Advertisement

ಕರ್ನಾಟಕಕ್ಕೆ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ

05:52 PM Dec 16, 2021 | Team Udayavani |

ನವದೆಹಲಿ: ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ-2021’ರಡಿ, ಉತ್ತಮ ಪರ್ಫಾಮೆನ್ಸ್ ವಿಭಾಗದಲ್ಲಿ (ಗ್ರೂಪ್-1) ಕರ್ನಾಟಕ ಪ್ರಥಮ ಸ್ಥಾನ ಪಡೆದಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ ಇಂಧನ ಉಳಿತಾಯಕ್ಕೆ ಕೈಗೊಂಡ ಕ್ರಮಗಳಿಗೆ ಈ ಗೌರವ ದೊರೆತಿದೆ.

Advertisement

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ ಪ್ರಯುಕ್ತ, ನವದೆಹಲಿಯಲ್ಲಿ ಮಂಗಳವಾರ (ಡಿಸೆಂಬರ್ 14) ನಡೆದ ಕಾರ್ಯಕ್ರಮದಲ್ಲಿ, ಕೇಂದ್ರ ವಿದ್ಯುತ್ ಮತ್ತು ನವ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಆರ್.ಕೆ.ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ ಮತ್ತು ಕೆ.ಆರ್.ಇ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಅವರು ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ವಿದ್ಯುತ್ ಮತ್ತು ಬೃಹತ್ ಕೈಗಾರಿಕೆ ರಾಜ್ಯ ಖಾತೆ ಸಚಿವರಾದ ಕೃಷನ್ ಪಾಲ್ ಗುರ್ಜರ್ ಉಪಸ್ಥಿತರಿದ್ದರು.

ಇಂಧನ ಕ್ಷಮತೆ ಕಾರ್ಯಕ್ರಮಗಳಲ್ಲಿ ಕರ್ನಾಟಕ ಸಾಧಿಸಿರುವ ಪ್ರಗತಿಗೆ ಈ ಗೌರವ ದೊರೆತಿದೆ. ರಾಜ್ಯ ಇಂಧನ ಕ್ಷಮತೆ ಇಂಡೆಕ್ಸ್ 2020 ರಲ್ಲಿ, ಕರ್ನಾಟಕವು 100 ರಲ್ಲಿ 70 ಅಂಕ ಗಳಿಸಿದೆ. ಕೇಂದ್ರ ಇಂಧನ ಸಚಿವಾಲಯದಡಿಯ ಬ್ಯೂರೋ ಆಫ್ ಎನರ್ಜಿ ಎಫೀಶಿಯನ್ಸಿ, ಪ್ರತಿ ವರ್ಷ ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ ಪ್ರಯುಕ್ತ ಈ ಪ್ರಶಸ್ತಿ ನೀಡುವ ಮೂಲಕ ಇಂಧನ ಉಳಿತಾಯಕ್ಕೆ ಕೊಡುಗೆ ನೀಡುತ್ತಿರುವ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತದೆ.

ಈ ಕುರಿತು ಮಾತನಾಡಿದ ಇಂಧನ ಸಚಿವ ವಿ.ಸುನಿಲ್ ಕುಮಾರ್, “ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ-2021’ರಡಿ, ಕರ್ನಾಟಕ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಬ್ಯೂರೋ ಆಫ್ ಎನರ್ಜಿ ಎಫೀಶಿಯೆನ್ಸಿಯಿಂದ ನೀಡಿರುವ ಈ ಪ್ರಶಸ್ತಿಯು, ಹಸಿರು ಇಂಧನ, ಪರಿಸರ ಸಂರಕ್ಷಣೆ, ಇಂಧನ ಕ್ಷಮತೆಗಾಗಿ ಕೆ.ಆರ್.ಇ.ಡಿ.ಎಲ್ ನಿಂದ ಕೈಗೊಂಡ ಕ್ರಮಗಳ ಪ್ರತಿಬಿಂಬವಾಗಿದೆ” ಎಂದು ಶ್ಲಾಘಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ, “ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 10 ಅಂಕಗಳು ಹೆಚ್ಚಾಗಿವೆ. ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ, ಇಂಧನ ಕ್ಷಮತೆಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಗೌರವ ಉತ್ತೇಜನ ನೀಡಲಿದೆ. ನವೀಕರಿಸಬಹುದಾದ ಇಂಧನ ಬಳಕೆ ಪ್ರಮಾಣವನ್ನು ಹೆಚ್ಚಿಸಲು ಅನೇಕ ಕ್ರಮಗಳನ್ನು ವಹಿಸಲಾಗಿದೆ” ಎಂದು ತಿಳಿಸಿದರು.

Advertisement

ಪ್ರಶಸ್ತಿ

ಕೇಂದ್ರ ಇಂಧನ ಸಚಿವಾಲಯದಿಂದ 1991 ರಿಂದ ಈ ಪ್ರಶಸ್ತಿ ನೀಡಲು ಆರಂಭವಾಗಿದ್ದು, ಇಂಧನ ಉಳಿತಾಯದಲ್ಲಿ ಉತ್ತಮ ಕ್ರಮ ಕೈಗೊಂಡ ಸಂಸ್ಥೆಗಳಿಗೆ ನೀಡಲಾಗುತ್ತದೆ. ಈ ವರ್ಷವೂ ಇಂಧನ ಕ್ಷಮತೆಯಲ್ಲಿ ಸಾಧನೆ ತೋರಿದ ಕೈಗಾರಿಕಾ ಸಂಸ್ಥೆ, ಸಂಘಟನೆಗಳನ್ನು ಗುರುತಿಸಲು ಪ್ರಶಸ್ತಿ ನೀಡಲಾಗಿದೆ.

ಕೆ.ಆರ್.ಇ.ಡಿ.ಎಲ್

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳ ಅನುಷ್ಠಾನ, ಪ್ರೋತ್ಸಾಹಕ್ಕಾಗಿ ಕರ್ನಾಟಕ ಸರ್ಕಾರದ ನೋಡಲ್ ಏಜೆನ್ಸಿಯಾಗಿ 1996 ರಲ್ಲಿ ಕೆ.ಆರ್.ಇ.ಡಿ.ಎಲ್ ಸ್ಥಾಪನೆಯಾಯಿತು. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಂಸ್ಥೆಯು ಏಜೆನ್ಸಿಗಳೊಂದಿಗೆ ಸಹಯೋಗ ಮಾಡುವುದರೊಂದಿಗೆ, ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿ ಖಾಸಗಿ ಕ್ಷೇತ್ರಕ್ಕೆ, ಸರ್ಕಾರಕ್ಕೆ, ಖಾಸಗಿ ಇಂಧನ ಉತ್ಪಾದಕರೊಂದಿಗೆ ಸಮನ್ವಯ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next