ಕಾರವಾರ: ಇಲ್ಲಿನ ಮೆಡಿಕಲ್ ಕಾಲೇಜು ಹಾಗೂ ಅದರ ಅಧೀನದ ಆಸ್ಪತ್ರೆಯ ಗುತ್ತಿಗೆ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಬಳಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಬುಧವಾರ ಗುತ್ತಿಗೆ ಕಾರ್ಮಿಕ ನೌಕರರ ಸಂಘಟನೆ ಅಧ್ಯಕ್ಷ ವಿಲ್ಸನ್ ಬೈತಖೋಲ ಅವರು ಧರಣಿಗೆ ಮುನ್ನ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿ ಮೆಡಿಕಲ್ ಕಾಲೇಜು ಆಡಳಿತ ಗುತ್ತಿಗೆ ನೌಕರರ ವಿರೋಧಿ ಧೋರಣೆ ಏಜೆನ್ಸಿ ಜೊತೆ ಹೇಗೆ ಶಾಮೀಲಾಗಿದೆ ಎಂಬ ಸಂಗತಿ ವಿವರಿಸಿದರು.
ಕಳೆದ 18 ತಿಂಗಳಿಂದ ಗುತ್ತಿಗೆ ಕಾರ್ಮಿಕರ ಪಿಎಫ್ ಹಾಗೂ ಇಎಸ್‌ಐ ಕಟ್ಟಬೇಕೆಂಬ ನಿಯಮ ಪಾಲಿಸಲು ಒತ್ತಾಯಿಸುತ್ತಿದ್ದೇವೆ. ಕಾರ್ಮಿಕರ ಹಿತ ಕಾಯುತ್ತಿದ್ದ ಪ್ರಾಮಾಣಿಕ ಏಜೆನ್ಸಿಯನ್ನು ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಕೈ ಬಿಟ್ಟಿತು. ಆದರೆ ನಿಯಮಬಾಹಿರವಾಗಿ ಹಾಗೂ ಕಾರ್ಮಿಕರಿಗೆ ಅನ್ಯಾಯ ಮಾಡುವ, ಬ್ಲಾಕ್ ಲೀಸ್ಟ್‌ಗೆ ಸೇರಿಸಬೇಕಾದ ಏಜೆನ್ಸಿಯನ್ನು ಕಾಲೇಜಿನಲ್ಲಿ ಇಟ್ಟುಕೊಂಡು ಗುತ್ತಿಗೆ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಪಾದಿಸಿದರು.
ಕುಮಟಾದ ಮಧುರಾ ಏಜೆನ್ಸಿ ಹಾಗೂ ಅದರ ಮುಖ್ಯಸ್ಥ ದಿಲೀಪ್ ಎಂಬುವವರು 2012 ರಿಂದ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ಕಾರ್ಮಿಕ ಅಧಿಕಾರಿಗೆ ದೂರು ನೀಡಲಾಗಿದೆ. ಡಿಸಿ, ಎಸ್ಪಿಗೆ ದೂರು ನೀಡಲಾಗಿದೆ. ಆದರೆ ಕ್ರಮವಾಗಿಲ್ಲ. ಇದು ಮೆಡಿಕಲ್ ಕಾಲೇಜು ಆಡಳಿತ ನಡೆಸುವವರು, ಮಧುರಾ ಏಜೆನ್ಸಿ ಜೊತೆ ಶಾಮೀಲಾಗಿದ್ದಾರೆ ಎಂಬುದರ ಸ್ಪಷ್ಟ ನಿದರ್ಶನ ಎಂದು ಕಾರ್ಮಿಕ ಮುಖಂಡ ವಿಲ್ಸನ್ ಫರ್ನಾಂಡೀಸ್ ಆಪಾದಿಸಿದರು.
