Advertisement

karseva ನೆನಪು: ಕಾಡಿಗೆ ಬಿಟ್ಟರು, ಬೀಡಿ ಫ್ಯಾಕ್ಟರಿಯಲ್ಲಿ ಕೂಡಿಟ್ಟರು!

12:10 AM Jan 10, 2024 | Team Udayavani |

ಎನ್‌.ಶಂಕ್ರಪ್ಪ, ರಾಯಚೂರು
ವಿಶ್ವ ಹಿಂದೂ ಪರಿಷತ್‌ ಮೂಲಕ ಬೆಳೆದು ಬಂದವರು ವಿಧಾನ ಪರಿಷತ್‌ ಮಾಜಿ ಸದಸ್ಯ ರಾಯಚೂರಿನ ಎನ್‌.ಶಂಕ್ರಪ್ಪ . 1989ರಲ್ಲಿ ಹುಮನಾಬಾದ್‌ನಲ್ಲಿ ನಡೆದ ರಥಯಾತ್ರೆಯಲ್ಲಿ ತೆರಳಿ ಪಾಲ್ಗೊಂಡಿದ್ದರು. ಅನಂತರ
ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿ ಬಳಿಕ ಬಿಜೆಪಿಯಿಂದ ವಿಧಾನ ಪರಿಷತ್‌ ಪ್ರವೇಶಿಸಿದ್ದರು. ಕರಸೇವೆಗೆ ರಾಯಚೂರಿನಿಂದ ತೆರಳಿದ ಪ್ರಮುಖ ನಾಯಕರೂ ಹೌದು.

Advertisement

ವಿಶ್ವ ಹಿಂದೂ ಪರಿಷತ್‌ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಕರಸೇವೆಗೆ ಕರೆ ನೀಡಿದಾಗ ನಮಗೂ ಪಾಲ್ಗೊಳ್ಳುವ ಹುಮ್ಮಸ್ಸು ಮೂಡಿತ್ತು. ಅವಿಭಜಿತ ರಾಯಚೂರು ಜಿಲ್ಲೆಯಿಂದ ಸುಮಾರು 42 ಜನ ಅಯೋಧ್ಯೆಗೆ ತೆರಳಿದ್ದೆವು. ಆದರೆ ಇನ್ನೇನು ಗಮ್ಯಸ್ಥಾನ ತಲುಪಬೇಕು ಎನ್ನುವಷ್ಟರಲ್ಲಿ ಪೊಲೀಸರು ನಮ್ಮನ್ನು ತಡೆದು ಬಂ ಧಿಸಿದರು. ಎರಡು ದಿನಗಳ ಕಾಲ ಉತ್ತರಪ್ರದೇಶದ ಕಮಲಾ ಪುರ ಎಂಬ ಗ್ರಾಮದ ಹಾಳು ಬಿದ್ದ ಬೀಡಿ ಫ್ಯಾಕ್ಟರಿಯಲ್ಲಿ ನಮ್ಮನ್ನೆಲ್ಲ ಕೂಡಿ ಹಾಕಿದ್ದರು.

ಆ ದಿನಗಳು ಇಂದಿಗೂ ನಮ್ಮ ಕಣ್ಣಿಗೆ ಕಟ್ಟಿದಂತಿವೆ. ದೇಶದಲ್ಲಿ ಕೆಲವು ನಾಯಕರ ನೇತೃತ್ವದಲ್ಲಿ ಕರಸೇವೆಗೆ ದೊಡ್ಡ ಮಟ್ಟದ ಯೋಜನೆ ರೂಪಿಸಲಾಗಿತ್ತು. ಅದಕ್ಕೆ ದಿನಾಂಕ ಕೂಡ ನಿಗದಿಪಡಿಸಿ ವಿಶ್ವ ಹಿಂದೂ ಪರಿಷತ್‌ ಪ್ರಕಟನೆ ನೀಡಿತು. ಘಟನೆಯಲ್ಲಿ ಗೋಲಿಬಾರ್‌, ಲಾಠಿಚಾರ್ಜ್‌ ಸೇರಿದಂತೆ ಯಾವುದೇ ಆಪತ್ತು ಎದುರಾದರೂ ಅದಕ್ಕೆ ನಾವೇ ಹೊಣೆ ಎನ್ನುವ ಮುದ್ರಿತ ಒಪ್ಪಂದ ಪತ್ರಕ್ಕೆ ಸಹಿ ಹಾಕಿ ಕರಸೇವೆಗೆ ಸಜ್ಜಾದೆವು. ಆಗ ರಾಯಚೂರು-ಕೊಪ್ಪಳ ಎರಡೂ ಅವಿಭಜಿತ ಜಿಲ್ಲೆಯಾಗಿದ್ದವು. ರಾಯಚೂರು, ಗಂಗಾವತಿ, ಕೊಪ್ಪಳ, ಲಿಂಗಸೂಗೂರು ಸೇರಿದಂತೆ ವಿವಿಧೆಡೆಯಿಂದ ಸುಮಾರು 42 ಜನ ತೆರಳಿದ್ದೆವು.

