ಮಂಗಳೂರು: ತುಳುನಾಡ ಕಾರ್ಣಿಕ ದೈವ ಕಲ್ಲುರ್ಟಿಯ ಜೀವನ ಚರಿತ್ರೆಯ ಕಥೆಯನ್ನೊಳಗೊಂಡ “ಕಾರ್ನಿಕೊದ ಕಲ್ಲುರ್ಟಿ’ ತುಳು ಸಿನೆಮಾ ಡಿ. 3ರಿಂದ ಕರಾವಳಿಯ ವಿವಿಧ ಸಿನೆಮಾ ಮಂದಿರದಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ, ನಿರ್ದೇಶಕ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಭಾರತ್‌ಮಾಲ್‌ನ ಬಿಗ್‌ಸಿನೆಮಾಸ್‌ನಲ್ಲಿ ಬೆಳಗ್ಗೆ 9.30ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್ ಚಿತ್ರ ಬಿಡುಗಡೆ ಮಾಡಲಿದ್ದಾರೆ. ಉಡುಪಿಯ ಅಲಂಕಾರ್, ಮಂಗಳೂರಿನ ರೂಪಾವಾಣಿ ಸೇರಿದಂತೆ ಉಭಯ ಜಿಲ್ಲೆಗಳ ವಿವಿಧ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದವರು ವಿವರಿಸಿದರು.
ಕಲ್ಲುರ್ಟಿ-ಕಲ್ಕುಡರ ಹುಟ್ಟು, ಬಾಲ್ಯ ಹಾಗೂ ಬಳಿಕ ಅವರು ಅನ್ಯಾಯಕ್ಕೊಳಗಾಗಿ ನೊಂದು ಮನುಷ್ಯ ರೂಪ ತ್ಯಜಿಸಿ, ಮಾಯೆಗೆ ಹೋಗಿ ಅರಸನ ವಿರುದ್ಧ ಸೇಡು ತೀರಿಸಿಕೊಂಡು ದೈವಗಳಾಗಿ ನೆಲೆಯಾಗುವವರೆಗಿನ ಕಥೆಯನ್ನು ಸಿನೆಮಾದಲ್ಲಿ ಅಭಿವ್ಯಕ್ತಪಡಿಸಲಾಗಿದೆ ಎಂದರು.
ಇದನ್ನೂ ಓದಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 8 ರೂ. ಇಳಿಕೆ
ಕಾರ್ಕಳದ ಬಜಗೋಳಿಯಲ್ಲಿ ಸಂಪೂರ್ಣ ಚಿತ್ರೀಕರಣ ನಡೆದಿದೆ. ನಟ ರಮೇಶ್ ಭಟ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಛಾಯಾಗ್ರಾಹಕ ಉಮಾಪತಿ ಅವರು ಛಾಯಾಗ್ರಹಣ ಮಾಡಿದ್ದು, ಗಂಗಾಧರ ಕಿರೋಡಿಯನ್ ಚಿತ್ರಕಥೆ ಬರೆದಿದ್ದಾರೆ ಎಂದರು.
ಬಾಕಿಲಗುತ್ತು ದೈವಸ್ಥಾನದ ಆಡಳಿತ ಮೊಕ್ತೇಸರ ವಸಂತ ಪೂಜಾರಿ, ನಟ ಪ್ರಶಾಂತ್ ಜೆ.ಕೆ., ನಟಿ ಶಾಲಿನಿ ಮರಕಡ, ರಾಜಗೋಪಾಲ ರೈ ಉಪಸ್ಥಿತರಿದ್ದರು.