Advertisement

Kasaragod ಅಪರಾಧ ಸುದ್ಧಿಗಳು

07:26 PM Aug 12, 2024 | Team Udayavani |

ಶಂಕಿತ ಮೂವರು ಮನೆಯಿಂದ ಕಳವಿಗೆ ಬಂದವರು
ಕುಂಬಳೆ: ಕುಂಬಳೆ ಸಿ.ಎಚ್‌.ಸಿ. ರಸ್ತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದ ಮೂವರು ಯುವಕರು ಮನೆಯಿಂದ ಕಳವು ನಡೆಸಲು ಬಂದವರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಪೆರಿಯಡ್ಕದ ಅನ್ಸಾರ್‌(26), ಮಧೂರು ಕೆ.ಕೆ.ಪುರದ ಬಿ.ಉಸ್ಮಾನ್‌(28) ಮತ್ತು ಉಳಿಯತ್ತಡ್ಕ ನ್ಯಾಶನಲ್‌ ನಗರದ ಅಶ್ರಫ್‌ (28)ನನ್ನು ಸ್ಥಳೀಯರು ಶನಿವಾರ ಮುಂಜಾನೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದರು. ಈ ಮೂವರು ಅಲ್ಲಿನ ಕೆ.ಬಿ.ಅಬ್ಟಾಸ್‌ ಅವರ ಮನೆಯಿಂದ ಕಳವು ನಡೆಸಲು ತಲುಪಿದ್ದರು. ಶಬ್ದ ಕೇಳಿ ಮನೆಯವರು ಎಚ್ಚೆತ್ತಾಗ ಮನೆಯ ಕಾರು ಶೆಡ್‌ನ‌ಲ್ಲಿ ಅಡಗಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕ್ರಿಕೆಟ್‌ ಆಟ ಮುಗಿದು ಸ್ಥಳೀಯ ಯುವಕರು ಬಂದಿದ್ದು, ಈ ವೇಳೆ ಮನೆಯಲ್ಲಿ ಕಳವಿಗೆ ಯತ್ನಿಸಿದ್ದ ಈ ಮೂವರು ಪರಾರಿಯಾಗಲು ಯತ್ನಿಸಿದ್ದರು. ಇದನ್ನು ಅರಿತ ಯುವಕರು ಈ ಮೂವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಪೊಲೀಸರು ಇವರನ್ನು ಬಂಧಿಸಿದ್ದು, ಪೊಲೀಸರು ತನಿಖೆ ನಡೆಸಿದಾಗ ಮನೆ ಕಳವಿಗೆ ಬಂದಿರುವುದಾಗಿ ಈ ಮೂವರು ತಪ್ಪೊಪ್ಪಿಕೊಂಡರು. ಇವರಿಗೆ ನ್ಯಾಯಾಲಯ ರಿಮಾಂಡ್‌ ವಿಧಿಸಿದೆ.

ಈಗಾಗಲೇ ಬಂಧಿತ ಉಸ್ಮಾನ್‌ ವಿರುದ್ಧ ಹೊಡೆದಾಟ, ವಂಚನೆ ಸಹಿತ ಏಳು ಕೇಸುಗಳಿವೆ. ಅನ್ಸಾರ್‌ ವಿರುದ್ಧ ಕೊಲೆ ಯತ್ನ, ನಕಲಿ ಚಿನ್ನ ಅಡವಿರಿಸಿ ವಂಚನೆ ಸಹಿತ ಆರರಷ್ಟು ಕೇಸುಗಳಿವೆ. ಅಶ್ರಫ್‌ ವಿರುದ್ಧ ಐದು ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊನೆಗೂ ಮುಹಮ್ಮದ್‌ ಅಶ್ಫಾಕ್‌ ಜತೆ ತೆರಳಿದ ವಿಸ್ಮಯ
ಕಾಸರಗೋಡು: ದೂರುಗಳು ಹಾಗು ಕೇಸುಗಳ ಬಳಿಕ ಮುಹಮ್ಮದ್‌ ಅಶ್ಫಾಕ್‌ ಜೊತೆ ವಿಸ್ಮಯ ತೆರಳಿದ್ದಾಳೆ.

Advertisement

ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಲವಾರು ಪ್ರಕರಣಗಳಲ್ಲಿ ಆರೋಪಿಯಾದ ಮೊಹಮ್ಮದ್‌ ಅಶ್ಫಾಕ್‌ ವಿದ್ಯಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದಾನೆ. ಈತ ಹಾಗು ಮಂಗಳೂರಿನಲ್ಲಿ ಬಿಸಿಎ ವಿದ್ಯಾರ್ಥಿನಿಯಾಗಿರುವ ವಿಸ್ಮಯ ಪ್ರೇಮಿಗಳಾಗಿದ್ದರು. ಕೆಲವು ತಿಂಗಳ ಹಿಂದೆ ವಿಸ್ಮಯ ನಾಪತ್ತೆಯಾಗಿದ್ದು, ಮನೆಯವರು ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿ ಆಕೆಯನ್ನು ಪತ್ತೆಹಚ್ಚಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆಕೆಯ ಇಷ್ಟದಂತೆ ತೆರಳಲು ತಿಳಿಸಿದಾಗ ವಿಸ್ಮಯ ಹೆತ್ತವರ ಜತೆ ತೆರಳಿದ್ದಳು. ಆ ಬಳಿಕ ವಿಸ್ಮಯಳನ್ನು ಮನೆ ಮಂದಿ ಉಳ್ಳಾಲದ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಆದರೆ ಅಲ್ಲಿಂದ ಅಪಹರಿಸಿರುವುದಾಗಿ ಉಳ್ಳಾಲ ಪೊಲೀಸರಿಗೆ ದೂರು ನೀಡಲಾಗಿತ್ತು.

