ಬಳ್ಳಾರಿ: ಅವಿಭಜಿತ ಬಳ್ಳಾರಿ ಜಿಲ್ಲೆಯ ಪಾಳೆಗಾರರ ನಾಡು ಹರಪನಹಳ್ಳಿ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳಲ್ಲೂ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಬಿಜೆಪಿ ಸಂಸದ ವೈ.ದೇವೇಂದ್ರಪ್ಪ ಪುತ್ರ ವೈ.ಡಿ.ಅಣ್ಣಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗುತ್ತಿರುವುದು ಕ್ಷೇತ್ರದ ರಾಜಕೀಯ ಮತ್ತಷ್ಟು ಕುತೂಹಲ ಮೂಡಿಸಿದೆ.
ಕ್ಷೇತ್ರ ಮರು ವಿಂಗಡಣೆಯಾದ ಬಳಿಕ 2008ರಿಂದ ಸಾಮಾನ್ಯಕ್ಕೆ ಮೀಸಲಾಗಿರುವ ಹರಪನಹಳ್ಳಿ ಕ್ಷೇತ್ರವನ್ನು ಬಳ್ಳಾರಿ ರೆಡ್ಡಿ ಸಹೋದರರ ಹಿರಿಯಣ್ಣ ಬಿಜೆಪಿ ಹಾಲಿ ಶಾಸಕ ಜಿ. ಕರುಣಾಕರ ರೆಡ್ಡಿ ಪ್ರತಿನಿಧಿ ಸುತ್ತಿದ್ದಾರೆ. 2008, 2018ರಲ್ಲಿ ಎರಡು ಬಾರಿ ಜಯ ಗಳಿಸಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಕರುಣಾಕರ ರೆಡ್ಡಿ, ಕ್ಯಾಬಿನೆಟ್ ದರ್ಜೆಯ ಕಂದಾಯ ಸಚಿವರಾಗಿದ್ದರು. ಕಾರಣ ಅಂದು ರೆಡ್ಡಿ ಸಹೋದರರ ಪ್ರಭಾವ, ಸರಕಾರದ ಮೇಲೆ ಹಿಡಿತ ಸಾ ಧಿ ಸಿದ್ದರು. ಬದಲಾದ ರಾಜಕೀಯದಲ್ಲಿ ರೆಡ್ಡಿಗಳ ಪ್ರಭಾವ ಕುಸಿದಿದ್ದು, 2013ರಲ್ಲಿ ಸೋತು, 2018ರಲ್ಲಿ ಪುನಃ ಗೆದ್ದರೂ ಸರಕಾರದಲ್ಲಿ ಯಾವುದೇ ಸಚಿವ ಸ್ಥಾನ ಸಿಗಲಿಲ್ಲ.
ಈ ನಡುವೆ ಸಚಿವ ಶ್ರೀರಾಮುಲು ಬಿಎಸ್‌ಆರ್ ಪಕ್ಷ ಸ್ಥಾಪಿಸಿದಾಗಲೂ ಹೋಗದೆ ಬಿಜೆಪಿಯಲ್ಲೇ ಉಳಿದು ಪಕ್ಷ ನಿಷ್ಠೆ ಮೆರೆದಿದ್ದ ಶಾಸಕ ಜಿ.ಕರುಣಾಕರ ರೆಡ್ಡಿ, ಪ್ರಸಕ್ತ 2023ರ ಚುನಾವಣೆಯಲ್ಲೂ ಪಕ್ಷ ತಮಗೆ ಟಿಕೆಟ್ ನೀಡಲಿದೆ ಎಂದು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ ಇವರು ಹೊರಗಿನವರು, ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಕೂಗು ಸ್ವಪಕ್ಷದಲ್ಲೇ ಕೇಳಿಬರುತ್ತಿದ್ದು, ಕರುಣಾಕರ ರೆಡ್ಡಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಹಾಗಾಗಿ ಯು.ನಂದನಗೌಡ, ಅರುಂಡಿ ನಾಗರಾಜ, ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಅವರು ಸ್ಥಳೀಯ ಎಂಬ ಕೋಟಾದಡಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ತೆರೆಮರೆ ಯತ್ನದಲ್ಲಿ ತೊಡಗಿದ್ದಾರೆ. ಈ ನಡುವೆ ಸಂಸದ ವೈ.ದೇವೇಂದ್ರಪ್ಪ ಪುತ್ರ ವೈ.ಡಿ.ಅಣ್ಣಪ್ಪ ಪಕ್ಷೇತರರಾಗಿ ಕಣಕ್ಕಿಳಿಯಲು ಸಜ್ಜಾಗಿರುವುದು ಸ್ವಪಕ್ಷದ ಹಾಲಿ ಶಾಸಕ ಕರುಣಾಕರ ರೆಡ್ಡಿಗೆ ಇರುಸು ಮುರುಸು ಉಂಟು ಮಾಡುತ್ತಿದೆ. ಕ್ಷೇತ್ರದಲ್ಲಿ ಲಿಂಗಾಯತ, ವಾಲ್ಮೀಕಿ ಸಮುದಾಯಗಳ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿರ್ಣಾಯಕವಾಗಿರುವುದು ಆಕಾಂಕ್ಷಿಗಳ ಸಂಖ್ಯೆ ಪೈಪೋಟಿ ಹೆಚ್ಚಲು ಕಾರಣವಾಗಿದೆ.
ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಹಿಂಡು: ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಪುತ್ರಿಯರಾದ ಎಂ.ಪಿ.ಲತಾ, ಎಂ.ಪಿ.ವೀಣಾ, ಕಳೆದ ಮೂರು ಚುನಾವಣೆಗಳಲ್ಲೂ ಮೂರು ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಅರಸೀಕೆರೆ ಎನ್. ಕೊಟ್ರೇಶ್, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಆಪ್ತ ಶಶಿಧರ ಪೂಜಾರ್, ಎಸ್.ವಿ. ಪರಶುರಾಮಪ್ಪ ಪ್ರಬಲ ಆಕಾಂಕ್ಷಿಗಳಾಗಿದ್ದು, ಒಟ್ಟು 17 ಜನರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆ ಬಳಿಕ ಕಳೆದ ಮೂರು ಚುನಾವಣೆಗಳಲ್ಲಿ ತಮ್ಮ ತಂದೆ, ಸಹೋದರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2008ರಲ್ಲಿ ತಮ್ಮ ತಂದೆ ಎಂ.ಪಿ.ಪ್ರಕಾಶ್ ಪರಾಭವಗೊಂಡಿದ್ದ ಕ್ಷೇತ್ರದಲ್ಲಿ 2013ರಲ್ಲಿ ಸಹೋದರ ಎಂ.ಪಿ.ರವೀಂದ್ರ ಗೆದ್ದು ಶಾಸಕರಾಗಿದ್ದು, 2018ರಲ್ಲಿ ಪುನಃ ಸ್ಪ ರ್ಧಿಸಿ ಪರಾಭವ ಗೊಂಡಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಟಿಕೆಟ್ ತಮಗೆ ನೀಡುವಂತೆ ಎಂ.ಪಿ.ಪ್ರಕಾಶ್ ಪುತ್ರಿಯರಾದ ಎಂ.ಪಿ.ಲತಾ, ಎಂ.ಪಿ.ವೀಣಾ ಟಿಕೆಟ್‌ಗಾಗಿ ಪೈಪೋಟಿಗಿಳಿದಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪ ರ್ಧಿಸಿ ಪರಾಭವಗೊಂಡಿದ್ದ ಅರಸೀಕೆರೆ ಎನ್.ಕೊಟ್ರೇಶ್ ಈ ಬಾರಿ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದು, ಇವರು ಸಹ ಪೈಪೋಟಿ ನಡೆಸುತ್ತಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಯಾರು?: ಕ್ಷೇತ್ರದ ಜೆಡಿಎಸ್ ಪಕ್ಷದಲ್ಲಿ ಯಾವುದೇ ಪೈಪೋಟಿ ಇರಲಿಲ್ಲ. ಇದ್ದ ಒಬ್ಬ ಏಕೈಕ ಆಕಾಂಕ್ಷಿ ಬೇಲ್ದಾರ್ ಬಾಷಾ ಅವರೇ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಕೂಡ್ಲಿಗಿ ಮಾಜಿ ಶಾಸಕ ಎನ್.ಎಂ.ನಬಿ ಅವರ ಪುತ್ರ ನೂರ್ ಅಹ್ಮದ್ ಆಕಾಂಕ್ಷಿಯಾಗಿದ್ದಾರೆ. ಬಹುತೇಕ ಇವರೇ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಟಿಕೆಟ್ ಸಿಗದಿದ್ದರೆ ದೇವೇಂದ್ರಪ್ಪ ಪುತ್ರ ಅಣ್ಣಪ್ಪ ರೆಬೆಲ್?
ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಟಿಕೆಟ್‌ಗೆ ಪೈಪೋಟಿ ಏರ್ಪಟ್ಟಿರುವ ಬೆನ್ನಲ್ಲೇ ಅವಳಿ ಜಿಲ್ಲೆಯ ಸಂಸದ ವೈ.ದೇವೇಂದ್ರಪ್ಪ ಪುತ್ರ ವೈ.ಡಿ.ಅಣ್ಣಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಮೂರು ಪಕ್ಷಗಳ ಆಕಾಂಕ್ಷಿಗಳಿಗೆ ಕಗ್ಗಂಟಾಗಲಿದೆ. ಅಣ್ಣಪ್ಪ ಮೂಲತಃ ಸ್ಥಳೀಯರಾಗಿದ್ದಾರೆ. ಮೂರು ಪಕ್ಷಗಳಲ್ಲೂ ಬಹುತೇಕ ಆಕಾಂಕ್ಷಿಗಳು ಹೊರಗಿನವರಾಗಿದ್ದಾರೆ. ಹಾಗಾಗಿ ಯಾವ್ಯಾವ ಪಕ್ಷಗಳಿಂದ ಯಾರು ಕಣಕ್ಕಿಳಿಯಲಿದ್ದಾರೆ, ಪಕ್ಷೇತರ ಅಭ್ಯರ್ಥಿ ಯಾರಿಗೆ ಮುಳುವಾಗಲಿದ್ದಾರೆ ಎಂಬುದನ್ನು ಕೆಲವು ದಿನಗಳವರೆಗೆ ಕಾದು ನೋಡಬೇಕಾಗಿದೆ.
– ವೆಂಕೋಬಿ ಸಂಗನಕಲ್ಲು