ಕಾಸರಗೋಡು: ಅವಳಿ ಪಾಸ್‌ಪೋರ್ಟ್ ಸಂಬಂಧ ನೆಲ್ಕಳ ನಿವಾಸಿ ರಫೀಕ್ ಮುಹಮ್ಮದ್ (42) ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.
Advertisement
ರಫೀಕ್ ಈ ಹಿಂದೆ ಕೋಯಿಕ್ಕೋಡ್ ಪಾಸ್‌ಪೋರ್ಟ್ ಕಚೇರಿಯಿಂದ ಪಾಸ್‌ಪೋರ್ಟ್ ಪಡೆದಿದ್ದ. ಅದನ್ನು ಬಳಸಿ ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಈ ಮಧ್ಯೆ ಬೆಂಗಳೂರಿನ ಕಚೇರಿಯಿಂದ ಮತ್ತೂಂದು ಪಾಸ್‌ಪೋರ್ಟ್ ಪಡೆದುಕೊಂಡಿದ್ದಾನೆ. ಪಯ್ಯನ್ನೂರು ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಪಾಸ್‌ಪೋರ್ಟ್ ನವೀಕರಿಸಲು ಅರ್ಜಿ ಸಲ್ಲಿಸಿದಾಗ ಅವಳಿ ಪಾಸ್‌ಪೋರ್ಟ್‌ಗಳಿರುವ ವಿಷಯ ತಿಳಿದು ಬಂದಿದೆ. ಈ ಬಗ್ಗೆ ಪಾಸ್‌ಪೋರ್ಟ್ ಕಚೇರಿ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದರು. ಇದರಂತೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕಾಸರಗೋಡು: ಅಕ್ರಮ ಮರಳುಗಾರಿಕೆ ದಂಧೆಗೆ ಕರ್ತವ್ಯ ನಿರತ ಪೊಲೀಸರ ಚಲನವಲನದ ಬಗ್ಗೆ ಮಾಹಿತಿ ರವಾನಿಸಿದ ಆರೋಪದಂತೆ ಜಿಲ್ಲೆಯ ಏಳು ಮಂದಿ ಪೊಲೀಸರ ವಿರುದ್ಧ ಇಲಾಖೆ ಮಟ್ಟದ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಆರೋಪ ಹೊತ್ತವರು ಮೇಲ್ಪರಂಬ ಮತ್ತು ಬೇಕಲ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ಪೊಲೀಸ್ ವಾಹನದ ಚಾಲಕರಾಗಿದ್ದಾರೆ. ಇವರ ಬಗ್ಗೆ ಡಿವೈಎಸ್‌ಪಿ ಮನೋಜ್ ಎ.ವಿ. ತನಿಖೆ ನಡೆಸಿ ಅಗತ್ಯದ ಮಾಹಿತಿ ಸಂಗ್ರಹಿಸಿ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಈಗಾಗಲೇ ಸಲ್ಲಿಸಿದ್ದಾರೆ. ಮರಳು ಅಕ್ರಮ ದಂಧೆಯಲ್ಲಿ ನಿರತರಾಗಿರುವವರ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಪರಿಶೀಲಿಸಿದಾಗ ಈ ಏಳು ಮಂದಿ ಪೊಲೀಸರ ನಂಬ್ರಗಳು ಲಭಿಸಿವೆ.