ಆಸ್ಪತ್ರೆ ರೋಗಿಗಳಿಗೆ ತೊಂದರೆ ಆಗಬಾರದು ಎಂದು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೆವು. ಗುತ್ತಿಗೆ ಮಹಿಳಾ ಕಾರ್ಮಿಕರಿಗೆ ಬೆದರಿಕೆ ಹಾಕಲಾಗುತ್ತಿದೆ. ನಾವು ಯಾವ ನಾಡಿನಲ್ಲಿ ಇದ್ದೇವೆ ಎಂಬುದೇ ಗೊತ್ತಾಗುತ್ತಿಲ್ಲ. ಮಧುರ ಏಜೆನ್ಸಿಯನ್ನು ಮೆಡಿಕಲ್ ಕಾಲೇಜು ಗುತ್ತಿಗೆ ಏಜೆನ್ಸಿಯಿಂದ ಕೈಬಿಡಬೇಕು ಎಂಬುದು ನಮ್ಮ ಮೊದಲ ಬೇಡಿಕೆ. ನಮ್ಮ ಅಳಲನ್ನು ಶಾಸಕಿ ರೂಪಾಲಿ ನಾಯ್ಕ ಆಲಿಸಬೇಕು. ಮಹಿಳಾ ಕಾರ್ಮಿಕರ ಮೇಲಿನ ದೌರ್ಜನ್ಯವನ್ನು ಅವರು ಕೇಳಬೇಕು. ಗುತ್ತಿಗೆ ಕಾರ್ಮಿಕರಿಗೆ ಪಿಎಫ್ ನೀಡುತ್ತಿದ್ದ ಯುನಿವರ್ಸಲ್ ಏಜೆನ್ಸಿಗೆ ಮರಳಿ ಗುತ್ತಿಗೆ ನೀಡಬೇಕು. ಇಲ್ಲವೇ ನ್ಯಾಯಯುತವಾಗಿ ಪಿಎಫ್, ಇಎಸ್‌ಐ ಕಟ್ಟುವವರಿಗೆ ಏಜೆನ್ಸಿ ನೀಡಲಿ ಎಂದು ವಿಲ್ಸನ್ ಆಗ್ರಹಿಸಿದರು.
ನ್ಯಾಯ ಸಿಗುವವರೆಗೆ ಕೆಲಸ ನಿಲ್ಲಿಸಿ, ದಿನವೂ ಧರಣಿ ನಡೆಸಲಾಗುವುದು ಎಂದು ಅವರು ಹೇಳಿದರು. ಧರಣಿ ಪ್ರಾರಂಭ: ಮೆಡಿಕಲ್ ಕಾಲೇಜಿನ ಗುತ್ತಿಗೆ ಕಾರ್ಮಿಕ ಮಹಿಳೆಯರು, ಯುವತಿಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧುವಾರದಿಂದ ಧರಣಿ ಆರಂಭಿಸಿದ್ದಾರೆ. ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗಲಿ, ಮಧುರ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲಿ ಎಂದು ಧರಣಿ ಆರಂಭಿಸಿದ್ದಾರೆ.
ಮೆಡಿಕಲ್ ಕಾಲೇಜು ಆಡಳಿತ ಆರು ಏಜೆನ್ಸಿಗೆ ಹೊರಗುತ್ತಿಗೆ ಹೊಣೆ ಹೊರಿಸಿ, ಕಾರ್ಮಿಕರನ್ನು ವಿಭಜಿಸುವ ತಂತ್ರ ಮಾಡಿದೆ. ಕೆಲ ಏಜೆನ್ಸಿಯವರು ಪಿಎಫ್ ಕಟ್ಟುತ್ತಾರೆ, ಆದರೆ ಮಧುರಾ ಏಜೆನ್ಸಿ ವಂಚಿಸುತ್ತಲೇ ಬಂದಿದೆ. ಇದು ನಿಲ್ಲಬೇಕು. ಗುತ್ತಿಗೆ ಕಾರ್ಮಿಕರನ್ನು ನಿರ್ಲಕ್ಷಿಸಿದ, ಅವರ ಹಣ ತಿಂದವರು ನರಕಕ್ಕೆ ಹೋಗಲಿದ್ದಾರೆ ಎಂದು ಧರಣಿ ನಿರತ ಮಹಿಳಾ ಕಾರ್ಮಿಕರು ಶಾಪ ಹಾಕಿ, ಧಿಕ್ಕಾರ ಕೂಗಿದರು. ಶಾಸಕಿ ರೂಪಾಲಿ ನಾಯ್ಕ ಇಂಥ ಭ್ರಷ್ಟರನ್ನು ಕ್ಷೇತ್ರದಲ್ಲಿಟ್ಟುಕೊಂಡಿದ್ದಾರೆ ಎಂದು ಮಹಿಳಾ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ವಿಲ್ಸನ್, ಗುರುರಾಜ ನಾಯ್ಕ, ಕಾಂಚನಾ ಚಂದಾವಕರ್, ವೀಪ್ತಿ ನಾಯ್ಕ, ಸುಶಾಂತ ವಾರಿಕರ್ ನೇತೃತ್ವ ವಹಿಸಿದ್ದಾರೆ. 200 ಗುತ್ತಿಗೆ ಕಾರ್ಮಿಕರು ಧರಣಿಯಲ್ಲಿ ಭಾಗವಹಿಸಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು .