Advertisement

Karwar; ಸುಳ್ಳು ಹೇಳಿ ಟೋಲ್ ವಸೂಲಿ: ಸಭೆಯಲ್ಲಿ ಗುಡುಗಿದ ಸಚಿವ ವೈದ್ಯ

08:13 PM Jul 08, 2023 | Team Udayavani |

ಕಾರವಾರ: ಜಿಲ್ಲೆಯಲ್ಲಿ ಕಾರವಾರ ದಿಂದ ಭಟ್ಕಳ ತನಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಇಂಡಿಯನ್ ರೋಡ್ ಬಿಲ್ಡರ್ಸ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡಿದ ಅಪೂರ್ಣ ಕಾಮಗಾರಿ ರಸ್ತೆಗಳಿಂದ ಇವತ್ತು ಸಾಕಷ್ಟು ತೊಂದರೆಗಳಾಗಿವೆ. ಇನ್ನಾದರೂ ನೀವು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಐಆರ್ ಬಿ ಕಂಪನಿ , ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಎಚ್ಚರಿಸಿದರು.

Advertisement

ಕಾರವಾರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ರಸ್ತೆ ಕಾಮಗಾರಿ ಕೈಕೊಳ್ಳಲಾಗಿದೆ. ಈವರೆಗೆ ರಸ್ತೆ ಪೂರ್ಣಗೊಂಡಿರುವುದಿಲ್ಲ. ಇದು ಹೀಗೆ ಮುಂದುವರೆದರೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಸದ್ಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಸಾರ್ವಜನಿಕರಿಗೆ ಹೆರಲಾಗಿರುವ ಟೋಲ್ ಬಂದು ಮಾಡಿ, ಸರ್ಕಾರದ ಅನುದಾನದಲ್ಲಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಕಂಪನಿಯಿಂದ ವಿವರಣೆ

ಐ ಆರ್ ಬಿ ಅಧಿಕಾರಿಗಳಿಂದ ಜಿಲ್ಲೆಯಲ್ಲಿ ಈ ವರೆಗೂ ರಸ್ತೆ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.ಮಾಹಿತಿ ನೀಡಿ ಐ ಆರ್ ಬಿ ಅಧಿಕಾರಿ ಉತ್ತರ ಕನ್ನಡ ಜಿಲ್ಲೆಗೆ 146.30 ಕಿ.ಮೀ . ರಸ್ತೆ ನಿರ್ಮಾಣ ಮಾಡಲು ನಮಗೆ ಟೆಂಡರ್ ನೀಡಿದ್ದು, ಅದರಲ್ಲಿ ನಾವುಗಳು 138.41 ಕಿ.ಮೀ. ವರೆಗೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ಉಳಿದ 8.25 ಕಿ.ಮೀ. ರಸ್ತೆ ಕಾಮಗಾರಿ ವಿವಿಧ ಕಾರಣಗಳಿಂದ ಬಾಕಿ ಉಳಿದಿರುತ್ತದೆ. ಮಳೆಗಾಲ ಮುಗಿದ ಮೇಲೆ ರಸ್ತೆ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಟೋಲ್ ವಸೂಲಿ ಮಾಡಲು ತಮಗೆ ಯಾರು ಅನುಮತಿ ನೀಡಿದರು?

Advertisement

ಮಾಹಿತಿ ಪಡೆದ ನಂತರ ಸಚಿವ ವೈದ್ಯ ಮಾತನಾಡಿ, 2014 ರಲ್ಲಿ ರಸ್ತೆ ನಿರ್ಮಾಣ ಮಾಡಲು ಸರ್ಕಾರ 30 ತಿಂಗಳ ಸಮಯ ನೀಡಿತ್ತು. ಆದರೆ ನಿಗದಿತ ಅವಧಿಯೊಳಗೆ ರಸ್ತೆ ನಿರ್ಮಾಣ ಪೂರ್ಣಗೊಂಡಿರುವುದಿಲ್ಲ. ಮತ್ತೆ 2020 ಕ್ಕೆ ಮತ್ತೊಂದು ಒಪ್ಪಂದ ಮಾಡಿಕೊಂಡು ಪ್ರತಿಶತ 80 ರಷ್ಟು ಕಾಮಗಾರಿ ಮುಗಿದಿದೆ ಎಂದು ತಿಳಿಸಿ ಟೋಲ್ ವಸೂಲಿ ಮಾಡಲು ಪ್ರಾರಂಭ ಮಾಡಿದ್ದೀರಿ . ಆದರೆ ಈವರೆಗೂ ತಾವುಗಳು 75 ರಷ್ಟು ರಸ್ತೆ ಕಾಮಗಾರಿ ಸಹ ಪೂರ್ಣ ಗೊಳಿಸಿರುವುದು ಕಂಡು ಬಂದಿರುವುದಿಲ್ಲ. ಅದಾಗಿಯೂ ಟೋಲ್ ವಸೂಲಿ ಮಾಡುತ್ತಿದ್ದೀರಿ. ಟೋಲ್ ವಸೂಲಿ ಮಾಡಲು ತಮಗೆ ಯಾರು ಅನುಮತಿ ನೀಡಿದರು ? ಒಂದು ವೇಳೆ ಸರ್ಕಾರ ತಮಗೆ ಟೋಲ್ ವಸೂಲಿ ಮಾಡಲು ಅನುಮತಿ ನೀಡಿದ್ದರೆ , ಅದನ್ನು ಈ ಕೂಡಲೇ ತಮ್ಮ ಗಮನಕ್ಕೆ ತರಲು ಐ ಆರ್ ಬಿ ಅಧಿಕಾರಿಗಳಿಗೆ ಸೂಚಿಸಿದರು.

ಕೇವಲ ರಸ್ತೆ ಮಾತ್ರ ನಿರ್ಮಾಣ ಮಾಡುವುದಲ್ಲದೆ, ರಸ್ತೆ ಪಕ್ಕಾ ಮೊದಲು ಬಸ್ ನಿಲ್ದಾಣಗಳು ಇದ್ದವು . ಈಗ ಯಾವುದೇ ಬಸ್ ನಿಲ್ದಾಣಗಳು ನಿರ್ಮಾಣವಾಗಿಲ್ಲ . ಶೀಘ್ರದಲ್ಲಿ ಹಳೆ ಬಸ್ ನಿಲ್ದಾಣಗಳು ಇರುವ ಸ್ಥಳಗಳಲ್ಲಿ , ಹೊಸ ಬಸ್ ನಿಲ್ದಾಣಗಳು ತುರ್ತಾಗಿ ನಿರ್ಮಾಣವಾಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಸಮರ್ಪಕ ಕಾರ್ಯನಿರ್ವಹಣೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ, ಕೂಡಲೇ ಎಲ್ಲವನ್ನು ಸ್ಥಗಿತಗೊಳಿಸುವಂತೆ ನೇರವಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಪ್ರೊಬೆಷನರ್ ಐ ಎ ಎಸ್ ಅಧಿಕಾರಿ ಜುಬಿನ್ ಮಹೋಪಾತ್ರ ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next