Advertisement

ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ನಂ.ವನ್‌ ಗುರಿ: ಶೆಟ್ಟರ್‌

08:58 PM Jun 27, 2020 | Sriram |

ಬೆಂಗಳೂರು: ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲೇ ನಂ. ವನ್‌ ಸ್ಥಾನದಲ್ಲಿರಬೇಕು ಎಂಬುದು ಸರಕಾರದ ಗುರಿ ಆಗಿದ್ದು, ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

Advertisement

ವಿಜಯನಗರದ ಕಾಶಿಯಾ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೋವಿಡ್‌ – 19 ಉದ್ಯೋಗ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೈಗಾರಿಕೆ ಕ್ಷೇತ್ರದಲ್ಲಿ ಮುಂದುವರಿದಿರುವ ದೇಶದ ಪ್ರಮುಖ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿದೆ.

ಕೈಗಾರಿಕೆಗಳ ಬೆಳವಣಿಗೆಗೆ ಸರಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಮುಂದಿನ ದಿನಗಳಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಮತ್ತಷ್ಟು ಮಹತ್ವದ ಬದಲಾವಣೆಗಳನ್ನು ತರಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಹೊರತುಪಡಿಸಿ ಉಳಿದ ನಗರಗಳಿಗೆ ಕೈಗಾರಿಕೆಗಳು ಹೋಗಬೇಕು ಎಂಬುವುದು ಸರಕಾರದ ಉದ್ದೇಶವಾಗಿದೆ. ಆ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು.

ಕಾಯ್ದೆಗಳನ್ನು ಸರಳೀಕೃತಗೊಳಿಸುವ ಜತೆಗೆ ಉದ್ಯಮಗಳನ್ನು ಕೂಡ ಸೆಳೆಯುವ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.

Advertisement

ರಾಜ್ಯದಲ್ಲಿ ಸುಮಾರು 7ಲಕ್ಷದ 85 ಸಾವಿರ ಸಣ್ಣ ಕೈಗಾರಿಕಾ ಯೂನಿಟ್‌ಗಳಿದ್ದು, 80 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಜತೆಗೆ 50 ಲಕ್ಷ ಜನರು ಇದನ್ನು ಅವಲಂಬಿತರಾಗಿದ್ದಾರೆ. ದೇಶದ ಆರ್ಥಿಕ ಪ್ರಗತಿಗೆ ತನ್ನದೇ ಆದಂತಹ ಕೊಡುಗೆ ನೀಡುತ್ತಿದೆ ಎಂದರು.

ಕೈಗಾರಿಕಾ ಉದ್ಯಮಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆ (2002)ಕ್ಕೆ ತಿದ್ದುಪಡಿ ತರಲಾಗುತ್ತದೆ. ಟ್ರೇಡ್‌ ಅನುಮತಿಗೆ ಅಲೆಯುವುದು ಸಹಿತ ಇನ್ನಿತರ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು. ಭೂಸುಧಾರಣೆ ಕಾಯ್ದೆ ತಿದ್ದು ಪಡಿಯಿಂದ ಹಲವು ರೀತಿಯ ಸಮಸ್ಯೆಗಳು ಬಗೆಹರಿಯಲಿವೆ ಎಂದರು.

ಟೌನ್‌ ಶಿಫ್‌ ನಿರ್ಮಾಣ
ಟೌನ್‌ಶಿಫ್‌ ನಿರ್ಮಾಣದ ಸಂಬಂಧದ ಕೂಗು ಕೇಳಿ ಬಂದಿದೆ. ಈ ಸಂಬಂಧ ನಗರಾಭಿವೃದ್ಧಿ ಸಚಿವರೊಂದಿಗೆ ಮಾತುಕತೆ ನಡೆಸಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಾಸಿಯಾ ಅಧ್ಯಕ್ಷ ಆರ್‌. ರಾಜು ಮಾತನಾಡಿ, ಸಣ್ಣ ಕೈಗಾರಿಕಾ ಕ್ಷೇತ್ರಕ್ಕೆ ಕೇಂದ್ರ ಸರಕಾರ 3 ಲಕ್ಷ ಕೋಟಿ ರೂ. ಅನುದಾನ ನೀಡಿದ್ದು, ಇನ್ನೂ ತಲುಪಬೇಕಾದವರ ಕೈಸೇರಿಲ್ಲ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು. ಹಾಗೆಯೇ ಸಣ್ಣ ಕೈಗಾರಿಕೆಗಳ ಬೆಳವಣಿಗೆಗಾಗಿ ಸರಕಾರ 50 ಕೋ. ರೂ. ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next