿಲ್‌ನ ಒ.ಟಿ.ಮುಹಮ್ಮದ್ ಶಬಾಸ್(22) ಮತ್ತು ತೃಕ್ಕರಿಪುರ ಎಳಂಬಚ್ಚಿಯ ಪಿ.ಕೆ.ಹೌಸ್‌ನ ಮೊಹಮ್ಮದ್ ರಹನಾಸ್ (23) ನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.
ಇದೇ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದಾಗಿ ಶಂಕಿಸುತ್ತಿರುವ ಸಫಾನ್(25) ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ.
ಡಿ.4 ರಂದು ರಾತ್ರಿ ಮನೆಯಿಂದ ಬೈಕ್‌ನಲ್ಲಿ ಹೊರಗೆ ಹೋಗಿದ್ದ ಪ್ರಿಯೇಶ್ ಅವರ ಮೃತ ದೇಹ ಮನೆಯಿಂದ 100 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಪ್ಯಾಂಟ್ ಮಾತ್ರ ಧರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಮೈಮೇಲೆ ಕೆಸರು ಕಂಡು ಬಂದಿತ್ತು. ಅವರ ಬೈಕ್ ಅಲ್ಲೇ ಪತ್ತೆಯಾಗಿತ್ತು. ಪ್ರಿಯೇಶ್ ಅಂದು ರಾತ್ರಿ ಮಹಿಳೆಯ ಮನೆ ಬಳಿ ನಿಂತಿದ್ದನೆಂದೂ, ಅದನ್ನು ಕಂಡ ಆ ಮಹಿಳೆಯ ಪುತ್ರ ಮತ್ತು ಸ್ನೇಹಿತರು ಸೇರಿ ಆತನನ್ನು ಹಿಡಿದು ಬೇರೆಡೆ ಸಾಗಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರೆಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಪ್ರಿಯೇಶ್ ಸಾವನ್ನಪ್ಪಿದ್ದಾನೆ ಎಂದು ಗೊತ್ತಾದ ಕೂಡಲೇ ಆರೋಪಿಗಳು ಆತನನ್ನು ಆತನ ಮನೆ ಪಕ್ಕದ ಹಿತ್ತಲೊಂದರಲ್ಲಿ ಬಿಟ್ಟು ಅಲ್ಲಿಂದ ಕಾಲ್ಕಿತ್ತಿರುವುದಾಗಿ ಪೊಲೀಸ್ ತನಿಖೆಯಲ್ಲಿ ಸ್ವಷ್ಟಗೊಂಡಿದೆ. ಆ ಸಂದರ್ಭದಲ್ಲಿ ಪ್ರಿಯೇಶ್ ಅವರ ಮೊಬೈಲ್ ಫೋನ್ ನಾಪತ್ತೆಯಾಗಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಆ ಮೊಬೈಲ್ ಫೋನನ್ನು ಆರೋಪಿ ಶಬಾಸ್ ಮನೆಯಿಂದ ಪತ್ತೆ ಹಚ್ಚಿ ವಶಪಡಿಸಿದ್ದಾರೆ.
ಶಬಾಸ್ ಬೆಂಗಳೂರಿನ ಹೊಟೇಲೊಂದರಲ್ಲಿ ಕಾರ್ಮಿಕನಾಗಿದ್ದು. ಇನ್ನೋರ್ವ ಆರೋಪಿ ರಹನಾಸ್ ಮಲೇಶ್ಯಾದಲ್ಲಿ ಕೆಲಸಕ್ಕಿದ್ದು, ಆತ ಅಲ್ಲಿಂದ ಇತ್ತೀಚೆಗಷ್ಟೇ ಊರಿಗೆ ಹಿಂತಿರುಗಿದ್ದನೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ಮಂಗಳೂರು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ತಾಯಿ ಸೇರಿ ಮೂವರಿಗೆ ಜೈಲು ಶಿಕ್ಷೆ