ಕಾಸರಗೋಡು: ನಾಯಕನಾದವನು ಸಮರ್ಥನೂ ವಿಶಾಲ ಹೃದಯಿಯೂ ತೆರೆದ ಮನಸ್ಸಿನವನೂ ಆಗಿ ಎಲ್ಲರೊಳ ಗೊಂದಾಗಿ ಬದುಕುವವನಾಗಿದ್ದಲ್ಲಿ ಸಂಘಟನೆಯೂ ಬೆಳೆಯುತ್ತದೆ. ಒಗ್ಗಟ್ಟು ಉಂಟಾಗುತ್ತದೆ ಎಂಬುದಾಗಿ ಕಾಸರಗೋಡು ಅಂಗ ಸಂಸ್ಥೆಯ ಅಧ್ಯಕ್ಷ ಎಸ್.ಎನ್. ಮಯ್ಯ ಬದಿಯಡ್ಕ ಅವರು ಅಭಿಪ್ರಾಯಪಟ್ಟರು.
ಕೂಟ ಮಹಾಜಗತ್ತು ಸಾಲಿಗ್ರಾಮದ ಕಾಸರಗೋಡು ಅಂಗಸಂಸ್ಥೆಯ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಅಂಗ ಸಂಸ್ಥೆಯ ಅಧ್ಯಕ್ಷರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಸೀಮೆಯ ಕುಲ ಪುರೋಹಿತರಾದ ತುಂಗ ರವಿಶಂಕರ ಭಟ್ ಅವರು ಮಾತನಾಡಿ ಬ್ರಾಹ್ಮಣ್ಯವನ್ನು ಕಾಪಾಡಿದರೆ ವೈದಿಕ ಧರ್ಮವನ್ನು ಉಳಿಸಿದಂತೆ. ಆಗ ಸಮಾಜವೂ ಕೂಡ ಉತ್ತಮ ಸ್ಥಿತಿಯಲ್ಲಿದ್ದು ಎಲ್ಲರಲ್ಲೂ ಸುಖ, ಶಾಂತಿ ನೆಲೆಸುತ್ತವೆ ಎಂಬುದಾಗಿ ಕಿವಿಮಾತು ಹೇಳಿದರು. ಈ ಸಂದರ್ಭ ಹಿರಿಯ ಕೂಟ ಬಂಧುಗಳಾದ ರಘುರಾಮ ಕಾರಂತ ಉಜಿರೆಕೆರೆ ಉಪಸ್ಥಿತರಿದ್ದರು.
ಕಾಸರಗೋಡು ಅಂಗಸಂಸ್ಥೆಯ ಆತಿಥ್ಯದಲ್ಲಿ ನಡೆದ ಕೇಂದ್ರೀಯ ಮಹಾಧಿವೇಶನ ಹಾಗೂ 70ನೇ ವಾರ್ಷಿಕ ಮಹಾಸಭೆಯು
ಸಂಭ್ರಮೋತ್ಸಾಹಗಳೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಇದಕ್ಕಾಗಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕಾಸರಗೋಡು ಅಂಗಸಂಸ್ಥೆಯ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ಮಧೂರು ಕೃತಜ್ಞತೆ ಸಲ್ಲಿಸಿದರು.
ಸಂಪರ್ಕ ಸಭೆಗಿಂತ ಮೊದಲು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಅಷ್ಟೋತ್ತರ ಪಾರಾಯಣ, ಭಜನ ಸಂಕೀರ್ತನೆ
ಜರಗಿತು. ಅನಿತಾ ಬಿ. ಸ್ವಾಗತಿಸಿದರು. ಕೋಶಾಧಿಕಾರಿ ಬಿ. ಕೃಷ್ಣ ಕಾರಂತ ಬನ್ನೂರು ವಂದಿಸಿದರು.