Advertisement

ಕಾಂಗ್ರೆಸ್‌ ತಪ್ಪಿನಿಂದಾಗಿ ಪಾಕ್‌ ಸೇರ್ಪಡೆಯಾದ ಕರ್ತಾರ್ಪುರ

10:58 AM Dec 05, 2018 | Harsha Rao |

ಹೊಸದಿಲ್ಲಿ/ಹನುಮಾನ್‌ಗಡ: ಸಿಕ್ಖ್ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ ಇದ್ದ ಕಾರಣದಿಂದಲೇ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್‌ ಮಾಡಿದ ತಪ್ಪಿನಿಂದ ಕ‌ರ್ತಾರ್ಪುರ ಪಾಕಿಸ್ಥಾನಕ್ಕೆ ಸೇರುವಂತಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Advertisement

ರಾಜಸ್ಥಾನದ ಹನುಮಾನ್‌ಗಡದಲ್ಲಿ ಮಂಗಳವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ-ಪಾಕಿಸ್ಥಾನ ಗಡಿ ಭಾಗದ ಕರ್ತಾರ್ಪುರ್‌ ಸಾಹಿಬ್‌ ಕಾರಿಡಾರ್‌ ಅನ್ನು ಮುಕ್ತಗೊಳಿಸುವುದರ ಮೂಲಕ ದೇಶ ವಿಭಜನೆ ವೇಳೆ ಕಾಂಗ್ರೆಸ್‌ ನಾಯಕರು ಮಾಡಿದ ತಪ್ಪನ್ನು ಸರಿಪಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 70 ವರ್ಷಗಳಲ್ಲಿ ಕಾಂಗ್ರೆಸ್‌ ಈ ಕಾರಿಡಾರ್‌ ಅನ್ನು ಸಿಕ್ಖ್ ಸಮುದಾಯಕ್ಕೆ ಅನು ಕೂಲವಾಗುವಂತೆ ತೆರೆಯಲು ಏಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಬೇಕು ಎಂದೂ ಹೇಳಿದ್ದಾರೆ. 

ಕಾಂಗ್ರೆಸ್‌ ನಾಯಕರಿಗೆ ಗುರು ನಾನಕ್‌ ದೇವ್‌ ಮತ್ತು ಸಿಕ್ಖ್ ಸಮುದಾಯದ ಭಾವನೆಗಳ ಬಗ್ಗೆ ಯಾವುದೇ ಗೌರವ ಇರಲಿಲ್ಲ. ಅಧಿಕಾರದ ಲಾಲಸೆ ಹೊಂದಿದ್ದ ಕಾಂಗ್ರೆಸ್‌ ನಾಯ ಕರ ತಪ್ಪುಗಳಿಗಾಗಿ ದೇಶ ಬೆಲೆ ತೆರುತ್ತಿದೆ. “ಹಿಂದಿನ ಆಡಳಿತದ ನೀತಿ ನಿರೂಪಕರು ಅಧಿಕಾರಕ್ಕೆ ಏರುವ ಆತುರದಲ್ಲಿದ್ದರು. ದೇಶ ವಿಭಜನೆ ವೇಳೆ ಹಲವು ತಪ್ಪುಗಳು ನಡೆದು ಹೋಗಿವೆ. ಅದರಲ್ಲಿ ಕರ್ತಾರ್ಪುರ ಪಾಕಿಸ್ಥಾನಕ್ಕೆ ಸೇರಿದ್ದು ಕೂಡ ಒಂದು’ ಎಂದರು. 

ಕಾಂಗ್ರೆಸ್‌ ನಾಯಕರು ಚುನಾವಣೆ ವೇಳೆ ಮಾತ್ರ ರೈತರ ವಿಚಾರ ಪ್ರಸ್ತಾವಿಸುತ್ತಾರೆ. 2008ರಲ್ಲಿ ದೇಶದ ರೈತರ ಒಟ್ಟು ಸಾಲ 6 ಲಕ್ಷ ಕೋಟಿ ರೂ. ಇತ್ತು. ಆದರೆ 58 ಸಾವಿರ ಕೋಟಿ ರೂ. ಮಾತ್ರ ಮನ್ನಾ ಮಾಡಲಾಯಿತು. ಕಾಂಗ್ರೆಸ್‌ ಆಡಳಿತದ ವೇಳೆಯ ಸಾಲ ಮನ್ನಾ ಯೋಜನೆಯ ಬಗ್ಗೆ ಸಿಎಜಿ ಸಂಶಯ ವ್ಯಕ್ತಪಡಿಸಿತ್ತು ಎಂದರು.

ಏಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು?: ರಾಜಸ್ಥಾನದ ಅಲ್ವಾರ್‌ನ ಮಳಕೇರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಯವರು ಉದ್ಯೋಗ ಸೃಷ್ಟಿಸಿದ್ದರೆ ಇಲ್ಲಿನ ನಾಲ್ವರು ಯುವ ಕರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಪ್ರಶ್ನೆ ಮಾಡಿ ದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ವಾಗ್ಧಾನ ಏನಾಯಿತು ಎಂದೂ ಕೇಳಿದ್ದಾರೆ. ಪ್ರಧಾನಿ ತಮ್ಮ ಪ್ರತಿ ಭಾಷಣದ ಮುಕ್ತಾಯದಲ್ಲಿ ಭಾರತ್‌ ಮಾತಾ ಕಿ ಜೈ ಎಂದು ಹೇಳಲು ಸೂಚಿಸುತ್ತಾರೆ. ಆದರೆ ಅವರು ಕೈಗಾರಿ ಕೋದ್ಯಮಿ ಅನಿಲ್‌ ಅಂಬಾನಿಗಾಗಿ ಕೆಲಸ ಮಾಡುತ್ತಾರೆೆ. ಅವರು ತಮ್ಮ ಭಾಷಣ ಆರಂಭದ ಮುನ್ನ ಅನಿಲ್‌ ಅಂಬಾನಿಯವರಿಗೆ ಜೈ, ಮೆಹುಲ್‌ ಚೋಸ್ಕಿಗೆ ಜೈ, ನೀರವ್‌ ಮೋದಿಗೆ ಜೈ, ಲಲಿತ್‌ ಮೋದಿಗೆ ಜೈ ಎಂದು ಹೇಳಬೇಕಾಗಿದೆ ಎಂದು ಟಾಂಗ್‌ ನೀಡಿದ್ದಾರೆ. ಭಾರತ ಮಾತೆ ಎಂದರೆ ದೇಶದ ಎಲ್ಲರಿಗೂ ತಾಯಿ ಎಂದು ಹೇಳಿದ ರಾಹುಲ್‌ ಗಾಂಧಿ, ಕೋಟ್ಯಂತರ ಯುವಕರು, ಮಹಿಳೆಯರು ಮತ್ತು ಕೆಲಸಗಾರರಿಗೂ ತಾಯಿಯೇ ಎಂದಿದ್ದಾರೆ. ಭಾರತ ಮಾತೆ ಎಂದಾಗ ರೈತರನ್ನು ಮರೆಯಲು ಹೇಗೆ ಸಾಧ್ಯ? 3.5 ಲಕ್ಷ ಕೋಟಿ ರೂ. ಅನುತ್ಪಾದಕ ಸಾಲವನ್ನು ರೈಟ್‌ಆಫ್ ಮಾಡಲಾಗಿದೆ. ಒಬ್ಬನೇ ಒಬ್ಬ ರೈತನ ಸಾಲವನ್ನು ಮೋದಿ ಸರಕಾರ ಮನ್ನಾ ಮಾಡಿಲ್ಲ ಎಂದು ಟೀಕಿಸಿದ್ದಾರೆ.

Advertisement

ಹನುಮಂತನ ಜಾತಿ ವಿವಾದ: ಈ ನಡುವೆ ಉತ್ತರ ಪ್ರದೇ ಶದ ಬಹರಿಯಾದ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫ‌ುಲೆ ಅವರೂ ಹನುಮಂತನ ಜಾತಿ ಬಗ್ಗೆ ಮಾತನಾಡಿದ್ದಾರೆ. ಹನುಮಂತ ದಲಿತ ಸಮುದಾಯಕ್ಕೆ ಸೇರಿದವನು. ಆದರೆ ಆತ ಮನುವಾದಿಗಳ ಗುಲಾಮನಾಗಿದ್ದ. ದಲಿತರು ಮತ್ತು ಹಿಂದುಳಿದ ವರ್ಗಗಳ ಜನರನ್ನು “ಮಂಗ’, “ರಾಕ್ಷಸ’ ಎಂಬಂತೆ ಬಿಂಬಿಸಲಾಗುತ್ತಿತ್ತು ಎಂದೂ ಅವರು ದೂರಿದ್ದಾರೆ. 

ರೇವಾ ಡಿ.ಸಿ.ಗೆ ತರಾಟೆ: ಮಧ್ಯಪ್ರದೇಶದ ರೇವಾ ಜಿಲ್ಲಾಧಿಕಾರಿ ಪ್ರೀತಿ ಮೈಥಿಲಿ ಇವಿಎಂಗಳ ಭದ್ರತೆಗಾಗಿ ಗುಂಡು ಹಾರಿಸಲು ಆದೇಶ ನೀಡಿದ್ದರು ಎಂಬ ವಿಡಿಯೋದಲ್ಲಿನ ದೃಶ್ಯಾವಳಿಗಳು ಬಹಿರಂಗವಾದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಅವರನ್ನು ತರಾಟೆಗೆ ತೆಗೆದುಕೊಂಡಿದೆ. 