ರೈಲು ಮೂಲಕ ಮಧ್ಯಪ್ರದೇಶದ ಇಟಾರ್ಸಿ ಹಾಗೂ ಅಲ್ಲಿಂದ ಚಿತ್ರಕೂಟ ಎನ್ನುವಲ್ಲಿಗೆ ಬಸ್‌ಗಳ ಮೂಲಕ ತೆರಳಿ ವಾಸ್ತವ್ಯ ಮಾಡಿದೆವು. ಚಿತ್ರಕೂಟ ಎನ್ನುವುದು ಶ್ರೀರಾಮ ಓಡಾಡಿದ ಪ್ರದೇಶ ಎಂಬ ಹಿನ್ನೆಲೆ ಹೊಂದಿತ್ತು. ಅಲ್ಲಿ ಅನೇಕ ದೇವಸ್ಥಾನಗಳಿವೆ. ಹೀಗಾಗಿ ಅದೇ ಸ್ಥಳದಲ್ಲಿ ಕರ್ನಾಟಕದ ಸುಮಾರು 1700 ಕರಸೇವಕರು ಜಮಾಗೊಂಡೆವು. 1990ರ ಅಕ್ಟೋಬರ್‌ 30ರಂದು ಕರಸೇವೆ ದಿನಾಂಕ ನಿಗದಿಯಾಗಿತ್ತು. ಆದರೆ ಇನ್ನೇನು ಅಲ್ಲಿಗೆ ಹೋಗಬೇಕು ಎನ್ನುವಷ್ಟರಲ್ಲಿ ಉತ್ತರ ಪ್ರದೇಶದ ಪೊಲೀಸರು ನಮ್ಮನ್ನು ಸುತ್ತುವರಿದರು. ಎಲ್ಲರನ್ನೂ ಬಂ ಧಿಸಿ ಮಾರ್ಕುಂಡಿ ಎನ್ನುವ ಊರಿನ ಸಮೀಪದ ಅಡವಿಯಲ್ಲಿ ಬಿಟ್ಟರು. ಕೇವಲ ಅರ್ಧ ಕಿ.ಮೀ. ದೂರದಲ್ಲಿ ಮಾರ್ಕುಂಡಿ ಊರು ಇತ್ತು. ಆಗ ವಿದ್ಯುತ್‌ ಸೌಲಭ್ಯವೇ ಇಲ್ಲದ ಕಾರಣಕ್ಕೆ ನಮಗೆ ಅಲ್ಲಿ ಗ್ರಾಮವಿದೆ ಎನ್ನುವ ಸುಳಿವು ಸಿಗಲಿಲ್ಲ. ಹೀಗಾಗಿ ಇಡೀ ರಾತ್ರಿ ಚಳಿಯಲ್ಲೇ ಕಳೆದೆವು.

ಬೆಳಗ್ಗೆ ಗ್ರಾಮಸ್ಥರಿಗೆ ಸುದ್ದಿ ತಲುಪುತ್ತಿದ್ದಂತೆ ಸಾಕಷ್ಟು ಜನ ಅಲ್ಲಿಗೆ ಬಂದು ಕುಶಲೋಪರಿ ವಿಚಾರಿಸಿದರು. ಆಗ ದಕ್ಷಿಣ ಭಾರತದವರನ್ನು ಮದ್ರಾಸಿ ಜನ ಎನ್ನುತ್ತಿದ್ದರು. ನಮ್ಮ ಪ್ರಭು ಶ್ರೀ ರಾಮನಿಗೋಸ್ಕರ ಬಹಳ ದೂರದಿಂದ ಬಂದಿದ್ದೀರಿ ಎಂದು ಆಪ್ಯಾಯತೆಯಿಂದ ನೋಡಿಕೊಂಡರು. ಕೂಡಲೇ ದೊಡ್ಡ ಪಾತ್ರೆಗಳಲ್ಲಿ ಕಡಲೆ ಕಾಳುಗಳನ್ನು ಬೇಯಿಸಿ ಉಪಾಹಾರ ಮಾಡಿ ಕೊಟ್ಟರು. ಪಕ್ಕದಲ್ಲೇ ಇದ್ದ ದೊಡ್ಡ ಕೆರೆಯಲ್ಲಿ ಎಲ್ಲರೂ ಸ್ನಾನ ಮಾಡಿದೆವು. ಅಷ್ಟರಲ್ಲೇ ಗ್ರಾಮಸ್ಥರೆಲ್ಲ ಅಕ್ಕಿ ಬೇಳೆ ಕುಂಬಳಕಾಯಿ ಸೇರಿದಂತೆ ದವಸ ಧಾನ್ಯ ಸಂಗ್ರಹಿಸಿ ಊಟದ ವ್ಯವಸ್ಥೆ ಮಾಡಿದರು. ಹೇಗಾದರೂ ಸರಿ ಅಯೋಧ್ಯೆ ತಲುಪಬೇಕು ಎನ್ನುವುದೊಂದೇ ನಮ್ಮ ಮುಖ್ಯ ಧ್ಯೇಯವಾಗಿತ್ತು. ನಮ್ಮ ಉದ್ದೇಶ ಕಿಂಚಿತ್ತೂ ಕುಗ್ಗಿರಲಿಲ್ಲ.

