ಕಾಸರಗೋಡು : ಶವರ್ಮ ಸೇವಿಸಿದ ಪರಿಣಾಮವಾಗಿ ಕರಿವೆಳ್ಳೂರು ನಿವಾಸಿ ದಿ|ಚಂದ್ರೋತ್ ನಾರಾಯಣನ್- ಪ್ರಸನ್ನ ದಂಪತಿಯ ಪುತ್ರಿ, ಪ್ಲಸ್ ವನ್ ವಿದ್ಯಾರ್ಥಿನಿ ದೇವನಂದ(16) ಸಾವಿಗೀಡಾಗಿ 50 ಕ್ಕೂ ಮಿಕ್ಕು ಮಂದಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ ಚಂದೇರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಶವರ್ಮ ತಯಾರಕ ನೇಪಾಲ ನಿವಾಸಿ ಸಂದೇಶ್ ರಾಯ್, ಸಂಸ್ಥೆಯ ಮೇಲ್ನೋಟ ವಹಿಸುತ್ತಿದ್ದ ಉಳ್ಳಾಲ ನಿವಾಸಿ ಅನಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮನಪೂರ್ವಕವಲ್ಲದ ಹತ್ಯೆ ಸಹಿತ ಕಾಯ್ದೆಗಳ ಪ್ರಕಾರ ಕೇಸು ದಾಖಲಿಸಲಾಗಿದೆ.
ಸಂಸ್ಥೆಗೆ ಸ್ಥಳೀಯರು ಕಲ್ಲೆಸೆದಿದ್ದು, ಇದರಿಂದ ಸ್ಥಳದಲ್ಲಿ ಭಾರೀ ಪೊಲೀಸರನ್ನು ನೇಮಿಸಲಾಗಿತ್ತು. ಸೋಮವಾರ ಮುಂಜಾನೆ ಸಂಸ್ಥೆಯ ವ್ಯಾನ್‌ಗೆ ತಂಡವೊಂದು ಬೆಂಕಿ ಹಚ್ಚಿ ಧ್ವಂಸಗೊಳಿಸಿದೆ. ವ್ಯಾನ್‌ಗೆ ಬೆಂಕಿ ಹಚ್ಚಿದವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಿಸಿ ಟಿವಿ ದೃಶ್ಯಗಳನ್ನು ವೀಕ್ಷಿಸಿ ಈ ಕೃತ್ಯ ನಡೆಸಿದವರನ್ನು ಪತ್ತೆಹಚ್ಚುವುದಾಗಿ ಪೊಲೀಸರು ತಿಳಿಸಿದ್ದಾರೆ. ಚೆರ್ವತ್ತೂರು ಬಸ್ ನಿಲ್ದಾಣ ಸಮೀಪದ ಕೂಲ್ ಬಾರ್‌ನಿಂದ ಷವರ್ಮ ಸೇವಿಸಿದವರು ಅಸ್ವಸ್ಥಗೊಂಡಿದ್ದು ದೇವನಂದ ಸಾವಿಗೀಡಾಗಿದ್ದರು.
ಇದನ್ನೂ ಓದಿ : ಜರ್ಮನಿ ಪ್ರವಾಸ: ಪ್ರಧಾನಿ ಮೋದಿಯವರ ಹೃದಯ ಗೆದ್ದ ಭಾರತೀಯ ಮೂಲದ ಮಕ್ಕಳು
ಲೈಸನ್ಸ್ ಇಲ್ಲ : ಶವರ್ಮ ತಯಾರಿ ಸಂಸ್ಥೆ ಲೈಸನ್ಸ್ ಇಲ್ಲದೆ ಕಾರ್ಯಾಚರಿಸುತ್ತಿದ್ದುದಾಗಿ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಆಹಾರ ಸುರಕ್ಷಾ ಇಲಾಖೆಯ ಲೈಸನ್ಸ್‌ಗಿರುವ ಅರ್ಜಿಯನ್ನು ಸಂಸ್ಥೆಯಲ್ಲಿ ಪ್ರದರ್ಶಿಸಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಅರ್ಜಿ ಅಪೂರ್ಣವಾದುದರಿಂದ ಅದನ್ನು ತಿರಸ್ಕರಿಸಿರುವುದಾಗಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಅರ್ಜಿ ತಿರಸ್ಕರಿಸಲ್ಪಟ್ಟರೆ 30 ದಿನಗಳೊಳಗೆ ಲೋಪಗಳನ್ನು ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಸಬೇಕಾಗಿದೆಯೆಂಬ ನಿಬಂಧನೆಯಿದೆ. ಆದರೆ ಅಂಗಡಿ ಮಾಲಕ ಅದನ್ನು ಪಾಲಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇಪ್ಪತ್ತು ದಿನಗಳ ಹಿಂದೆ ಅಂಗಡಿ ಮಾಲಕ ಗಲ್ಫ್ ಗೆ ಹೋಗಿರುವುದಾಗಿ ಹೇಳಲಾಗುತ್ತಿದೆ. ಆತನನ್ನು ಕೂಡಲೇ ಊರಿಗೆ ಕರೆತರಲು ಪೊಲೀಸರು ಕ್ರಮ ಆರಂಭಿಸಿದ್ದಾರೆ. ಆಹಾರ ಸುರಕ್ಷಾ ಅಧಿಕಾರಿ ಕೆ.ಸುಜಯನ್, ನೀಲೇಶ್ವರ ತಾಲೂಕು ಆಸ್ಪತ್ರೆ ಸೂಪರ್‌ವೈಸರ್ ಎಂ.ಕುಂಞಿಕೃಷ್ಣನ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ.
ಶವರ್ಮದ ಸ್ಯಾಂಪಲ್ ಸಂಗ್ರಹಿಸಿದ ಬಳಿಕ ಸಂಸ್ಥೆಗೆ ಮೊಹರುಗೊಳಿಸಲಾಗಿದೆ. ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದ್ದಾರೆ.
ಮೂರು ವಾರಗಳ ಹಿಂದೆ ತಂದೆ ನಿಧನ : ಮೂರು ವಾರಗಳ ಹಿಂದೆ ದೇವನಂದ ಅವರ ತಂದೆ ಚಂದ್ರೋತ್ ನಾರಾಯಣನ್ ನಿಧನ ಹೊಂದಿದ್ದರು. ದೇವನಂದ ಸಹಪಾಠಿಗಳೊಂದಿಗೆ ಈ ಕೂಲ್ ಬಾರ್‌ನಲ್ಲಿ ಷವರ್ಮ ಸೇವಿಸಿದ್ದರು. ಕೆಲವೇ ಗಂಟೆಗಳೊಳಗೆ ಇವರಲ್ಲಿ ಅಸ್ವಸ್ಥತೆ ಕಂಡು ಬಂದಿತ್ತು. ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.