Advertisement
ಹೊಲಗಳನ್ನು ಹರಗುವ ಮತ್ತು ಸ್ವತ್ಛಗೊಳಿಸುವ ಕ್ರಿಯೆಯಲ್ಲಿ ತೊಡಗಿರುವ ರೈತ, ಬೀಜ, ಗೊಬ್ಬರಗಳನ್ನು ಸಂಗ್ರಹಿಸುತ್ತಿದ್ದಾನೆ. ಮುಂಗಾರು ಆರಂಭವಾಗುವ ವೇಳೆಗೆ ಜಿಲ್ಲೆಯ ಬಯಲು ಸೀಮೆಯ ಭೂಮಿ ಹದವಾಗಿದ್ದರೆ, ಕರಾವಳಿಯಲ್ಲಿ ಗದ್ದೆಗಳನ್ನು ಸಹ ಭತ್ತದ ಕೃಷಿಗೆ ಬೇಕಾಗುವಂತೆ ಸಜ್ಜು ಮಾಡಲಾಗುತ್ತಿದೆ. ಭತ್ತದ ಸಸಿ ಬೆಳೆಸಲು ಮಡಿ ಮಾಡಿಕೊಳ್ಳುವತ್ತ ಕರಾವಳಿ ಕೃಷಿಕರು ನಿರತರಾಗಿದ್ದಾರೆ. ಕೃಷಿ ಇಲಾಖೆ ಸಹ ರೈತರಿಗೆ ಬೇಕಾಗುವ ಬೀಜ ಗೊಬ್ಬರ ಪೂರೈಸಲು ಸಜ್ಜಾಗಿದೆ.
Related Articles
Advertisement
ಎಲ್ಲೆಲ್ಲೆ ಯಾವ ಬೆಳೆ ಪ್ರಧಾನ
ಮೆಕ್ಕೆಜೋಳವನ್ನು ಜಿಲ್ಲೆಯ ಮುಂಡಗೋಡ, ಹಳಿಯಾಳ, ಯಲ್ಲಾಪುರ ಹಾಗೂ ಬನವಾಸಿ ಭಾಗದಲ್ಲಿ ಮೆಕ್ಕೆಜೋಳ ಬೆಳೆಯಲು ಕೃಷಿಕರು ಉತ್ಸುಕರಾಗಿದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜಕ್ಕೆ ಸಹ ಹೆಚ್ಚಿನ ಬೇಡಿಕೆ ಬಂದಿದೆ. ಈಗಾಗಲೇ 500 ಕ್ವಿಂಟಾಲ್ ಮೆಕ್ಕೆ ಜೋಳ ಬೀಜ ಪೂರೈಸಲಾಗಿದೆ. ಕಳೆದ ಸಲ ಬಿತ್ತನೆ ಬೀಜ ಕೃಷಿ ಭೂಮಿ 63 ಸಾವಿರ ಹೆಕ್ಟೇರ್ ನಲ್ಲಿ ವ್ಯಾಪಿಸಿತ್ತು. ಈ ಸಲ ಇನ್ನು 22 ಸಾವಿರ ಹೆಕ್ಟೇರ್ ಭೂಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕೃಷಿಗೆ ಹದ ಮಾಡಲಾಗಿದೆ. ಹಳಿಯಾಳ ಭಾಗದಲ್ಲಿ ಹೆಚ್ಚು ಹತ್ತಿ ಬೆಳೆಯಲಾಗುತ್ತಿತ್ತು. ಆದರೆ ದರ ಕುಸಿತ ಮತ್ತು ಹಳಿಯಾಳದಲ್ಲಿ ಬೀಳುತ್ತಿರುವ ಹೆಚ್ಚು ಮಳೆಯ ಕಾರಣ ಹತ್ತಿ ಬೆಳೆಯ ಭೂಮಿ 1500 ರಿಂದ 1200 ಹೆಕ್ಟೇರ್‌ಗೆ ಕುಸಿದಿದೆ. ಕಬ್ಬು ಬೆಳೆಯತ್ತ ಇಲ್ಲಿ ರೈತರು ವಾಲುತ್ತಿದ್ದಾರೆ.
