ಬೆಂಗಳೂರು: ಸೋಮವಾರ ರಾಜ್ಯದ ವಿವಿಧೆಡೆ 15 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಸೋಂಕಿಗೊಳಗಾದವರ ಸಂಖ್ಯೆ 247 ಕ್ಕೇರಿದೆ.
ಇಂದಿನ 15 ಮಂದಿ ಸೋಂಕಿತರ ಪೈಕಿ ಒಬ್ಬರು ತೀವ್ರ ಉಸಿರಾಟ ಸಮಸ್ಯೆ , ಒಬ್ಬರು ದೆಹಲಿ ಪ್ರಯಾಣ ಹಿನ್ನೆಲೆ ಹೊಂದಿದ್ದು ಬಾಕಿ 13 ಮಂದಿ ಸೋಂಕಿತರ ಸಂಪರ್ಕ ಹೊಂದಿದವರು.
ದೆಹಲಿ ಪ್ರಯಾಣ ಹಿನ್ನೆಲೆ ಹೊಂದಿದ್ದ ಹುಬ್ಬಳಿಯ ಸೋಂಕಿತನ ಸಂಪರ್ಕ ಹೊಂದಿದ್ದ ನಾಲ್ಕು ಮಂದಿಗೆ ಸೋಂಕು ತಗುಲಿದೆ. (ಒಂದು ಹೆಣ್ಣು, ಮೂವರು ಗಂಡು)
ಉಳಿದಂತೆ ಮಂಡ್ಯದಲ್ಲಿ ಮೂವರಿಗೆ, ಬಾಗಲಕೋಟೆ ಒಬ್ಬರಿಗೆ, ಬೀದರ್ ಇಬ್ಬರಿಗೆ, ಬೆಳಗಾವಿ ಮೂವರಿಗೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ಪರೀಕ್ಷೆಯಿಂದ ಖಚಿತವಾಗಿದೆ. ಇವರೆಲ್ಲರನ್ನು ನಿಗದಿತ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ ಇಲ್ಲಿಯವರೆಗೂ ಐದು ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 247 ಜನರಲ್ಲಿ 59 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.