Advertisement

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

10:13 PM Jul 05, 2024 | Team Udayavani |

ನ್ಯುಮೋನಿಯಾ : ಬಾಲಕಿ ಸಾವು

Advertisement

ಬದಿಯಡ್ಕ: ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ನೀರ್ಚಾಲು ಸಮೀಪದ ಪುದುಕೋಳಿ ನಿವಾಸಿ, ಕಾಸರಗೋಡಿನಲ್ಲಿ ಕೆನರಾ ಬ್ಯಾಂಕ್‌ ಸಿಬಂದಿ ಹರೀಶ್‌ ಅವರ ಪುತ್ರಿ ಭೂಮಿಕಾ (4) ಸಾವಿಗೀಡಾದ ಘಟನೆ ನಡೆದಿದೆ.

ಜ್ವರದಿಂದ ಬಳಲುತ್ತಿದ್ದ ಭೂಮಿಕಾಳನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವು ಸಂಭವಿಸಿತು.

ಘರ್ಷಣೆ: ಮೂವರಿಗೆ ಗಾಯ
ಕಾಸರಗೋಡು: ಕಾಂಞಂಗಾಡ್‌ ಅಲಾಮಿಪಳ್ಳಿಯ ಬಾರ್‌ನಲ್ಲಿ ನಡೆದ ಘರ್ಷಣೆಯಲ್ಲಿ ಅರಯಿ ಕಾರ್ತಿಕ್‌ ಪಿಲಿಕುನ್ನಿಲ್‌ನ ಅಮಲ್‌ ಕೃಷ್ಣ (23), ಅರಯಿ ಕಂಡಂಕುಟ್ಟಿಚ್ಚಾಲ್‌ ಪಳ್ಳಿಯ ಪಿ.ಪಿ. ವಿಷ್ಣು ಪ್ರಭಾತ್‌(26) ಮತ್ತು ಅರಯಿಯ ವಿಷ್ಣು ಪಿ.ಪಿ.(26) ಗಾಯಗೊಂಡಿದ್ದಾರೆ.

ಗಾಂಜಾ ಸೇದುತ್ತಿದ್ದ ಇಬ್ಬರ ಬಂಧನ
ಕುಂಬಳೆ: ಗಾಂಜಾ ಬೀಡಿ ಸೇದುತ್ತಿದ್ದ ತಳಂಗರೆ ನಿವಾಸಿ ಅಹಮ್ಮದ್‌ (31) ಮತ್ತು ಕೊಯಿಪ್ಪಾಡಿ ಕಡಪ್ಪುರದ ರಿಯಾಸ್‌ (33)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕೊಯಿಪ್ಪಾಡಿ ಕಡಪ್ಪುರದಲ್ಲಿ ಗಾಂಜಾ ಬೀಡಿ ಸೇದುತ್ತಿದ್ದಾಗ ಬಂಧಿಸಲಾಯಿತು.

Advertisement

ಫಾತಿಮತ್‌ ಸುಹರಾರನ್ನು
ಕೊಂದದ್ದು ಅಸೈನಾರ್‌: ಪೊಲೀಸ್‌
ಕಾಸರಗೋಡು: ಹೊಸದುರ್ಗ ನಾರ್ತ್‌ ಕೋಟಚ್ಚೇರಿಯ ಅವಿಯಿಲ್‌ ಅಪಾರ್ಟ್‌ಮೆಂಟ್‌ನಲ್ಲಿ ನೆಲ್ಲಿಕಟ್ಟೆ ನಿವಾಸಿ ಫಾತಿಮತ್‌ ಸುಹರಾ (42) ಅವರನ್ನು ಕೊಲೆಗೈದಿದ್ದು ಆಕೆಯ ಪ್ರಿಯತಮ ಚೆಂಗಳ ರಹಮ್ಮತ್‌ ನಗರದ ಕನಿಯಡ್ಕದ ಅಸೈನಾರ್‌(33) ಎಂಬುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಹೊಸದುರ್ಗ ಪೊಲೀಸರು ತಿಳಿಸಿದ್ದಾರೆ. ಕುತ್ತಿಗೆಗೆ ಇರಿತದ ಗಾಯ ಮತ್ತು ತಲೆಗೆ ಗಂಭೀರ ಗಾಯಗೊಂಡಿರುವುದರಿಂದ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಿದೆ.