ಮುಸ್ಲಿಮರು, ಹೊರಗಿನವರ ನಿರ್ಣಯವೇ ಪ್ರಮುಖ: ಸದ್ಯ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 24 ಕ್ಷೇತ್ರ ಗಳು ಇವೆ. ಕರಾವಳಿ ಪ್ರದೇಶ ಮತ್ತು ರಾಯಲ ಸೀಮಾ ಪ್ರದೇಶದಿಂದ ಬಂದು ನಗರದಲ್ಲಿ ನೆಲೆಸಿದವರು ಮತ್ತು ಮುಸ್ಲಿಂ ಸಮುದಾಯದವರು ಇಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ. 2014ರ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಾರ್ಟಿ 9, ಸಂಸದ ಅಸಾದುದ್ದೀನ್‌ ಒವೈಸಿ ಅವರ ಆಲ್‌ ಇಂಡಿಯಾ ಮಜಿÉಸ್‌-ಇ-ಇತ್ತೆಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) 7, ಬಿಜೆಪಿ 5, ತೆಲಂಗಾಣ ರಾಷ್ಟ್ರ ಸಮಿತಿ ಮೂರು ಸ್ಥಾನಗಳನ್ನು ಗೆದ್ದಿತ್ತು. 2014ರಲ್ಲಿ ಬಿಜೆಪಿ ಮತ್ತು ಟಿಡಿಪಿ ನಡುವೆ ಮೈತ್ರಿ ಏರ್ಪಟ್ಟಿತ್ತು. ಸದ್ಯ ಅದು ಮುರಿದಿದೆ. ಗ್ರೇಟರ್‌ ಹೈದರಾಬಾದ್‌ ಮುನಿಸಿಪಲ್‌ ಕಾರ್ಪೊರೇಷನ್‌ ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯದ ಪ್ರಮಾಣ ಶೇ.30. ಮತ್ತು ತೆಲಂಗಾಣದ ಒಟ್ಟು ಜನಸಂಖ್ಯೆಯ ಪೈಕಿ ಶೇ.12.7 ಆಗಿದೆ.

ಹತ್ತು ಬಾರಿ “ಭಾರತ್‌ ಮಾತಾ ಕೀ ಜೈ’ ಎನ್ನುವೆ
ಭಾಷಣದಲ್ಲಿ ಭಾರತ್‌ ಮಾತಾ ಕಿ ಜೈ ಎನ್ನುವ ಪ್ರಧಾನಿ ಮೋದಿ ಅವರು ಕೆಲಸ ಮಾಡುವುದು ಉದ್ಯಮಿ ಅನಿಲ್‌ ಅಂಬಾನಿಗಾಗಿ ಎಂಬ ರಾಹುಲ್‌ ಟೀಕೆಯಿಂದ ಮೋದಿ ಕೆರಳಿದ್ದಾರೆ. ಸಿಕರ್‌ ಜಿಲ್ಲೆಯ ರ್ಯಾಲಿಯಲ್ಲಿ ಇದಕ್ಕೆ ತಿರುಗೇಟು ನೀಡಿದ ಮೋದಿ, ಒಂದಲ್ಲ, ಹತ್ತು ಬಾರಿ ಭಾರತ್‌ ಮಾತಾ ಕಿ ಜೈ ಎನ್ನುವೆ. “ಕಾಂಗ್ರೆಸ್‌ನ ನಾಮ್‌ಧಾರ್‌ ನಾನು ಭಾರತ್‌ ಮಾತಾ ಕಿ ಜೈ ಎಂದು ಭಾಷಣ ಆರಂಭಿಸಬಾರದು ಎಂದು ಫ‌ತ್ವಾ ಹೊರಡಿಸಿದ್ದಾರೆ. ಹೀಗಾಗಿ ಇಲ್ಲಿ ಸೇರಿರುವ ಲಕ್ಷಾಂತರ ಜನರ ನಡುವೆ ಅವರ ಫ‌ತ್ವಾವನ್ನು ಹತ್ತು ಬಾರಿ ಭಾರತ್‌ ಮಾತಾ ಕಿ ಜೈ ಎನ್ನುವ ಮೂಲಕ ಉಲ್ಲಂ ಸುತ್ತಿದ್ದೇನೆ’ ಎಂದು ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಭಾರತ್‌ ಮಾತಾ ಕಿ ಜೈ ಎಂಬ ಘೋಷಣೆಯನ್ನೇ ಬಳಕೆ ಮಾಡುತ್ತಿದ್ದರು. ನಮ್ಮ ಸೈನಿಕರೂ ಸರ್ಜಿಕಲ್‌ ದಾಳಿ ವೇಳೆ ಅದನ್ನೇ ಹೇಳುತ್ತಾರೆ. ಆದರೆ ಭಾರತ ಮಾತೆಯ ಘೋಷಣೆ ಮಾಡಬಾರದು ಎಂದು ಲಜ್ಜೆಯಿಲ್ಲದೆ ಕಾಂಗ್ರೆಸ್‌ ಅಧ್ಯಕ್ಷರು ಹೇಳುತ್ತಾರೆ ಎಂದು ಪ್ರಧಾನಿ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next