ಕಾಸರಗೋಡು: ಅಬಕಾರಿ ಇಲಾಖೆ ಆರಂಭಿಸಿರುವ ಕಾರ್ಯಾಚರಣೆಯಲ್ಲಿ ಗಾಂಜಾ ಸಸಿ, ಗಾಂಜಾ, ಮದ್ಯ ಹಾಗೂ ವಾಹನ ಸಹಿತ ಐವರನ್ನು ಬಂಧಿಸಲಾಗಿದೆ.
ಚಟ್ಟಂಚಾಲ್ ರಸ್ತೆಯ ಹೈಯರ್ ಸೆಕೆಂಡರಿ ಶಾಲಾ ಪರಿಸರದಿಂದ ಕಾಸರಗೋಡು ಅಬಕಾರಿ ದಳ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 33.57 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಈ ಸಂಬಂಧ ಚೆಂಗಳ ಕೆ.ಕೆ.ಪುರಂ ನಿವಾಸಿ ಹರಿಪ್ರಸಾದ್ ಕೆ.ಜಿ.(45) ಎಂಬಾತನನ್ನು ಸ್ಕೂಟರ್ ಸಹಿತ ಬಂಧಿಸಲಾಗಿದೆ.
ಪಟ್ಲ ಕೊಲ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 50 ಬಾಟಲಿ ಮದ್ಯವನ್ನು ವಶಪಡಿಸಿಕೊಂಡು ಸ್ಥಳೀಯ ನಿವಾಸಿ ಸಂದೀಪ್ ಕೆ.ಸಿ.(39) ಎಂಬಾತನನ್ನು ಬಂಧಿಸಲಾಗಿದೆ.
ಉಪ್ಪಳ ಟೆಲಿಫೋನ್ ಎಕ್ಸ್‌ಚೇಂಜ್ ಗೇಟಿನ ಪರಿಸರದಿಂದ ಕುಂಬಳೆ ಅಬಕಾರಿ ದಳ 50 ಗ್ರಾಂ ಗಾಂಜಾ ಸಹಿತ ಉಪ್ಪಳ ಪಚ್ಲಂಪಾರೆಯ ಮೊಹಮ್ಮದ್ ಅಶ್ಫಾಕ್(45)ನನ್ನು ಬಂಧಿಸಲಾಗಿದೆ. ಕೂಡ್ಲು ಕುಟ್ಟಜಕಟ್ಟೆಯಲ್ಲಿ ಕಾಸರಗೋಡು ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 82 ಟೆಟ್ರಾ ಪ್ಯಾಕೆಟ್ ಮತ್ತು ಮದ್ಯ ಸಹಿತ ಕೂಡ್ಲಿನ ರಾಜೇಂದ್ರನ್(43)ನನ್ನು ಬಂಧಿಸಿದೆ.
ಉದುಮ ಪಡಿಂಞಾರ್‌ನಲ್ಲಿ 1.5 ಮೀಟರ್‌ನಷ್ಟು ಎತ್ತರ ಬೆಳೆದ ಗಾಂಜಾ ಸಸಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಹೊಸದುರ್ಗ ಅಬಕಾರಿ ದಳ ಬಲ್ಲಾ ನೆಲ್ಲಿಕಾಟ್‌ನಿಂದ ಆರು ಲೀಟರ್ ಮದ್ಯವನ್ನು ವಶಪಡಿಸಿ ನೆಲ್ಲಿಕ್ಕಾಟ್‌ನ ವೇಣು ವಿ. (49) ಎಂಬಾತನನ್ನು ಬಂಧಿಸಲಾಗಿದೆ.