ಕರಾವಳಿಯಲ್ಲಿ ಭತ್ತವೇ ಪ್ರಧಾನ: ಕಾರವಾರದಿಂದ ಭಟ್ಕಳದವರೆಗಿನ ತಾಲೂಕುಗಳಲ್ಲಿ ಕೃಷಿಕರು ಭತ್ತ ಬೆಳೆಗೆ ಆದ್ಯತೆ ನೀಡುತ್ತಿದ್ದಾರೆ. ಸಾಂಪ್ರದಾಯಿಕ ಭತ್ತ ಬೀಜಗಳನ್ನು ಬಳಸುವುದರ ಜೊತೆಗೆ ಇಂಟಾಲ್, ಜಯಾ ತಳಿಗಳನ್ನು ಈಚಿನ ವರ್ಷಗಳಲ್ಲಿ ಬೆಳೆಯುತ್ತಿದ್ದಾರೆ. ಬೀಜ ಸಂಗ್ರಹ ಮತ್ತು ಬೀಜೋತ್ಪಾದನಾ ಪದ್ಧತಿಗಳನ್ನು ಕೃಷಿಕರು ಅಳವಡಿಸಿಕೊಳ್ಳುತ್ತಿದ್ದಾರೆ. ಜಯಾ ಮತ್ತು ಇಂಟಾಲ್ ತಳಿಗಳ ಬೀಜ ಕೊಡಿ ಎಂದು ಕೃಷಿ ಇಲಾಖೆಗೆ ಬೇಡಿಕೆಗಳನ್ನು ರೈತರು ನೀಡಿದ್ದಾರೆ. ಇಲಾಖೆ ಸಹ ರೈತರ ಬೇಡಿಕೆಗಳನ್ನು ಪೂರೈಸಲು ಸಜ್ಜಾಗಿದೆ ಎಂದು ಕೃಷಿ ಇಲಾಖೆ ಹೇಳಿದೆ.
ಉತ್ತಮ ಮಳೆಯ ಸುಳಿವು
ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಏಪ್ರಿಲ್‌ನಲ್ಲಿ ಒಂದು ಹದ ಮಳೆ ಬಂತು. ಮೇ ನಲ್ಲಿ ಸಹ ಕೃಷಿ ಚಟುವಟಿಕೆಗೆ ಪೂರಕವಾಗುವಂತೆ ಮಳೆ ಸುರಿದಿದೆ ಎಂದು ಕೃಷಿ ಇಲಾಖೆ ಅಧಿ ಕಾರಿ ವಿವರಿಸಿದರು. ಜನೇವರಿಯಿಂದ ಮೇ ತಿಂಗಳವರೆಗೆ ಸರಾಸರಿ 72 ಮಿ.ಮೀ ಮಳೆಯಾಗುತ್ತಿತ್ತು. ಈ ವರ್ಷ 129 ಮಿ.ಮೀ. ಮಳೆ ಸುರಿದಿದೆ. ಇದರಿಂದ ಜನ ಜಾನುವಾರಿಗೆ ಹೆಚ್ಚಿನ ಅನುಕೂಲವಾಗಿದೆ. ಮೇ ತಿಂಗಳಲ್ಲೇ 46 ಮಿ.ಮೀ. ವಾಡಿಕೆ ಮಳೆ. ಮೇ 1 ರಿಂದ ಮೇ 24 ಬೆಳಗಿನ 8 ಗಂಟೆಯ ತನಕ ಈ ಸಲ98 ಮಿಮೀ ಮಳೆ ಸುರಿದಿದೆ. ಹಳಿಯಾಳ ತಾಲೂಕಿನಲ್ಲೇ ಈ ಸಲ 176 ಮಿಮೀ ಮಳೆ ಮೇ ತಿಂಗಳಲ್ಲಿ ಬಿದ್ದಿದೆ. ಇದು ರೈತರಿಗೆ
ಅನುಕೂಲವಾಗಿದೆ. ಜಿಲ್ಲೆಯಲ್ಲಿ ಭತ್ತದ ಬೀಜ ಬೇಡಿಕೆಗೆ ಅನುಸಾರವಾಗಿ ಬರಲಿದೆ. ರಸಗೊಬ್ಬರ ಕೊರತೆಯಾಗುವುದಿಲ್ಲ. ಈಗಾಗಲೇ ರಸ ಗೊಬ್ಬರ ಲಭ್ಯತೆ ಇದೆ. ರೈತರು ಆಧಾರ್ ಸಂಖ್ಯೆಯನ್ನು ಕೃಷಿ ಕಚೇರಿಯಲ್ಲಿ ನಮೂದಿಸಿ ರಸ ಗೊಬ್ಬರ ಪಡೆಯಬಹುದಾಗಿದೆ.
ಡಾ| ಎಸ್.ಜಿ. ರಾಧಾಕೃಷ್ಣ,ಸಹಾಯಕ ನಿರ್ದೇಶಕ.ಕೃಷಿ ಇಲಾಖೆ. ಕಾರವಾರ. ನಾಗರಾಜ ಹರಪನಹಳ್ಳಿ