ಅಮಿತ ಮಾತ್ರೆ ಸೇವನೆ : ಮಹಿಳೆ ಸಾವು
ಕಾಸರಗೋಡು: ಪತಿಯ ನಿಧನದ ಬಳಿಕ ಮನನೊಂದಿದ್ದ ಪತ್ನಿ ಅಮಿತ ಪ್ರಮಾಣದಲ್ಲಿ ಮಾತ್ರೆಗಳನ್ನು ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಎಡನೀರಿನ ದಿ|ನಾರಾಯಣ ಅವರ ಪತ್ನಿ ಲಕ್ಷ್ಮೀ (49) ಪರಿಯಾರಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾದರು. ಘಟನೆಗೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಪತಿ ಹೃದಯ ಸಂಬಂಧ ಅಸೌಖ್ಯದಿಂದ ಸಾವಿಗೀಡಾಗಿದ್ದರು.

ಕಾಂಞಂಗಾಡ್‌ನ‌ಲ್ಲಿ ವಿಷ ಹೊಗೆ
ನಗರಸಭಾ ಕಚೇರಿಗೆ ಮುತ್ತಿಗೆ
ಹಾಕಿದ್ದ 50 ಮಂದಿ ವಿರುದ್ಧ ಕೇಸು
ಕಾಸರಗೋಡು: ಜನರೇಟರ್‌ನಿಂದ ಹೊರ ಸೂಸಿದ ಹೊಗೆಯನ್ನು ಉಸಿರಾಡಿ ಹೊಸದುರ್ಗ ಲಿಟಿಲ್‌ ಫವರ್‌ ಹೈಯರ್‌ ಸೆಕೆಂಡರಿ ಶಾಲೆಯ ಐವತ್ತರಷ್ಟು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆಯನ್ನು ಪ್ರತಿಭಟಿಸಿ ಕಾಂಞಂಗಾಡ್‌ ನಗರಸಭಾ ಕಚೇರಿಗೆ ಮುತ್ತಿಗೆ ಹಾಕಿದ್ದ 50 ಮಂದಿಯ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.

ಯುಡಿಎಫ್‌ ನೇತಾರರಾದ ಬಶೀರ್‌ ವೆಳ್ಳಿಕೋತ್‌, ಬಿ.ಪಿ.ಪ್ರದೀಪ್‌ ಕುಮಾರ್‌, ಎಂ.ಪಿ.ಜಾಫರ್‌, ಪಿ.ವಿ.ಸುರೇಶ್‌, ಬದ್ರುದ್ದೀನ್‌, ಹಾರಿಸ್‌ ಸಹಿತ ಕಂಡರೆ ಗುರುತು ಪತ್ತೆಹಚ್ಚಬಹುದಾದ ಇತರ 44 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರತಿಭಟನಾಕಾರರು ಕಚೇರಿಯ ಮುಂಭಾಗದ ಗಾಜಿನ ಬಾಗಿಲು ಮುರಿದಿರುವುದಾಗಿ ಕೇಸು ದಾಖಲಿಸಲಾಗಿದೆ.

ಕಣ್ವತೀರ್ಥದಲ್ಲಿ ತೆಂಗಿನ ಮರ, ರಸ್ತೆ
ಸಮುದ್ರ ಪಾಲು; ಮನೆಗಳಿಗೆ ಭೀತಿ
ಮಂಜೇಶ್ವರ: ಕಣ್ವತೀರ್ಥದಲ್ಲಿ ಕಡಲ್ಕೊರೆತಕ್ಕೆ ಹಲವು ಮನೆಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿವೆ. ಈಗಾಗಲೇ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ರಸ್ತೆ ಕೂಡ ನೀರಿಗೆ ಕೊಚ್ಚಿ ಹೋಗಿದೆ. ಕೆಲವು ಮನೆಗಳ ಅಂಗಳದ ವರೆಗೆ ಸಮುದ್ರ ನೀರು ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next