Advertisement
ಕೇರಳದ ಕಾಸರಗೋಡಿನ ಕುಂಟಾರು ಗ್ರಾಮದ 25 ವರ್ಷದ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸಯನೈಡ್ ಮಾತ್ರೆ ನೀಡಿ ಕೊಲೆ ಮಾಡಿದ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜೂ. 20ರಂದು ಸಾಬೀತಾಗಿದ್ದು, ಜೂ. 24ರಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರಾದ ಸಯೀನುನ್ನಿಸಾ ಘೋಷಿಸಿದರು. ಇದರೊಂದಿಗೆ ಸುದೀರ್ಘ 9 ವರ್ಷಗಳ ವಿಚಾರಣೆ ಮುಕ್ತಾಯಗೊಂಡಿದೆ.
ಕೊಲೆ ಅಪರಾಧಕ್ಕಾಗಿ (ಐಪಿಸಿ ಸೆ. 302) ಜೀವಾವಧಿ ಶಿಕ್ಷೆ, 25,000 ರೂ.ದಂಡ, ಅಪಹರಣಕ್ಕೆ (ಐಪಿಸಿ 366) 10 ವರ್ಷ ಶಿಕ್ಷೆ, 5,000 ರೂ. ದಂಡ, ಅತ್ಯಾಚಾರ (ಐಪಿಸಿ 376) ಅಪರಾಧಕ್ಕೆ 7 ವರ್ಷ ಸಜೆ, 5,000 ರೂ. ದಂಡ, ವಿಷ ಪದಾರ್ಥ (ಸಯನೈಡ್) ಉಣಿಸಿದ (ಐಪಿಸಿ 328) ಅಪರಾಧಕ್ಕೆ 10 ವರ್ಷ ಶಿಕ್ಷೆ, 5,000 ರೂ. ದಂಡ, ಚಿನ್ನಾಭರಣ ಸುಲಿಗೆ (ಐಪಿಸಿ 392) ಅಪರಾಧಕ್ಕೆ 5 ವರ್ಷ ಕಠಿನ ಸಜೆ, 5,000 ರೂ. ದಂಡ, ವಿಷ ಉಣಿಸಿ ಸುಲಿಗೆ ಮಾಡಿದ (ಐಪಿಸಿ 394) ಅಪರಾಧಕ್ಕೆ 10 ವರ್ಷ ಕಠಿನ ಸಜೆ, 5,000 ರೂ. ದಂಡ, ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ (ಐಪಿಸಿ 417) ಅಪರಾಧಕ್ಕೆ 1 ವರ್ಷ ಶಿಕ್ಷೆ, ಸಾಕ್ಷ್ಯ ನಾಶ (ಐಪಿಸಿ 201) ಅಪರಾಧಕ್ಕೆ 7 ವರ್ಷ ಸಜೆ, 5,000 ರೂ. ದಂಡ ಶಿಕ್ಷೆಯನ್ನು ವಿಧಿಸಲಾಗಿದೆ. ಕೊನೆಯ ಪ್ರಕರಣದಲ್ಲಿ ಮೃತ ಯುವತಿಯ ವಿಸ್ರಾ ಪರೀಕ್ಷೆಯಲ್ಲಿ ಸಯನೈಡ್ ಅಂಶ ಇರುವುದು ದೃಢವಾಗಿತ್ತು. 46 ಸಾಕ್ಷಿಗಳ ವಿಚಾರಣೆ, 89 ದಾಖಲಾತಿಗಳನ್ನು ಹಾಗೂ 31 ಸೊತ್ತುಗಳನ್ನು ಹಾಜರು ಪಡಿಸಲಾಗಿತ್ತು. ಯುವತಿಯಿಂದ ಸುಲಿಗೆ ಮಾಡಿದ್ದ ಚಿನ್ನಾಭರಣಗಳ ಪೈಕಿ ಒಂದು ಪೆಂಡೆಂಟ್ ಮೋಹನನ 2ನೇ ಪತ್ನಿಯ ಮನೆಯಿಂದ ವಶಪಡಿಸಿದ್ದು, ಅದನ್ನು ಕುಂಟಾರಿನ ಯುವತಿಯ ತಾಯಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಅವರು ಈ ಮೊದಲು ಹಾಗೂ ಪ್ರಸ್ತುತ ಜಯರಾಮ ಶೆಟ್ಟಿ ವಾದಿಸಿದ್ದರು.
Related Articles
Advertisement
5ರಲ್ಲಿ ಮರಣ ದಂಡನೆ, 10ರಲ್ಲಿ ಜೀವಾವಧಿ, 5ರಲ್ಲಿ ಖುಲಾಸೆಸಯನೈಡ್ ಮೋಹನನ ವಿರುದ್ಧ ದಾಖಲಾದ ಒಟ್ಟು 20 ಯುವತಿಯರ ಕೊಲೆ ಪ್ರಕರಣಗಳ ಪೈಕಿ 5ರಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ 1 ಪ್ರಕರಣದಲ್ಲಿ ಹೈಕೋರ್ಟ್ ಮರಣ ದಂಡನೆಯನ್ನು ದೃಢೀಕರಿಸಿದೆ. 1ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ. ಇನ್ನೊಂದು ಪ್ರಕರಣವನ್ನು ರದ್ದು ಪಡಿಸಿದೆ. ಇನ್ನೆರಡು ಪ್ರಕರಣಗಳು ಹೈಕೋರ್ಟ್‌ನ ತೀರ್ಮಾನಕ್ಕೆ ಬಾಕಿ ಇವೆ. 10 ಪ್ರಕರಣಗಳಲ್ಲಿ ಜೀವಾವಧಿ ಸಜೆಯಾಗಿದೆ. 5 ಪ್ರಕರಣಗಳು ಖುಲಾಸೆಗೊಂಡಿವೆ. ಲಭ್ಯ ಮಾಹಿತಿ ಪ್ರಕಾರ 5 ಪ್ರಕರಣಗಳಲ್ಲಿ ಮರಣ ದಂಡನೆ ಮತ್ತು 10ರಲ್ಲಿ ಜೀವಾವಧಿ ಶಿಕ್ಷೆ ಆಗುವುದು ರಾಜ್ಯದಲ್ಲಿ ಇದೆ ಮೊದಲು ಎನ್ನಲಾಗಿದೆ.