Advertisement

“ಎ’ತಂಡಗಳ ಅನಧಿಕೃತ ಟೆಸ್ಟ್‌ ಭಾರತ ಜಯಭೇರಿ

09:10 AM Aug 24, 2017 | |

ಪೊಚೆಫ್ಸ್ಟ್ರೋಮ್‌: ನಾಯಕ ಕರುಣ್‌ ನಾಯರ್‌ ಅವರ ಅಮೋಘ ಆಟದಿಂದಾಗಿ ಭಾರತ “ಎ’ ತಂಡವು ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ “ಎ’ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. 

Advertisement

ಗೆಲ್ಲಲು 224 ರನ್‌ ಗಳಿಸುವ ಸವಾಲು ಪಡೆದ ಭಾರತ “ಎ’ ತಂಡವು ನಾಯರ್‌ ಸಹಿತ ಆರಂಭಿಕ ರವಿಕುಮಾರ್‌ ಸಮರ್ಥ್ ಮತ್ತು ಅಂಕಿತ್‌ ಭಾವೆ° ಅವರ ತಾಳ್ಮೆಯ ಆಟದಿಂದಾಗಿ 62.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗೆಲುವು ದಾಖಲಿಸಿತು. ಇದರಿಂದಾಗಿ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿ 1-1 ಅಂತರದಿಂದ ಸಮಬಲದಲ್ಲಿ ಅಂತ್ಯಗೊಂಡಿತು. 

ನಾಯರ್‌ ಅವರ ಬಿರುಸಿನ ಆಟದಿಂದಾಗಿ ಭಾರತ “ಎ’ ಜಯ ಕಾಣುವಂತಾಯಿತು. ಸಮರ್ಥ್ ಜತೆ ಮೂರನೇ ವಿಕೆಟಿಗೆ ಅಮೂಲ್ಯ 74 ರನ್‌ ಪೇರಿಸಿದ ನಾಯರ್‌ ಆ ಬಳಿಕ ಅಂಕಿತ್‌ ಜತೆ ನಾಲ್ಕನೇ ವಿಕೆಟಿಗೆ 93 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವು ಖಚಿತಪಡಿಸಿದರು. ಗೆಲ್ಲಲು ಕೇವಲ 2 ರನ್‌ ಗಳಿರುವಾಗ 90 ರನ್‌ ಗಳಿಸಿದ್ದ ನಾಯರ್‌ ಔಟಾದರು. 144 ಎಸೆತ ಎದುರಿಸಿದ್ದ ಅವರು 13 ಬೌಂಡರಿ ಬಾರಿಸಿದ್ದರು. ಸಮರ್ಥ್ 55 ಮತ್ತು ಭಾವೆ° 32 ರನ್‌ ಹೊಡೆದರು. 

ಈ ಮೊದಲು ಭಾರತ “ಎ’ ತಂಡದ ಬೌಲರ್‌ಗಳ ಬಿಗು ದಾಳಿಯಿಂದಾಗಿ ದಕ್ಷಿಣ ಆಫ್ರಿಕಾ “ಎ’ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 177 ರನ್ನಿಗೆ ಆಲೌಟಾಯಿತು. 4 ವಿಕೆಟಿಗೆ 138 ರನ್ನಿನಿಂದ ದಿನದಾಟ ಆರಂಭಿಸಿದ್ದ ದಕ್ಷಿಣ ಆಫ್ರಿಕಾ “ಎ’ ತಂಡ ಮುಂದಿನ 39 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಒದ್ದಾಡಿತು. ಇದರಿಂದ ಭಾರತಕ್ಕೆ ಸುಲಭ ಗುರಿ ಸಿಕ್ಕಿತು. 

ಎಡಗೈ ವೇಗಿ ಅಂಕಿತ್‌ ರಜಪೂತ್‌ 15 ರನ್ನಿಗೆ 3 ಮತ್ತು ಎಡಗೈ ಸ್ಪಿನ್ನರ್‌ ಶಾಬಾಜ್‌ ನದೀಮ್‌ 47 ರನ್ನಿಗೆ 3 ವಿಕೆಟ್‌ ಪಡೆದರು. ಎರಡು ಪಂದ್ಯಗಳ ಈ ಸರಣಿಯಲ್ಲಿ ಒಟ್ಟಾರೆ 11 ವಿಕೆಟ್‌ ಕಿತ್ತ ನದೀಮ್‌ ಭಾರತದ ಯಶಸ್ವಿ ಬೌಲರ್‌ ಎನಿಸಿಕೊಂಡರು. 

Advertisement

ಆಶ್ಚರ್ಯವೆಂಬಂತೆ 2013ರ ಪ್ರವಾಸದ ವೇಳೆಯೂ ಭಾರತ “ಎ’ ತಂಡ “ಎ’ ತಂಡಗಳ ತ್ರಿಕೋನ ಸರಣಿ ಜಯಿಸಿದ್ದರೆ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ “ಎ’ 322 ಮತ್ತು 177 (ಸ್ಟೀಫ‌ನ್‌ ಕುಕ್‌ 70, ನದೀಮ್‌ 47ಕ್ಕೆ 3, ರಜಪೂತ್‌ 15ಕ್ಕೆ 3; ಭಾರತ “ಎ’ 276 ಮತ್ತು 4 ವಿಕೆಟಿಗೆ 226 (ಕರುಣ್‌ ನಾಯರ್‌ 90, ಸಮರ್ಥ್ 45, ಅಂಕಿತ್‌ ಭಾವೆ° 32 ಔಟಾಗದೆ).

Advertisement

Udayavani is now on Telegram. Click here to join our channel and stay updated with the latest news.

Next