ಮೊಹಮ್ಮದ್‌ ಅಶ್ಫಾಕ್‌ವಿವಾಹವಾಗಿದ್ದಾನೆಂದೂ, ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದೂ ದೂರಿನಲ್ಲಿ ಹೇಳಲಾಗಿತ್ತು. ಬಳಿಕ ವಿಸ್ಮಯಳನ್ನು ಪತ್ತೆಹಚ್ಚಿ ಕೌನ್ಸಿಲಿಂಗ್‌ ಸೆಂಟರ್‌ಗೆ ಸೇರಿಸಲಾಗಿತ್ತು. ಅಶ್ಫಾಕ್‌ನೊಂದಿಗೆ ಜೀವಿಸಲು ಆಗ್ರಹಿಸುವುದಾಗಿ ವಿಸ್ಮಯ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದ್ದಳು. ನ್ಯಾಯಾಲಯ ಇದನ್ನು ಅಂಗೀಕರಿಸಿದ್ದು, ಇದರ ಮಧ್ಯೆ ವಿವಾಹ ನಡೆದಿದೆ. ಇವರ ವಿವಾಹದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.

ಬಸ್‌ನೊಳಗೆ ಕುಸಿದು ಬಿದ್ದು ಪ್ರಯಾಣಿಕನ ಸಾವು
ಕಾಸರಗೋಡು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ಬಸ್ಸಿನೊಳಗೆ ಕುಸಿದು ಬಿದ್ದು ಸಾವಿಗೀಡಾದ ಘಟನೆ ನಗರದಲ್ಲಿ ನಡೆದಿದೆ.

ಮೃತರನ್ನು ತಲಪಾಡಿ ಕುದ್ರು ನಿವಾಸಿ, ತಲಪ್ಪಾಡಿಯ ವಿಜಯಾ ಬ್ಯಾಂಕ್‌ ಶಾಖೆ ಸಮೀಪದ ಕಲ್ಪಕ ಹೌಸ್‌ನ ರವೀಂದ್ರ(65) ಎಂದು ಗುರುತಿಸಲಾಗಿದೆ.

ಈತ ಕಾಸರಗೋಡು ಬಸ್‌ ನಿಲ್ದಾಣದಿಂದ ಬಸ್ಸೇರಿದ್ದು, ಬಸ್‌ ನಗರದ ಪ್ರೆಸ್ ಕ್ಲಬ್‌ ರಸ್ತೆ ಬಳಿ ತಲುಪಿದಾಗ ಬಸ್‌ನೊಳಗೆ ಕುಸಿದು ಬಿದ್ದರು. ಅವರನ್ನು ತತ್‌ಕ್ಷಣ ನಗರದ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.‌

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೈಲುಗಳಲ್ಲಿ ಕಳವು : ಆರೋಪಿಯ ಬಂಧನ
ಕಾಸರಗೋಡು: ರೈಲು ಗಾಡಿಗಳಲ್ಲಿ ಹಾಗು ರೈಲು ನಿಲ್ದಾಣಗಳಿಂದ ಕಳವು ಮಾಡುವ ಆರೋಪಿ ಕಾಸರಗೋಡು ಚೆರ್ಕಪ್ಪಾರ ಸಪ್ನ ಮಂಜಿಲ್‌ನ ಇಬ್ರಾಹಿಂ ಬಾದುಶಾ(26)ನನ್ನು ಪೆರುಂಬಾವೂರಿನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಆರೋಪಿಯನ್ನು ಎರ್ನಾಕುಳಂ ಸೌತ್‌ ರೈಲು ನಿಲ್ದಾಣದಿಂದ ಬಂಧಿಸಿ ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಈ ವೇಳೆ ಠಾಣೆಯ ಬಾತ್‌ರೂಂಗೆ ಹೋದ ಆರೋಪಿ ಅಲ್ಲಿನ ಕಿಟಕಿಯ ಸರಳುಗಳನ್ನು ತೆಗೆದು ಪರಾರಿಯಾಗಿದ್ದ. ಈತನ ಬಂಧನಕ್ಕೆ ಸ್ಕ್ವಾಡ್‌ ರಚಿಸಲಾಗಿತ್ತು. ಈತ ಈ ಹಿಂದೆಯೂ ಜೈಲಿನಿಂದ ಪರಾರಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next