ಕಾಸರಗೋಡು: ತೃಕ್ಕರಿಪುರ ಪರುತ್ತಿಚ್ಚಾಲ್ ನಿವಾಸಿ ಕೇಳಪ್ಪನ್ ಅವರ ಪುತ್ರ ಬಾಲಕೃಷ್ಣನ್ (54) ಅವರು ತಲೆಗೆ ಗಂಭೀರ ಹೊಡೆತದ ಗಾಯದಿಂದ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಈ ಸಂಬಂಧ ಅಳಿಯ ತೃಕ್ಕರಿಪುರ ವೈಖತ್ ಹೌಸ್‌ನ ರತೀಶ್‌ನನ್ನು ಚಂದೇರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ರತೀಶ್ ತಲೆಗೆ ಹೊಡೆದರೆಂದು ಆರೋಪಿಸಲಾಗಿದೆ.
ಮೃತಪಟ್ಟ ಬಾಲಕೃಷ್ಣನ್ ವೆಲ್ಡಿಂಗ್ ಕಾರ್ಮಿಕರಾಗಿದ್ದಾರೆ. ಪತ್ನಿಯೊಂದಿಗಿನ ವಿರಸದಿಂದ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಅವರ ಹಿರಿಯ ಪುತ್ರಿಯ ಪತಿ ರತೀಶ್‌ನೊಂದಿಗೆ ಆಸ್ತಿ ಕುರಿತಾದ ವಿವಾದವಿತ್ತೆನ್ನಲಾಗಿದೆ.
ಸೆ.25ರಂದು ಮನೆಗೆ ಕರೆಸಿದ ಬಳಿಕ ಅವರಿಬ್ಬರು ಮದ್ಯ ಸೇವಿಸಿದ್ದರೆನ್ನಲಾಗಿದೆ. ಮದ್ಯದ ಅಮಲಿನಲ್ಲಿ ಇವರ ಮಧ್ಯೆ ವಾಗ್ವಾದ ನಡೆದಿದ್ದು, ರತೀಶ್ ಬಾಲಕೃಷ್ಣನ್ ಅವರ ತಲೆಗೆ ಹೊಡೆದರೆನ್ನಲಾಗಿದೆ.
ಮಂಗಳವಾರ ಬೆಳಗ್ಗೆ ಮನೆಯಲ್ಲಿ ತಲೆಗೆ ಏಟು ಬಿದ್ದು ಗಂಭೀರಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.