ಬೆಂಗಳೂರು: ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿದ ಕೇವಲ ಎರಡನೇ ಭಾರತೀಯ ಆಟಗಾರ ಎಂಬ ಖ್ಯಾತಿಯ ಕರುಣ್ ನಾಯರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕ್ರಿಕೆಟ್ ಮೂಲಕ ಅಲ್ಲ, ಬದಲಾಗಿ ಟ್ವೀಟ್ ಮೂಲಕ.
2016ರ ಡಿಸೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅಜೇಯ ತ್ರಿಶತಕ ಬಾರಿಸಿದ್ದರು. ಈ ಮೂಲಕ ವೀರೆಂದ್ರ ಸೆಹವಾಗ್ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
ಇದನ್ನೂ ಓದಿ:ಯುವತಿಯರೊಂದಿಗೆ ತಡರಾತ್ರಿ ಅನ್ಯಕೋಮಿನ ಯುವಕರ ಸುತ್ತಾಟ: ತಡೆದು ಪ್ರಶ್ನಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು
ಆದರೆ ಇದಾದ ಬಳಿಕ ಕರುಣ್ ನಾಯರ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್, ದೇಶೀಯ ಕ್ರಿಕೆಟ್ ನಲ್ಲೂ ಕರುಣ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.
ರಾಷ್ಟ್ರೀಯ ತಂಡದಿಂದ ಹೊರಬಿದ್ದರೂ ಕರುಣ್ ನಾಯರ್ ದೇಶೀಯ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡದ ಅವಿಭಾಜ್ಯ ಭಾಗವಾಗಿದ್ದರು. ಆದರೆ ಇತ್ತೀಚೆಗೆ ಅಲ್ಲೂ ಅವಕಾಶ ಕಡಿಮೆಯಾಗುತ್ತಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯದ ನಂತರ, ಅವರು ಶನಿವಾರದಂದು ರಣಜಿ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ಹೆಸರಿಸಲ್ಪಟ್ಟ ತಂಡದಿಂದಲೂ ಅವರು ಕಡೆಗಣಿಸಲ್ಪಟ್ಟಿದ್ದಾರೆ.
ಇದಾದ ಬಳಿಕ ಕರುಣ್ ನಾಯರ್ ಟ್ವೀಟ್ ಮಾಡಿದ್ದು, “ಪ್ರೀತಿಯ ಕ್ರಿಕೆಟ್, ನನಗೆ ಇನ್ನೂ ಒಂದು ಅವಕಾಶ ನೀಡಿ.” ಎಂದು ಬರೆದುಕೊಂಡಿದ್ದಾರೆ.