Advertisement

ಆದರೆ ಪರಿಸ್ಥಿತಿ ಬಹಳ ಸೂಕ್ಷ್ಮವಾಗುತ್ತಿರುವುದನ್ನು ಅರಿತ ಉತ್ತರ ಪ್ರದೇಶ ಪೊಲೀಸರು ನಮ್ಮನ್ನೆಲ್ಲ ಸಮೀಪದ ಕಮಲಾಪುರ ಗ್ರಾಮದಲ್ಲಿ ನಿಂತು ಹೋಗಿದ್ದ ಬೀಡಿ ಫ್ಯಾಕ್ಟರಿಯಲ್ಲಿ ಕೂಡಿ ಹಾಕಿದರು. ಇದೆಲ್ಲ ಅ.29ರಂದು ನಡೆದಿತ್ತು. ಮರುದಿನ ಗುಂಬಜ್‌ಗಳ ಮೇಲೆ ಹತ್ತಿ ಕೋಲ್ಕತಾ ಮೂಲದ ಕೊಠಾರಿ ಸಹೋದರರು ಜಯ ಘೋಷ ಮಾಡಿದ್ದಾರೆ. ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ತಿಳಿಯಿತು.

ಎರಡು ದಿನ ನಮ್ಮನ್ನು ಅಲ್ಲಿಯೇ ಉಳಿಸಿಕೊಂಡು ಮರಳಿ ಕಳುಹಿಸಿದರು. ನಾವು ಅಯೋಧ್ಯೆಗೆ ಹೋಗಬೇಕು ಎಂದರೂ ಪೊಲೀಸರು ಅವಕಾಶ ಕೊಡಲಿಲ್ಲ. 1992ರ ವೇಳೆಗೆ ದೇಶದಲ್ಲಿ ಅಯೋಧ್ಯೆ ವಿಚಾರ ಬಹಳ ತೀವ್ರತೆ ಪಡೆದುಕೊಂಡಿತು. ಅನಂತರ ನಡೆದುದೆಲ್ಲವೂ ಇತಿಹಾಸ. ನಮ್ಮ ಕಣ್ಣೆದುರಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಗೊಂಡಿರುವುದು ಬಹಳ ಖುಷಿ ಕೊಡುತ್ತಿದೆ. ಅಂದು ನಾವು ಮಾಡಿದ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ.

ಉತ್ತರ ಪ್ರದೇಶದ ಪೊಲೀಸರು ಎಲ್ಲರನ್ನೂ ಬಂ ಧಿಸಿ ಮಾರ್ಕುಂಡಿ ಎನ್ನುವ ಊರಿನ ಸಮೀಪದ ಅಡವಿಯಲ್ಲಿ ಬಿಟ್ಟರು. ಕೇವಲ ಅರ್ಧ ಕಿಮೀ ದೂರದಲ್ಲಿ ಮಾರ್ಕುಂಡಿ ಊರು ಇತ್ತು. ಆಗ ವಿದ್ಯುತ್‌ ಸೌಲಭ್ಯವೇ ಇಲ್ಲದ ಕಾರಣಕ್ಕೆ ನಮಗೆ ಅಲ್ಲಿ ಗ್ರಾಮವಿದೆ ಎನ್ನುವ ಸುಳಿವು ಸಿಗಲಿಲ್ಲ. ಹೀಗಾಗಿ ಇಡೀ ರಾತ್ರಿ ಚಳಿಯಲ್ಲೇ ಕಳೆದೆವು. ಬೆಳಗ್ಗೆ ಗ್ರಾಮಸ್ಥರಿಗೆ ಸುದ್ದಿ ತಲುಪುತ್ತಿದ್ದಂತೆ ಸಾಕಷ್ಟು ಜನ ಅಲ್ಲಿಗೆ ಬಂದು ಕುಶಲೋಪರಿ ವಿಚಾರಿಸಿದರು.

ನಿರೂಪಣೆ: ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next