ಕಾಸರಗೋಡು: ಬರಗಾಲ ಪೀಡಿತ ಬ್ಲಾಕ್ ಆಗಿರುವ ಕಾಸರಗೋಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಜಲ ಸಂರಕ್ಷಣೆ ಹಾಗೂ ಕೃಷಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಕಾಸರಗೋಡು ಬ್ಲಾಕ್ ಪಂಚಾಯತ್ ಸಭೆಯಲ್ಲಿ ತಿಳಿಸಲಾಗಿದೆ. ಕಾಸರಗೋಡು ವ್ಯಾಪಾರ ಭವನದಲ್ಲಿ ಆಯೋಜಿಸಲಾಗಿದ್ದ ಕಾಸರಗೋಡು ಬ್ಲಾಕ್ ಪಂಚಾಯತ್ ಮಟ್ಟದ ಗ್ರಾಮಸಭೆಯಲ್ಲಿ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕುಂಞಿಚಾಯಿಂಡಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯಕಾರಿ ಸಮಿತಿ ಸಂಚಾಲಕರು, ಯೋಜನಾ ಸಮಿತಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಲ ಸಂರಕ್ಷಣೆಗೆ ಕೋಟಿ ರೂ. ಗೂ ಅಧಿಕ ವೆಚ್ಚ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕುಂಞಿ ಚಾಯಿಂಡಡಿ ಅವರು ಮಾತನಾಡಿ ಬ್ಲಾಕ್ ವ್ಯಾಪ್ತಿಯ ಅಭಿವೃದ್ಧಿ ದೃಷ್ಟಿಕೋನ, ಆದ್ಯತೆಗಳನ್ನು ವಿವರಿಸುತ್ತಾ, ಬರಗಾಲ ಪೀಡಿತ ಬ್ಲಾಕ್ ಆದ ಕಾಸರಗೋಡು ಬ್ಲಾಕ್ ಪಂಚಾಯತ್‌ನಲ್ಲಿ ಕಳೆದ ವರ್ಷ ಒಂದು ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಜಲ ಸಂರಕ್ಷಣಾ ಯೋಜನೆಗಳಿಗಾಗಿ ಮೀಸಲಿರಿಸಲಾಗಿತ್ತು. ಈ ವರ್ಷ ಜಲ ಸಂರಕ್ಷಣಾ ಯೋಜನೆಗಳಿಗೆ, ಕೃಷಿಗೆ ಪ್ರತ್ಯೇಕ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಮಿಶನ್‌ನ ಕಾರ್ಯ ಚಟುವಟಿಕೆಗಳು, ವಾರ್ಷಿಕ ಯೋಜನೆ ಎಂಬ ವಿಷಯದ ಕುರಿತು ಯೋಜನಾ ಸಮಿತಿಯ ಉಪಾಧ್ಯಕ್ಷ ಮಕ್ಕಾರ್ ಮಾಸ್ತರ್ ಸಮಗ್ರ ವಿವರಣೆ ನೀಡಿದರು. ಪ್ರಸ್ತುತ ವಾರ್ಷಿಕ ಯೋಜನೆ ನಿರ್ವಹಣಾ ಪ್ರಗತಿ ವರದಿಯನ್ನು ಸಹಾಯಕ ಯೋಜನಾ ಸಂಯೋಜಕ ಜೋಸ್ ಸಿ. ಜೇಕಬ್ ವಿವರಿಸಿದರು. ಅಭಿವೃದ್ಧಿ ಕಾರ್ಯ ಸ್ಥಾಯೀ ಸಮಿತಿಯ ಅಧ್ಯಕ್ಷ ಟಿ.ಡಿ. ಕಬೀರ್ ಅವರು 2018-19ನೇ ವಾರ್ಷಿಕ ಯೋಜನೆಯ ಕರಡು ಯೋಜನಾ ನಿರ್ದೇಶನಗಳನ್ನು ಮಂಡಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ನ್ಯಾಯವಾದಿ ಕೆ. ಶ್ರೀಕಾಂತ್, ಸುಫೆ„ಜಾ ಟೀಚರ್, ಮೊಗ್ರಾಲ್ ಪುತ್ತೂರು ಪಂಚಾಯತ್ ಅಧ್ಯಕ್ಷ ಎ.ಎ. ಜಲೀಲ್, ಚೆಮ್ನಾಡು ಪಂಚಾಯತ್ ಅಧ್ಯಕ್ಷ ಅಬ್ದುಲ್ ಖಾದರ್ ಕಲ್ಲಟ್ರ, ಮಧೂರು ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಚೆಂಗಳ ಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ, ಕಾಸರಗೋಡು ಬ್ಲಾಕ್ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿಯ ಅಧ್ಯಕ್ಷೆ ತಾಹಿರಾ ಯೂಸಫ್, ಬ್ಲಾಕ್ ಪಂ. ಸದಸ್ಯ ಎಚ್.ಸತ್ಯಶಂಕರ ಭಟ್ ಮಾತನಾಡಿದರು.
ಸಾರ್ವಜನಿಕ ಚರ್ಚೆ, ಪ್ರಶ್ನಾವಳಿ, ಕಾರ್ಯಕಾರಿ ಸಮಿತಿಯ ಆಧಾರದಲ್ಲಿ ಗುಂಪು ಚರ್ಚೆ ಇತ್ಯಾದಿ ನಡೆಯಿತು. ಸಭೆಯಲ್ಲಿ ಯೋಜನಾ ನಿರ್ದೇಶನಗಳ ವರದಿ ಮಾಡಲಾಯಿತು. ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ರಾಗೇಶ್ ಟಿ. ಸ್ವಾಗತಿಸಿ, ಪ್ರಧಾನ ವಿಸ್ತರಣಾ ಅಧಿಕಾರಿ ಉಲ್ಲಾಸನ್ ವಂದಿಸಿದರು.