Advertisement

Kasaragod ಇಲಿ ಜ್ವರ; ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

01:07 AM Sep 25, 2024 | Team Udayavani |

ಕಾಸರಗೋಡು: ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇಲಿ ಜ್ವರ ವರದಿಯಾದ ಹಿನ್ನೆಲೆಯಲ್ಲಿ ಜಾಗ್ರತೆ ಪಾಲಿಸಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್‌ ಕರೆ ನೀಡಿದ್ದಾರೆ.

Advertisement

ಬ್ಯಾಕ್ಟೀರಿಯಾದಿಂದ ಉಂಟಾಗುವ ರಕ್ತ ಅಣು ಬಾಧೆಯಾಗಿದೆ ಇಲಿ ಜ್ವರ. ಇದು ಮನುಷ್ಯರು, ನಾಯಿಗಳಿಗೆ ಹಾಗೂ ಇತರ ಸಾಕು ಪ್ರಾಣಿಗಳಿಗೂ ಹರಡುವ ಸಾಧ್ಯತೆಯಿದೆ. ತಲೆ ನೋವು, ಕಾಲುಗಳ ಸಂಧುಗಳಲ್ಲಿ ನೋವು, ಕಣ್ಣಿಗೆ ಹಳದಿ, ಕೆಂಪು ವರ್ಣ, ಮೂತ್ರದಲ್ಲಿ ಕಡು ಬಣ್ಣ ಈ ಜ್ವರದ ಪ್ರಮುಖ ಲಕ್ಷಣವಾಗಿದೆ ಎಂದರು.

ಈ ರೀತಿ ಮಾಡಲೇಬೇಡಿ
ಜ್ವರದೊಂದಿಗೆ ಹಳದಿ ಕಾಮಾಲೆ ಲಕ್ಷಣ ಕೂಡ ಕಂಡುಬಂದರೆ ಇಲಿ ಜ್ವರ ಎಂದು ಸಂಶಯಿಸಬಹುದು. ಇಲಿ ಜ್ವರ ಬಾರದಂತೆ ತಡೆಯಲು ಕಟ್ಟಿ ನಿಲ್ಲುವ ನೀರಿನಲ್ಲಿ ಇಳಿದು ಸ್ನಾನ ಮಾಡುವುದು, ಕೈ-ಕಾಲುಗಳನ್ನು ತೊಳೆಯುವುದು ಮಾಡಬಾರದು. ಕಟ್ಟಡ ನಿರ್ಮಾಣ ಕಾರ್ಮಿಕರು, ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ ಕೆಲಸ ಮಾಡುವವರು, ಉದ್ಯೋಗ ಖಾತರಿ ಕಾರ್ಮಿಕರು, ಶುಚೀಕರಣ ಕಾರ್ಮಿಕರು ಮೊದಲಾದವರಿಗೆ ಈ ರೋಗ ತಗಲು ಸಾಧ್ಯತೆಯಿದ್ದು, ಕಡ್ಡಾಯವಾಗಿ ವೈದ್ಯರ ನಿರ್ದೇಶದ ಪ್ರಕಾರ ಪ್ರತಿರೋಧ ಔಷಧವನ್ನು ಸೇವಿಸಬೇಕು. ಇದಕ್ಕಿರುವ ಡೋಕ್ಸಿಸೈಕ್ಲಿನ್‌ ಔಷಧ ಸರಕಾರಿ ಆರೋಗ್ಯ ಕೇಂದ್ರಗಳಿಂದಲೂ ಉಚಿತವಾಗಿ ಲಭಿಸುತ್ತದೆ ಎಂದು ವೈದ್ಯಾಧಿಕಾರಿ ತಿಳಿಸಿದರು.

ಆಹಾರ ಪದಾರ್ಥಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಪೇಕ್ಷಿಸಬಾರದು, ಹಣ್ಣು ಹಂಪಲುಗಳನ್ನು ಶುದ್ಧ ನೀರಿನಲ್ಲಿ ತೊಳೆದು ಸೇವಿಸಬೇಕು, ಅವಲಕ್ಕಿ ಮೊದಲಾದ ಆಹಾರ ಪದಾರ್ಥಗಳನ್ನು ಶುಚಿತ್ವದಿಂದ ತಯಾರಿಸಿರುವುದನ್ನು ಮಾತ್ರವೇ ಉಪಯೋಗಿಸಬೇಕು, ಶೀತಲ ಪಾನೀಯಗಳು, ಪ್ಯಾಕೆಟ್‌ಗಳು, ಕುಡಿಯುವ ನೀರು ಬಾಟಲಿಗಳು, ಇತರ ಆಹಾರ ಸ್ಯಾಚೆಟ್‌ಗಳನ್ನು ಇಲಿ ಸಂಪರ್ಕಿಸದ ರೀತಿಯಲ್ಲಿ ತೆಗೆದಿಟ್ಟು ಮಾರಾಟ ಮಾಡಲು ವ್ಯಾಪಾರಿಗಳು ಗಮನ ಹರಿಸಬೇಕು. ರೋಗ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವವರು ಜ್ವರ ಗಮನಕ್ಕೆ ಬಂದರೆ ಶೀಘ್ರವೇ ಸಮೀಪದ ಚಿಕಿತ್ಸಾ ಕೇಂದ್ರಕ್ಕೆ ತಲುಪಿ ಚಿಕಿತ್ಸೆ ಪಡೆಯಬೇಕು ಎಂದು ಡಾ| ಎ.ವಿ. ರಾಮದಾಸ್‌ ತಿಳಿಸಿದ್ದಾರೆ.

200ರಷ್ಟು ಕಾರ್ಮಿಕರ ಆರೋಗ್ಯ ತಪಾಸಣೆ
ಜಿಲ್ಲೆಯಲ್ಲಿ ಇಲಿ ಜ್ವರದ ಲಕ್ಷಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಚಿಕಿತ್ಸೆಗಾಗಿ ನೀಲೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ಸೌಕರ್ಯ ಏರ್ಪಡಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಇತರ ಯಾವುದೇ ರೋಗಿಗಳನ್ನು ಸದ್ಯ ದಾಖಲಿಸದೆ ಇಲಿ ಜ್ವರ ಶಂಕಿತರನ್ನು ಮಾತ್ರವೇ ದಾಖಲಿಸಿ ಸತತ ಐದು ದಿನಗಳ ತನಕ ಅವರ ಮೇಲೆ ತೀವ್ರ ನಿಗಾ ಇರಿಸಲಾಗುತ್ತದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಮಿಕರ ಪೈಕಿ ಹಲವರಲ್ಲಿ ಇಲಿ ಜ್ವರ ರೋಗ ಲಕ್ಷಣಗಳು ಕಂಡುಬಂದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next